‘ಜಾತಿ ಗಣತಿ’| ಅಪಸ್ವರ, ಗೊಂದಲ ಬಗೆಹರಿಸಲು ಮತ್ತೊಮ್ಮೆ ಅವಕಾಶ: ಡಿ.ಕೆ.ಶಿವಕುಮಾರ್
ಸಂಪುಟ ಸಭೆಯಲ್ಲಿ ಚರ್ಚಿಸಿ ಮುಖ್ಯಮಂತ್ರಿಯಿಂದ ದಿನಾಂಕ ಘೋಷಣೆ

ಹೊಸದಿಲ್ಲಿ: ಜಾತಿ ಗಣತಿ ವಿಚಾರವಾಗಿ ಎದ್ದಿರುವ ಅಪಸ್ವರ, ಸಮುದಾಯಗಳ ಅಂಕಿ-ಅಂಶಗಳ ಬಗ್ಗೆ ಇರುವ ಗೊಂದಲ ನಿವಾರಣೆಗೆ ತೀರ್ಮಾನಿಸಲಾಗಿದೆ. ಮನೆ ಮನೆ ಸಮೀಕ್ಷೆ ಹಾಗೂ ಆನ್‍ಲೈನ್ ಮೂಲಕ ಎಲ್ಲರೂ ತಮ್ಮ ಮಾಹಿತಿಯನ್ನು ಮತ್ತೊಮ್ಮೆ ಸಲ್ಲಿಸಲು ಅವಕಾಶ ನೀಡಲಾಗುವುದು. ಈ ಪ್ರಕ್ರಿಯೆಯನ್ನು ಪಾರದರ್ಶಕವಾಗಿ ನಡೆಸಲಾಗುವುದು ಎಂದು ಕೆಪಿಸಿಸಿ ಅಧ್ಯಕ್ಷ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ತಿಳಿಸಿದರು.
ಮಂಗಳವಾರ ಹೊಸದಿಲ್ಲಿಯಲ್ಲಿ ಕಾಂಗ್ರೆಸ್ ವರಿಷ್ಠ ನಾಯಕರ ಜೊತೆ ಸಭೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ, ಎಐಸಿಸಿ ಪ್ರಧಾನ ಕಾರ್ಯದರ್ಶಿಗಳಾದ ವೇಣುಗೋಪಾಲ್ ಹಾಗೂ ರಣದೀಪ್ ಸಿಂಗ್ ಸುರ್ಜೆವಾಲ ನನ್ನನ್ನು ಹಾಗೂ ಮುಖ್ಯಮಂತ್ರಿಯನ್ನು ಕರೆಸಿ ಪಕ್ಷ ಸಂಘಟನೆ ವಿಚಾರವಾಗಿ, ರಾಜ್ಯ ರಾಜಕಾರಣ ಹಾಗೂ ಇತ್ತೀಚಿನ ಕಾಲ್ತುಳಿತ ಪ್ರಕರಣದ ಬಗ್ಗೆ ಚರ್ಚೆ ನಡೆಸಿದರು ಎಂದು ಹೇಳಿದರು.
ಜಾತಿ ಗಣತಿ ವಿಚಾರವಾಗಿ ಇದೇ ತಿಂಗಳ 12ರಂದು ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಅಂತಿಮ ತೀರ್ಮಾನ ಮಾಡಲು ನಿರ್ಧರಿಸಿದ್ದೆವು. ಈ ವಿಚಾರವಾಗಿ ಸಂಸದರು, ಶಾಸಕರು, ಸಂಘ ಸಂಸ್ಥೆಗಳು ನಮ್ಮ ವರಿಷ್ಠರ ಜತೆ ಚರ್ಚೆ ಮಾಡಿದ್ದಾರೆ. ಕೆಲವು ಸಂಘಟನೆ ಹಾಗೂ ಸಮಾಜಗಳಿಂದ ಈ ಜಾತಿ ಗಣತಿಗೆ ಅಪಸ್ವರ ಬಂದಿರುವ ಹಿನ್ನೆಲೆಯಲ್ಲಿ ಎಲ್ಲರಿಗೂ ನ್ಯಾಯಬದ್ಧವಾಗಿ ಅವಕಾಶ ಕಲ್ಪಿಸಿಕೊಡಬೇಕು ಎಂದು ವರಿಷ್ಠರು ನಮಗೆ ಮಾರ್ಗದರ್ಶನ ನೀಡಿದ್ದಾರೆ ಎಂದು ಅವರು ತಿಳಿಸಿದರು.
