ಜೂನ್ 3ರಂದು ನೂತನ ಸಿಎಂ ಪ್ರಮಾಣವಚನ : ಜಿ.ಸಿ. ಚಂದ್ರಶೇಖರ್

ಬೆಂಗಳೂರು, ಮೇ 30: ರಾಜ್ಯದ ನೂತನ ಮುಖ್ಯಮಂತ್ರಿ ಪ್ರಮಾಣವಚನ ಸ್ವೀಕಾರ ಸಮಾರಂಭವನ್ನು ಜೂನ್ 3ರಂದು ರಾಜಭವನದ ಗ್ಲಾಸ್ ಹೌಸ್‌ನಲ್ಲಿ ಸರಳವಾಗಿ ನಡೆಸಲು ಪಕ್ಷ ತೀರ್ಮಾನಿಸಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಜಿ.ಸಿ. ಚಂದ್ರಶೇಖರ್ ತಿಳಿಸಿದ್ದಾರೆ.
ಶನಿವಾರ ಇಲ್ಲಿನ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಶಾಸಕಾಂಗ ಪಕ್ಷದ (ಸಿಎಲ್‌ಪಿ) ನೂತನ ನಾಯಕರ ಆಯ್ಕೆಯಾದ ಬಳಿಕ ಪ್ರಮಾಣವಚನ ಸ್ವೀಕಾರ ಕಾರ್ಯಕ್ರಮ ನಡೆಯಲಿದೆ ಎಂದರು.
ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಏರಿಕೆಯಂತಹ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಆಡಂಬರದ ಕಾರ್ಯಕ್ರಮ ಆಯೋಜಿಸದಂತೆ ಪಕ್ಷದ ವತಿಯಿಂದ ಸಲಹೆ ನೀಡಲಾಗಿದೆ. ಸಾರ್ವಜನಿಕರಿಗೆ ಯಾವುದೇ ತೊಂದರೆಯಾಗದ ರೀತಿಯಲ್ಲಿ ಸರಳವಾಗಿ ಕಾರ್ಯಕ್ರಮ ನಡೆಸುವ ಕುರಿತು ಕೆಪಿಸಿಸಿ ಅಧ್ಯಕ್ಷರು ಸಹ ಸಮ್ಮತಿಸಿದ್ದಾರೆ ಎಂದು ಅವರು ಹೇಳಿದರು.
ಪ್ರಮಾಣವಚನ ಸಮಾರಂಭದ ಸಮಯ ಇನ್ನೂ ನಿಗದಿಯಾಗಿಲ್ಲ. ಈ ಕುರಿತು ಸಂಜೆ ವೇಳೆಗೆ ಅಂತಿಮ ಮಾಹಿತಿ ನೀಡಲಾಗುವುದು. ಪಕ್ಷದ ಕಾರ್ಯಕರ್ತರು ಹಾಗೂ ಅಭಿಮಾನಿಗಳು ಸಹಕಾರ ನೀಡಬೇಕು ಎಂದು ಅವರು ಮನವಿ ಮಾಡಿದರು.
ನೂತನ ಸಚಿವ ಸಂಪುಟದಲ್ಲಿ ಎಷ್ಟು ಮಂದಿ ಸಚಿವರು ಪ್ರಮಾಣವಚನ ಸ್ವೀಕರಿಸಲಿದ್ದಾರೆ ಎಂಬ ಬಗ್ಗೆ ಇನ್ನೂ ಯಾವುದೇ ನಿರ್ಧಾರವಾಗಿಲ್ಲ. ಈ ಕುರಿತು ಕಾಂಗ್ರೆಸ್ ಹೈಕಮಾಂಡ್ ಅಂತಿಮ ತೀರ್ಮಾನ ಕೈಗೊಳ್ಳಲಿದೆ. ಸಚಿವ ಸಂಪುಟ ರಚನೆಗೆ ಸಂಬಂಧಿಸಿದಂತೆ ಇನ್ನೂ ಸಮಯವಿದ್ದು, ಯಾರು ಸಚಿವರಾಗಬೇಕು ಎಂಬ ಕುರಿತು ಬಳಿಕ ನಿರ್ಧಾರವಾಗಲಿದೆ ಎಂದು ಜಿ.ಸಿ. ಚಂದ್ರಶೇಖರ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ವಿಧಾನ ಪರಿಷತ್ ಸದಸ್ಯ ರಮೇಶ್ ಬಾಬು ಉಪಸ್ಥಿತರಿದ್ದರು.






