ಎಸ್ಐಆರ್ ಪ್ರಕ್ರಿಯೆಯಲ್ಲಿ ದಿನಕ್ಕೊಂದು ಗೊಂದಲಗಳು ಸೃಷ್ಟಿಯಾಗುತ್ತಿವೆ : ಡಾ.ಜಿ.ಪರಮೇಶ್ವರ
"ರಾಜ್ಯದ ಮಳೆ ಕೊರತೆ, ಬೆಳೆಹಾನಿ ಕುರಿತು ಕೇಂದ್ರದ ಬರ ಅಧ್ಯಯನ ತಂಡಕ್ಕೆ ಸಂಪೂರ್ಣ ಮಾಹಿತಿ ಒದಗಿಸಲಾಗುವುದು"

Photo: x.com/DrParameshwara
ಬೆಂಗಳೂರು, ಅ.1: ರಾಜ್ಯದಲ್ಲಿ ನಡೆಯುತ್ತಿರುವ ಎಸ್ಐಆರ್ ಪ್ರಕ್ರಿಯೆಯಲ್ಲಿ ಹಲವು ಗೊಂದಲಗಳು ಸೃಷ್ಟಿಯಾಗುತ್ತಿದ್ದು, ಮತದಾರರ ಪಟ್ಟಿಗೆ ಸಂಬಂಧಿಸಿದ ಸಮಸ್ಯೆಗಳ ಬಗ್ಗೆ ಕಾಂಗ್ರೆಸ್ ಪಕ್ಷ ಈಗಾಗಲೇ ತನ್ನ ಆಕ್ಷೇಪವನ್ನು ದಾಖಲಿಸಿದೆ ಎಂದು ಉಪ ಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ ಹೇಳಿದರು.
ಸದಾಶಿವನಗರದ ನಿವಾಸದ ಬಳಿ ಮಾಧ್ಯಮ ಪ್ರತಿನಿಧಿಗಳಿಗೆ ಪ್ರತಿಕ್ರಿಯಿಸಿದ ಅವರು, ರಾಜ್ಯದಲ್ಲಿ ಎಸ್ಐಆರ್ ಪ್ರಕ್ರಿಯೆಯಲ್ಲಿ ಏರ್ಪಟ್ಟಿರುವ ಗೊಂದಲ, ಬರ ಪರಿಸ್ಥಿತಿ ಸೇರಿದಂತೆ ಹಲವು ವಿಚಾರಗಳ ಕುರಿತು ಮಾಹಿತಿ ಹಂಚಿಕೊಂಡರು.
ಹಲವು ದಿನಗಳಿಂದ ಎಸ್ಐಆರ್ ವಿಚಾರಕ್ಕೆ ಸಂಬಂಧಿಸಿ ದಿನಕ್ಕೊಂದು ಗೊಂದಲಗಳು ಸೃಷ್ಟಿಯಾಗುತ್ತಲೇ ಇವೆ. ASDDO ವಿಚಾರದಲ್ಲೂ ಗೊಂದಲ ಉಂಟಾಯ್ತು. ಬದುಕಿರುವವರನ್ನು ಕೂಡ ಮೃತರ ಪಟ್ಟಿಗೆ ಸೇರಿಸಲಾಗಿತ್ತು. ಮತದಾರರಿಗೆ ನೋಟೀಸ್ ನೀಡುವುದರಲ್ಲೂ ಗೊಂದಲಗಳಾಗಿವೆ. ಈಗ ಮುಂದುವರಿದು ಯಾರು ಬೇಕಾದರೂ ಚುನಾವಣಾ ಆಯೋಗಕ್ಕೆ ಫಾರ್ಮ್ 7 ಅರ್ಜಿಯನ್ನು ಸಲ್ಲಿಸಿ ಬೇರೋಬ್ಬ ಮತದಾರರನ್ನು ಮತಪಟ್ಟಿಯಿಂದ ಅಳಿಸಿಹಾಕಬಹುದು ಎಂಬಂತಾಗಿದೆ. ಹೀಗಾಗಿ ದೇಶ್ಯಾದ್ಯಂತ ನಡೆಯುತ್ತಿರುವ ಈ ಪ್ರಕ್ರಿಯೆಯನ್ನು ವಿರೋಧಿಸಿ ನಮ್ಮ ಪಕ್ಷದ ವತಿಯಿಂದ ಈಗಾಗಲೇ ದೂರನ್ನು ಸಲ್ಲಿಕೆ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಯಾವ ರೀತಿಯ ಬೆಳವಣಿಗೆಗಳಾಗುತ್ತವೆ ಎಂಬುದರ ಆಧಾರದ ಮೇಲೆ ನಾವು ನಿರ್ಧಾರಗಳನ್ನು ಕೈಗೊಳ್ಳುತ್ತೇವೆ ಎಂದರು.
