ವಿದ್ಯಾರ್ಥಿಗಳ ಸಾಮರ್ಥ್ಯ ಹೆಚ್ಚಳಕ್ಕೆ ರಾಷ್ಟೀಯ ಶಿಕ್ಷಣ ನೀತಿ ಪೂರಕ: ಎನ್.ಆರ್.ನಾರಾಯಣ ಮೂರ್ತಿ
ಸಹಾನುಭೂತಿಯುಳ್ಳ ಬಂಡವಾಳಶಾಹಿ ವ್ಯವಸ್ಥೆ ದೇಶದ ಅಭಿವೃದ್ದಿಗೆ ಅಗತ್ಯವಿದೆ ಎಂದ ಉದ್ಯಮಿ

PHOTO: (PTI)
ಬೆಂಗಳೂರು: ಯುವಜನರು ಮತ್ತು ವಿದ್ಯಾರ್ಥಿಗಳ ಸಬಲೀಕರಣಕ್ಕೆ ನೂತನ ರಾಷ್ಟ್ರೀಯ ಶಿಕ್ಷಣ ನೀತಿ (ಎನ್ಇಪಿ 2020) ಪೂರಕ ಮತ್ತು ಸಮರ್ಪಕವಾಗಿದೆ ಎಂದು ಇನ್ಫೋಸಿಸ್ ಸಹ ಸಂಸ್ಥಾಪಕ ಎನ್.ಆರ್. ನಾರಾಯಣ ಮೂರ್ತಿ ಅಭಿಪ್ರಾಯಪಟ್ಟಿದ್ದಾರೆ.
ಬುಧವಾರ ನಗರದ ಅರಮನೆ ಮೈದಾನದಲ್ಲಿ ನಡೆಯುತ್ತಿರುವ ʼಬೆಂಗಳೂರು ಟೆಕ್ ಸಮ್ಮಿಟ್ʼನಲ್ಲಿ ವಿಶೇಷ ಸಂವಾದದಲ್ಲಿ ಮಾತನಾಡಿದ ಅವರು, ವಿದ್ಯಾರ್ಥಿಗಳು ಹೆಚ್ಚು ಸಮರ್ಥರಾಗಲು ಎನ್ಇಪಿ ನೆರವಾಗಲಿದೆ. ಇದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಎನ್ಇಪಿ ಕರಡು ರಚನೆ ಅಧ್ಯಕ್ಷ ಕೆ. ಕಸ್ತೂರಿ ರಂಗನ್ ಅವರು ಅಭಿನಂದನಾರ್ಹರು ಎಂದರು. ವಿದ್ಯಾರ್ಥಿಗಳು ಸ್ವತಂತ್ರವಾಗಿ ಚಿಂತನೆ ಮಾಡುವುದು, ಕ್ರಿಯಾತ್ಮಕವಾಗಿ ಆಲಿಸುವುದು, ವಿಶ್ಲೇಷಣಾ ಸಾಮರ್ಥ್ಯ ಹೆಚ್ಚಿಸಿಕೊಳ್ಳುವುದು ಅತ್ಯಗತ್ಯ. ಅಂತರಶಿಸ್ತೀಯ ವಿಷಯಗಳನ್ನು ಕಲಿಯುವುದು ಪ್ರಸಕ್ತ ಕಾಲಕ್ಕೆ ಮಹತ್ವದ್ದು. ಈ ನಿಟ್ಟಿನಲ್ಲಿ ಎನ್ಇಪಿ ಸಕಾರಾತ್ಮಕ ಹೆಜ್ಜೆಯಾಗಿದೆ ಎಂದು ಅವರು ಹೇಳಿದರು.
