ಕೆಫೆ ಕಾಫಿ ಡೇ ವಿರುದ್ಧ ಸಲ್ಲಿಸಿದ್ದ ದಿವಾಳಿತನದ ಅರ್ಜಿ ಸ್ವೀಕರಿಸಿದ ಎನ್ಸಿಎಲ್ಟಿ

ಸಾಂದರ್ಭಿಕ ಚಿತ್ರ
ಬೆಂಗಳೂರು, ಜು.27: ಕಾಫಿ ಉದ್ಯಮ ಕೆಫೆ ಕಾಫಿ ಡೇಯ ಮಾತೃಸಂಸ್ಥೆಯಾದ ಕಾಫಿ ಡೇ ಗ್ಲೋಬಲ್ ವಿರುದ್ಧ ಇಂಡಸ್ಇಂಡ್ ಬ್ಯಾಂಕ್ ಸಲ್ಲಿಸಿರುವ ದಿವಾಳಿತನದ ಅರ್ಜಿಯನ್ನು ಬೆಂಗಳೂರಿನಲ್ಲಿರುವ ರಾಷ್ಟ್ರೀಯ ಕಂಪೆನಿ ಕಾನೂನು ನ್ಯಾಯಮಂಡಳಿ(ಎನ್ಸಿಎಲ್ಟಿ) ಇತ್ತೀಚೆಗೆ ಸ್ವೀಕರಿಸಿದೆ.
ಶೈಲೇಂದ್ರ ಅಜ್ಮೀರಾ ಅವರನ್ನು ಮಧ್ಯಂತರ ಪರಿಹಾರ ವೃತ್ತಿಪರರನ್ನಾಗಿ ಎನ್ಸಿಎಲ್ಟಿ ನ್ಯಾಯಾಲಯ ನೇಮಿಸಿದೆ. ಕಾಫಿ ಡೇ 94 ಕೋಟಿಗೂ ಅಧಿಕ ಮೊತ್ತದ ಸಾಲ ಬಾಕಿ ಉಳಿಸಿಕೊಂಡಿದೆ ಎಂದು ಆರೋಪಿಸಿ ಇಂಡಸ್ ಇಂಡ್ ಬ್ಯಾಂಕ್ ಮನವಿ ಸಲ್ಲಿಸಿದ್ದ ಸಂಬಂಧ ನಿವೃತ್ತ ನ್ಯಾ.ಟಿ.ಕೃಷ್ಣವಲ್ಲಿ ಮತ್ತು ತಾಂತ್ರಿಕ ಸದಸ್ಯ ಮನೋಜ್ಕುಮಾರ್ ದುಬೆ ಅವರಿದ್ದ ಪೀಠ, ಈ ಆದೇಶ ನೀಡಿದೆ.
ಪ್ರಸ್ತುತ ಅರ್ಜಿಯು ಪರಿಪೂರ್ಣವಾಗಿದ್ದು, ಕಾಫಿ ಡೇ ಗ್ಲೋಬಲ್ ಸುಸ್ತಿದಾರನಾಗಿರುವುದನ್ನು ಸಾಬೀತುಪಡಿಸಿದೆ. 1 ಕೋಟಿಗಿಂತ ಹೆಚ್ಚಿನ ಸುಸ್ತಿ ಮೊತ್ತಕ್ಕೆ, ಕಾಫಿ ಡೇ ಗ್ಲೋಬಲ್ ಲಿಮಿಟೆಡ್ಗೆ ಸಂಬಂಧಿಸಿದಂತೆ ಅರ್ಜಿ ಸ್ವೀಕರಿಸಲಾಗಿದೆ. ಆ ಪ್ರಕಾರ ಮೊರಟೋರಿಯಂ ಘೋಷಿಸಲಾಗಿದೆ ಎಂದು ಎನ್ಸಿಎಲ್ಟಿ ನೀಡಿರುವ ತೀರ್ಪು ತಿಳಿಸಿದೆ.
ಕಾಫಿ ಡೇ ಗ್ಲೋಬಲ್ನ್ನು ವಿ.ಜಿ.ಸಿದ್ಧಾರ್ಥ ಅವರು ಪ್ರಾರಂಭಿಸಿದ್ದರು. ಅವರು 2019ರಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವುದರೊಂದಿಗೆ ಕಂಪೆನಿಯ ಸಂಕಷ್ಟ ಮತ್ತಷ್ಟು ಹೆಚ್ಚಾಗಿತ್ತು.