ರಾಜ್ಯದಲ್ಲಿನ ಬರ ಪರಿಸ್ಥಿತಿಯ ಬಗ್ಗೆ ಕೇಂದ್ರಕ್ಕೆ ಮನವರಿಕೆ ಮಾಡಿಕೊಡಲು ರಾಜ್ಯದ ಸರ್ವಪಕ್ಷ ನಿಯೋಗ ಪ್ರಧಾನಿಗಳನ್ನು ಭೇಟಿಯಾಗಲು ಇನ್ನೂ ದಿನಾಂಕ ನಿಗದಿಯಾಗಿಲ್ಲ. ಈ ಕುರಿತಾಗಿ ಮುಖ್ಯಮಂತ್ರಿಗಳು ಪ್ರಧಾನಿಗಳ ಕಛೇರಿಯಿಂದ ಪ್ರತಿಕ್ರಿಯೆಯ ನಿರೀಕ್ಷೆಯಲ್ಲಿದ್ದಾರೆ. ದಿನಾಂಕ ನಿಗದಿಯಾದ ಕೂಡಲೇ ಸರ್ವಪಕ್ಷ ನಿಯೋಗವನ್ನು ಕೊಂಡೊಯ್ದು ರಾಜ್ಯದ ಸ್ಥಿತಿಗತಿಯನ್ನು ಪ್ರಧಾನಿಗಳಿಗೆ ಮನನ ಮಾಡಿಕೊಡಲಿದ್ದೇವೆ ಎಂದು ತಿಳಿಸಿದರು.
ಕೇಂದ್ರದಿಂದ ರಾಜ್ಯಕ್ಕೆ ಬರುತ್ತಿರುವ ಬರ ಅಧ್ಯಯನ ತಂಡಕ್ಕೆ ಕಳೆದ ಜೂನ್ನಿಂದ ಈವರೆಗೆ ರಾಜ್ಯದಲ್ಲಿ ಉಂಟಾಗಿರುವ ಮಳೆ ಕೊರತೆ ಹಾಗೂ ಬೆಳೆ ಹಾನಿಯ ಬಗ್ಗೆ ಮಾಹಿತಿಯನ್ನು ಒದಗಿಸಲಾಗುವುದು. ಕಳೆದ ಒಂದೆರೆಡು ದಿನಗಳಿಂದ ರಾಜ್ಯದ ಕೆಲವೆಡೆಗಳಲ್ಲಿ ಮಳೆ ಸುರಿಯುತ್ತಿದೆಯಾದರೂ ಇದರಿಂದ ರೈತರಿಗೆ ಹೆಚ್ಚಿನ ಪ್ರಯೋಜನವಿಲ್ಲ ಎಂಬುದನ್ನು ತಿಳಿಸಲಾಗುವುದು ಎಂದು ಮಾಹಿತಿ ನೀಡಿದರು.
ತುಮಕೂರು ಲೋಕಸಭಾ ಕ್ಷೇತ್ರದ ಸಂಸದರು ಹಾಗೂ ಕೇಂದ್ರ ಸಚಿವರೂ ಆಗಿರುವ ಶ್ರೀ. ವಿ. ಸೋಮಣ್ಣ ಅವರನ್ನು ದೆಹಲಿಯಲ್ಲಿ ಭೇಟಿಯಾಗಿ ತುಮಕೂರಿನಿಂದ ರಾಯದುರ್ಗ ಮತ್ತು ದಾವಣೆಗೆರೆಗೆ ಮಾರ್ಗವಾಗಿ ಚಾಲ್ತಿಯಲ್ಲಿರುವ ರೈಲ್ವೇ ಕಾಮಗಾರಿ ಮತ್ತು ಕೆಲವೆಡೆಗಳಲ್ಲಿ ಉಂಟಾಗಿರುವ ಅಡಚಣೆಗಳ ಬಗ್ಗೆ ಚರ್ಚೆ ನಡೆಸಿದ್ದೇನೆ ಎಂದರು.






