ನಮ್ಮ ಕೆಎಸ್ಟಿಡಿಸಿ ಇರುವುದು ಕರ್ನಾಟಕಕ್ಕೋ ಅಥವಾ ಕೇರಳಕ್ಕೋ ತಿಳಿಯುತ್ತಿಲ್ಲ : ರಾಜ್ಯ ಸರಕಾರದ ವಿರುದ್ಧ ಬಿಜೆಪಿ ಆಕ್ರೋಶ

PC |X @kstdc
ಬೆಂಗಳೂರು : ಕರ್ನಾಟಕ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ (ಕೆಎಸ್ಟಿಡಿಸಿ) ‘ಎಕ್ಸ್’ ಖಾತೆಯಲ್ಲಿ ವಯನಾಡ್ ಪ್ರವಾಸದ ಕುರಿತು ಮಾಡಿದ ಪೋಸ್ಟ್ ಗೆ ರಾಜ್ಯ ಬಿಜೆಪಿಯು ʼʼಕಾಂಗ್ರೆಸ್ ಸರ್ಕಾರದ ಆಡಳಿತ ವಯನಾಡ್ ಸೇವಾ ಕೇಂದ್ರದಂತಾಗಿದೆʼʼ ಎಂದು ಟೀಕಿಸಿದೆ.
ಕೆಎಸ್ಟಿಡಿಸಿ ಖಾತೆಯಲ್ಲಿನ ಪೋಸ್ಟ್ ಉಲ್ಲೇಖಿಸಿ ಎಕ್ಸ್ ನಲ್ಲಿ ಪ್ರತಿಕ್ರಿಯಿಸದ ರಾಜ್ಯ ಬಿಜೆಪಿಯು, ನಮ್ಮ ಕೆಎಸ್ಟಿಡಿಸಿ ಇರುವುದು ಕರ್ನಾಟಕಕ್ಕೋ ಅಥವಾ ಕೇರಳಕ್ಕೋ ತಿಳಿಯುತ್ತಿಲ್ಲ?. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಸಚಿವ ಎಚ್.ಕೆ.ಪಾಟೀಲರಿಗೆ ಚಿಕ್ಕಮಗಳೂರು, ಕೊಡಗು, ಉತ್ತರ ಕನ್ನಡ, ಶಿವಮೊಗ್ಗ ಕಾಣಿಸುತ್ತಿಲ್ಲವೇ? ಪ್ರಿಯಾಂಕಾ ಗಾಂಧಿಯನ್ನು ಮೆಚ್ಚಿಸಲು ಕರ್ನಾಟಕದ ಪ್ರವಾಸೋದ್ಯಮವನ್ನು ಕಡೆಗಣಿಸುತ್ತಿದ್ದೀರಾ?” ಎಂದು ಪ್ರಶ್ನಿಸಿದೆ.
ವಯನಾಡಿನ ಜನರಿಗೆ ಮನೆ, ಆನೆ ದಾಳಿಯಿಂದ ಸತ್ತವರಿಗೆ ಪರಿಹಾರ ಎಲ್ಲವನ್ನೂ ನೀಡಿದ ನಂತರ ಈಗ ವಯನಾಡನ್ನೇ ಕರ್ನಾಟಕಕ್ಕೆ ಸೇರಿಸಿ ಬಿಡಿ” ಎಂದು ವ್ಯಂಗ್ಯವಾಡಿದೆ.
ಈ ಕುರಿತು ವಿರೋಧ ಪಕ್ಷದ ನಾಯಕ ಆರ್.ಆಶೋಕ್ ಅವರು ಕೂಡ ಪ್ರತಿಕ್ರಿಯೆ ನೀಡಿದ್ದು, “ಮುಖ್ಯಮಂತ್ರಿಯೊಬ್ಬರು ವಯನಾಡ್ ಜಿಲ್ಲಾಧಿಕಾರಿ ಹಾಗೂ ನಿಧಿ ಸಂಗ್ರಹಕನಂತೆ ವರ್ತಿಸುತ್ತಿದ್ದಾರೆ. ಕರ್ನಾಟಕದ ಜನರು ಈ ನಾಟಕವನ್ನು ಇನ್ನೆಷ್ಟು ದಿನ ಸಹಿಸಿಕೊಳ್ಳಬೇಕು?” ಎಂದು ಪ್ರಶ್ನಿಸಿದ್ದಾರೆ.
ಕರ್ನಾಟಕ ಪ್ರವಾಸೋದ್ಯಮ ನಿಗಮವನ್ನು ಪ್ರಿಯಾಂಕಾ ಗಾಂಧಿಯವರ ಕ್ಷೇತ್ರವಾದ ವಯನಾಡ್ ಪ್ರಚಾರಕ್ಕೆ ದುರುಪಯೋಗ ಮಾಡಲಾಗುತ್ತಿದೆ ಎಂದು ಬಿಜೆಪಿ ಆರೋಪಿಸಿದೆ.