ಈ ಜಾತಿ ಗಣತಿಯಲ್ಲಿ ಯಾರನ್ನೂ ಬಿಡಬಾರದು, ಎಲ್ಲರನ್ನು ಒಳಗೊಳ್ಳಬೇಕು ಎಂದು ತೀರ್ಮಾನಿಸಲಾಗಿದೆ. ಯಾರ ಅಪಸ್ವರವೂ ಇಲ್ಲದಂತೆ ನೋಡಿಕೊಳ್ಳಲು ಮುಖ್ಯಮಂತ್ರಿಗೆ ನಿರ್ದೇಶನ ನೀಡಿದ್ದಾರೆ. ಸಾಮಾಜಿಕ ನ್ಯಾಯದ ಬಗ್ಗೆ ಸರಕಾರದ ಬದ್ಧತೆ ಇದೆ. ಜಾತಿ ಗಣತಿಯಲ್ಲಿ ಅಂಕಿ ಅಂಶಗಳ ಬಗ್ಗೆ ಅನೇಕ ಸಮಾಜಗಳು ಅಪಸ್ವರ ಎತ್ತಿದ್ದು, ಈ ಬಗ್ಗೆ ಎಲ್ಲರಿಗೂ ಸ್ಪಷ್ಟನೆ ನೀಡಲು ಅವಕಾಶ ಮಾಡಿಕೊಡಬೇಕು ಎಂದು ತೀರ್ಮಾನಿಸಲಾಗಿದೆ ಎಂದು ಶಿವಕುಮಾರ್ ತಿಳಿಸಿದರು.
ಸಾರ್ವಜನಿಕರು ನ್ಯಾಯಬದ್ಧವಾಗಿ ಯಾವ ಸಮಾಜಕ್ಕೆ ಸೇರಿದ್ದೀರಿ ಎಂಬುದನ್ನು ವ್ಯಕ್ತಪಡಿಸಿಕೊಳ್ಳಬೇಕು. ಈ ಅವಕಾಶವನ್ನು ಎಲ್ಲರೂ ಬಳಸಿಕೊಳ್ಳಬೇಕು. ಸಮಾಜದ ಮುಖಂಡರು ಹಾಗೂ ಮಠಾಧೀಶರು ಇದಕ್ಕೆ ಸಹಕರಿಸಬೇಕು ಎಂದು ಉಪ ಮುಖ್ಯಮಂತ್ರಿ ಮನವಿ ಮಾಡಿದರು.
ಕಳೆದ ಎರಡು ತಿಂಗಳಿನಿಂದ ಒಳಮೀಸಲಾತಿ ವಿಚಾರವಾಗಿ ಪರಿಶಿಷ್ಟ ಜಾತಿ ಅವರ ಜನಗಣತಿ ಮಾಡುತ್ತಿದ್ದೇವೆ. ಹೀಗಾಗಿ ಈ ಪ್ರಕ್ರಿಯೆ ಸುದೀರ್ಘವಾಗಿ ನಡೆಯುವುದರಿಂದ ಇದನ್ನು ಸಂಪುಟದಲ್ಲಿ ಚರ್ಚಿಸಿ ತೀರ್ಮಾನ ಮಾಡುತ್ತೇವೆ. ನಾವು ಎಲ್ಲರನ್ನು ವಿಶ್ವಾಸಕ್ಕೆ ಪಡೆದು ಎಲ್ಲರಿಗೂ ನ್ಯಾಯ ಒದಗಿಸಿಕೊಡಲಾಗುವುದು. ಇದರಲ್ಲಿ ಯಾವುದೇ ಆತಂಕ ಬೇಡ. ನಮ್ಮ ಈ ಪ್ರಯತ್ನದ ಮೂಲಕ ಜಾತಿಗಣತಿ ವಿಚಾರವಾಗಿ ಇರುವ ಅಪಸ್ವರವನ್ನು ಸರಿಪಡಿಸಲಾಗುವುದು. ನಮ್ಮ ರಾಜ್ಯದವರು ಎಲ್ಲೇ ಇದ್ದರೂ ಈ ಬಗ್ಗೆ ಆನ್‍ಲೈನ್ ಮೂಲಕ ಮಾಹಿತಿ ನೀಡಲು ಅವಕಾಶ ಕಲ್ಪಿಸಲಾಗುವುದು ಎಂದು ಅವರು ತಿಳಿಸಿದರು.
ವಿಧಾನ ಪರಿಷತ್ ಸ್ಥಾನಕ್ಕೆ ನಾಮನಿರ್ದೇಶನದ ಬಗ್ಗೆ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಈ ವಿಚಾರವಾಗಿ ಹೈಕಮಾಂಡ್ ಪರಿಶೀಲಿಸಿ ಮುಖ್ಯಮಂತ್ರಿಗೆ ಮಾಹಿತಿ ನೀಡಲಿದೆ ಎಂದು ತಿಳಿಸಿದರು.