ನನ್ನ ವಿದ್ಯಾರ್ಥಿದೆಸೆ ಹಾಗೂ ಯೌವನದಲ್ಲಿ ನಾನು ಕೂಡಾ ಬೇರೆ ನಿಲುವುಗಳನ್ನು ಹೊಂದಿದ್ದೆ. ಆದರೆ, ಕಾಲಾನಂತರದಲ್ಲಿ ಇತರ ದೇಶಗಳ ಅಭಿವೃದ್ಧಿ ಹಾದಿ ಗಮನಿಸಿದ ಮೇಲೆ ಸಹಾನುಕಂಪದಿಂದ ಕೂಡಿದ ಬಂಡವಾಳಶಾಹಿಯಾಗಿ ಬದಲಾದೆ. ಫ್ರಾನ್ಸ್ ನಲ್ಲಿ ನಾನು ಕಳೆದ ದಿನಗಳು ನನ್ನ ಚಿಂತನೆಯನ್ನು ಬದಲಾಯಿಸಿತು ಎಂದು ನಾರಾಯಣ ಮೂರ್ತಿ ತಮ್ಮ ಅನುಭವ ಹಂಚಿಕೊಂಡರು. ಪ್ರತಿ ಉದ್ಯಮಿಯೂ ಕೆಲವು ನಿಯಮಗಳನ್ನು ಅನುಸರಿಸಬೇಕು. ಸಮಾಜದ ಹಿತಾಸಕ್ತಿಯಲ್ಲಿ ಯಾವುದೇ ರಾಜಿ ಇಲ್ಲ, ಆಡಳಿತದ ಎಲ್ಲ ನಿಯಮಗಳ ಪಾಲನೆ, ನಿಯಮಿತ ತೆರಿಗೆ ಪಾವತಿ, ಉತ್ತಮ ನಾಗರಿಕ ಆಗುವುದು. ಈ ನಾಲ್ಕು ಅಂಶಗಳು ಬಹುಮುಖ್ಯ ಎಂದು ನಾರಾಯಣ ಮೂರ್ತಿ ಹೇಳಿದರು.
ನಾಗರಿಕರಿಗೆ ಉಚಿತ ಕೊಡುಗೆಗಳ ಬಗ್ಗೆ ಅಭಿಪ್ರಾಯ ಹಂಚಿಕೊಂಡ ಅವರು, ಯಾವುದೇ ಸರಕು ಉಚಿತವಾಗಿ ದೊರಕಬಾರದು. ಪ್ರತಿಯೊಂದಕ್ಕೂ ಒಂದು ಮೌಲ್ಯವಿದೆ. ಹಾಗಂತ ನಾನು ಬಡಜನರಿಗೆ ಉಚಿತ ಕೊಡುಗೆ ನೀಡುವುದಕ್ಕೆ ವಿರೋಧ ವ್ಯಕ್ತಪಡಿಸುತ್ತಿಲ್ಲ. ನಾನು ಕೂಡಾ ಬಡತನದ ಹಿನ್ನೆಲೆಯಿಂದಲೇ ಬಂದವನು. ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಸುಮಾರು 80 ಕೋಟಿ ರೂ. ಜನರಿಗೆ ಉಚಿತ ಆಹಾರಧಾನ್ಯ ಯೋಜನೆಯನ್ನು ಇನ್ನೂ 5 ವರ್ಷ ವಿಸ್ತರಿಸಿದ್ದಾರೆ. ಇಂತಹ ಕ್ರಮಗಳು ಬಡಜನರಿಗೆ ಆಹಾರ ಖಾತ್ರಿಪಡಿಸುತ್ತವೆ ಎಂದು ಹೇಳಿದರು.
ಆರ್ಥಿಕ ಮತ್ತು ಔದ್ಯಮಿಕ ಅಭಿವೃದ್ಧಿಯಲ್ಲಿ ಚೀನಾ ಉತ್ತಮ ಸಾಧನೆ ಮಾಡಿದ್ದು, ಭಾರತ ಅದರಿಂದ ಕಲಿಯುವುದು ಸಾಕಷ್ಟಿದೆ. ಈ ಬಗ್ಗೆ ನಮ್ಮ ರಾಜಕೀಯ ನೇತಾರರು ಅಧ್ಯಯನ ಮಾಡಬೇಕು. ಯಾವುದೇ ಪಕ್ಷ ಅಧಿಕಾರ ವಹಿಸಿಕೊಂಡರೂ ದೇಶದ ಅಭಿವೃದ್ಧಿ ಮೊದಲ ಆದ್ಯತೆಯಾಗಬೇಕು. "ದೇಶ ಮೊದಲು, ನಂತರ ಪಕ್ಷ" ಎಂಬ ಮನೋಭಾವ ಬೆಳೆಯಬೇಕು ಎಂದು ನಾರಾಯಣಮೂರ್ತಿ ಹೇಳಿದರು.
