ಎನ್‍ಸಿಎಲ್‍ಟಿಯಿಂದ ‘ದಿವಾಳಿ’ ಘೋಷಣೆ ವಿರುದ್ಧ ಕಾನೂನು ಹೋರಾಟ : ನಸೀರ್ ಅಹ್ಮದ್

ಬೆಂಗಳೂರು : ಸಾಲ ಮರುಪಾವತಿಸಲು ವಿಫಲರಾಗಿದ್ದಾರೆ ಎಂಬ ಕಾರಣ ನೀಡಿ ರಾಷ್ಟ್ರೀಯ ಕಂಪನಿ ಕಾನೂನು ನ್ಯಾಯಮಂಡಳಿ(ಎನ್‍ಸಿಎಲ್‍ಟಿ)ಯ ಬೆಂಗಳೂರು ಪೀಠ ತನ್ನನ್ನು ‘ದಿವಾಳಿ’ ಎಂದು ಘೋಷಿಸಿರುವುದರ ವಿರುದ್ಧ ಕಾನೂನು ಹೋರಾಟ ನಡೆಸುವುದಾಗಿ ವಿಧಾನಪರಿಷತ್ ಸದಸ್ಯ ನಸೀರ್ ಅಹ್ಮದ್ ತಿಳಿಸಿದ್ದಾರೆ.
ಶನಿವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸ್ಕಾಟ್ಸ್ ಗಾರ್ಮೆಂಟ್ಸ್ ಲಿಮಿಟೆಡ್‍ನ ಸಾಲಕ್ಕೆ ಸಂಬಂಧಿಸಿದಂತೆ ವಾಸ್ತವವೆ ಬೇರೆ ಇದೆ. ಮಾಧ್ಯಮಗಳ ವರದಿಯಲ್ಲಿ 1,454 ಕೋಟಿ ರೂ. ಸಾಲದ ಮೊತ್ತವನ್ನು ನೋಡಿ ಆಶ್ಚರ್ಯವಾಯಿತು. ಅದೆಲ್ಲವೂ ಅಂಕೆ-ಸಂಖ್ಯೆಗಳ ಲೆಕ್ಕಾಚಾರವಷ್ಟೇ. ಅಷ್ಟೊಂದು ಪ್ರಮಾಣದ ಸಾಲವನ್ನು ಪಡೆಯಲು ನನ್ನಂಥವನಿಗೆ ಸಾಧ್ಯವೇ ಇಲ್ಲ ಎಂದು ಹೇಳಿದರು.
ನಾನು ಸ್ಕಾಟ್ಸ್ ಗಾರ್ಮೆಂಟ್ಸ್ ಸಂಸ್ಥೆಯನ್ನು ನಡೆಸುತ್ತಿದ್ದದ್ದು ಮತ್ತು ಅದು ನಷ್ಟಕ್ಕೆ ಒಳಗಾಗಿದ್ದು ನಿಜ. ಸುಮಾರು 16 ಸಾವಿರ ಕಾರ್ಮಿಕರಿಗೆ ಅದರಲ್ಲೂ ವಿಶೇಷವಾಗಿ ಮಹಿಳೆಯರಿಗೆ ಉದ್ಯೋಗ ಕೊಟ್ಟಿದೆ. ಆದರೆ, ಉದ್ಯಮದಲ್ಲಿನ ಕೆಲವು ಸಮಸ್ಯೆಗಳಿಂದಾಗಿ ನನ್ನ ಸಂಸ್ಥೆ ನಷ್ಟಕ್ಕೆ ಒಳಗಾಯಿತು ಎಂದು ನಸೀರ್ ಅಹ್ಮದ್ ತಿಳಿಸಿದರು.
ಎನ್‍ಸಿಎಲ್‍ಟಿ ನೀಡಿರುವ ಆದೇಶದ ವಿರುದ್ಧ ಮೇಲ್ಮನವಿ ಸಲ್ಲಿಸಿ, ಕಾನೂನು ಹೋರಾಟ ನಡೆಸಿ, ಗೆಲ್ಲುತ್ತೇನೆ ಎಂದು ನಸೀರ್ ಅಹ್ಮದ್ ವಿಶ್ವಾಸ ವ್ಯಕ್ತಪಡಿಸಿದರು.
ಸುನಿಲ್ ಕುಮಾರ್ ಅಗರ್ವಾಲ್ (ನ್ಯಾಯಾಂಗ ಸದಸ್ಯ) ಮತ್ತು ರಾಧಾಕೃಷ್ಣ ಶ್ರೀಪಾದ (ತಾಂತ್ರಿಕ ಸದಸ್ಯ) ಅವರನ್ನೊಳಗೊಂಡ ಎನ್‍ಸಿಎಲ್‍ಟಿಯ ಬೆಂಗಳೂರು ಪೀಠವು ಜೂ.8ರಂದು ಐಬಿಸಿ-2016ರ ಅಡಿಯಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಕೆನರಾ ಬ್ಯಾಂಕ್ ಮತ್ತು ಐಡಿಬಿಐ ಬ್ಯಾಂಕ್ ಸಲ್ಲಿಸಿದ ಅರ್ಜಿಯ ಮೇರೆಗೆ, ನಸೀರ್ ಅಹ್ಮದ್ ಹಾಗೂ ಅವರು ವ್ಯವಸ್ಥಾಪಕ ನಿರ್ದೇಶಕರಾಗಿದ್ದ ಕಂಪನಿಯ ಹಿಂದಿನ ನಿರ್ದೇಶಕರಾಗಿ ಸಾಲಕ್ಕೆ ವೈಯಕ್ತಿಕ ಖಾತರಿದಾರರಾಗಿದ್ದ ಅವರ ಪತ್ನಿ ನುಝತ್ ಆಯಿಷಾ ನಸೀರ್ ಹಾಗೂ ಮಗ ಅವೈಝ್ ಅಹ್ಮದ್ ಅವರನ್ನು ‘ದಿವಾಳಿ’ ಎಂದು ಘೋಷಿಸಿ ಆದೇಶ ಹೊರಡಿಸಿತ್ತು.