ಸಹಾನುಭೂತಿಯುಳ್ಳ ಬಂಡವಾಳಶಾಹಿ ವ್ಯವಸ್ಥೆ ದೇಶಕ್ಕೆ ಅಗತ್ಯವಿದೆ: ‘ಪ್ರಪಂಚದಲ್ಲಿ ಸಮಾಜವಾದ, ಎಡಪಂಥೀಯ ತತ್ವ ಸಿದ್ಧಾಂತಗಳನ್ನು ನೆಚ್ಚಿಕೊಂಡಂತಹ ದೇಶಗಳು ಅಷ್ಟಾಗಿ ಉತ್ತಮ ಸ್ಥಿತಿಯಲ್ಲಿಲ್ಲ. ಸಮಾಜವಾದಿ ತತ್ವಗಳನ್ನು ನಂಬಿದ್ದ ಸೋವಿಯತ್ ಒಕ್ಕೂಟವೇ ಈಗ ಇಲ್ಲವಾಗಿದೆ. ಇಂತಹ ಸಂದರ್ಭದಲ್ಲಿ ಸಹಾನುಭೂತಿಯುಳ್ಳ ಬಂಡವಾಳಶಾಹಿ ವ್ಯವಸ್ಥೆ ನಮ್ಮ ದೇಶ ಅಭಿವೃದ್ದಿಗೆ ಅಗತ್ಯವಿದೆ. ಬಂಡವಾಳ ಹೂಡಿಕೆದಾರರು ತಮ್ಮ ಕಂಪನಿಯಲ್ಲಿ ದುಡಿಯುವ ಪ್ರತಿಯೊಬ್ಬ ವ್ಯಕ್ತಿಯ ಹಿತವನ್ನು ಕಾಪಾಡಿಕೊಂಡು ಯಾವುದೇ ಕ್ರಮವನ್ನು ಕೈಗೊಳ್ಳಬೇಕು. ಹೀಗಾದಲ್ಲಿ ಮಾತ್ರ ಎಲ್ಲರ ಉದ್ಧಾರವಾಗುತ್ತದೆ’ ಎಂದರು.
‘ದೇಶದ ಪ್ರಥಮ ಪ್ರಧಾನಿ ಜವಾಹರಲಾಲ್ ನೆಹರೂ ಅವರ ಅಭಿಮಾನಿಯಾದ ನಮ್ಮ ತಂದೆಯ ಪ್ರಭಾವದಿಂದ ನಾವೂ ಸಮಾಜವಾದ ಹಾಗೂ ಆರಂಭದಲ್ಲಿ ಎಡಪಂಥೀಯವಾದವನ್ನು ಅನುಸರಿಸುತ್ತಿದ್ದೆ. ಆ ಸಂದರ್ಭದಲ್ಲಿ ದೇಶದ ಪರಿಸ್ಥಿತಿಗೆ ಅದು ಅಗತ್ಯವಿತ್ತು. ಆದರೆ ನಾನು ಫ್ರಾನ್ಸ್ಗೆ ಹೋಗಿ ಒಂದಷ್ಟು ಕಾಲ ಇದ್ದ ನಂತರ, ನನ್ನ ಆಲೋಚನೆಯೇ ಬದಲಾದವು. ನಮ್ಮ ದೇಶದ ಅಭಿವೃದ್ಧಿಗೆ ಬಂಡವಾಳಶಾಹಿ ವ್ಯವಸ್ಥೆ ಅಗತ್ಯ, ಆದರೆ ಅದು ಸಹಾನುಭೂತಿಯುಳ್ಳದ್ದಾಗಿರಬೇಕು ಎಂದು’ ಹೇಳಿದರು.







