ಕಾರವಾರ ಮತ್ತು ಮಂಗಳೂರಿನಲ್ಲಿ ಹೊಸ ಬಂದರು ನಿರ್ಮಾಣ: ಸಚಿವ ಮಂಕಾಳ್ ವೈದ್ಯ
ಕರಾವಳಿ ಜಿಲ್ಲೆಗಳ ಸಮಾಲೋಚನಾ ಸಭೆ

ಬೆಂಗಳೂರು: ಕರಾವಳಿ ಭಾಗದ ಮೂರು ಜಿಲ್ಲೆಗಳ ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆಯನ್ನು ಅಭಿವೃದ್ಧಿಪಡಿಸುವ ಸಲುವಾಗಿ ಕಾರವಾರ ಮತ್ತು ಮಂಗಳೂರಿನಲ್ಲಿ ಹೊಸದಾಗಿ ಬಂದರು ನಿರ್ಮಾಣಕ್ಕೆ ನಿರ್ಧರಿಸಲಾಗಿದೆ ಎಂದು ಬಂದರು ಹಾಗೂ ಮೀನುಗಾರಿಕಾ ಸಚಿವ ಮಂಕಾಳ್ ವೈದ್ಯ ತಿಳಿಸಿದ್ದಾರೆ.
ಗುರುವಾರ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ನಡೆದ ಕರಾವಳಿ ಜಿಲ್ಲೆಗಳಿಗೆ ಸಂಬಂಧಿಸಿದಂತೆ ಇಲಾಖಾ ವಿಷಯಗಳ ಕುರಿತು ಸಮಾಲೋಚನಾ ಸಭೆ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೀನುಗಾರರಿಗೆ ವಿವಿಧ ಸವಲತ್ತುಗಳ ವಿತರಣೆ ಪ್ರಗತಿ, ಪರಿಣಾಮಕಾರಿ ಅನುಷ್ಠಾನದ ಬಗ್ಗೆ ಸಭೆಯಲ್ಲಿ ಚರ್ಚಿಸಲಾಗಿದೆ. ಬೋಟ್ಗಳ ನಿಲುಗಡೆಗೆ ಅವಕಾಶವೂ ಸೇರಿ ಪ್ರವಾಸೋದ್ಯಮ ಅಭಿವೃದ್ಧಿಗೂ ಆದ್ಯತೆ ನೀಡಿ ಕಾರವಾರ ಮತ್ತು ಮಂಗಳೂರಿನಲ್ಲಿ ಹೊಸದಾಗಿ ಬಂದರು ನಿರ್ಮಾಣಕ್ಕೆ ನಿರ್ಧರಿಸಲಾಗಿದೆ ಎಂದರು.
ಇನ್ನೂ, ಈ ವಿಸ್ತೃತ ಯೋಜನಾ ವರದಿ ಸಿದ್ಧವಾದ ನಂತರ ಅಂದಾಜು ವೆಚ್ಚ ತಿಳಿಯಲಿದೆ. ಅಲ್ಲದೆ, ಬಂದರು ನಿರ್ಮಾಣ ಸಂಬಂಧ ಮೂರು ಜಿಲ್ಲೆಗಳಲ್ಲಿ ಒಟ್ಟು 13 ದ್ವೀಪ ಗುರುತಿಸಲಾಗಿದೆ. ಪ್ರವಾಸೋದ್ಯಮಕ್ಕೆ ಪೂರಕವಾಗಿ ಬಳಸಿಕೊಳ್ಳಲು ಖಾಸಗಿ ಸಾರ್ವಜನಿಕ ಸಹಭಾಗಿತ್ವದ ಚಿಂತನೆಯಿದ್ದು, ಅಂತಿಮವಾಗಿಲ್ಲ ಎಂದು ಮಾಹಿತಿ ನೀಡಿದರು.
ನಿರಂತರ ಮನವಿ ಮಾಡಿದರೂ ಕೇಂದ್ರ ಸರಕಾರ ವಾರ್ಷಿಕ ಸೀಮೆ ಎಣ್ಣೆ (ಕೆರೋಸಿನ್) ಹಂಚಿಕೆ ಮಾಡಿಲ್ಲ. ಈ ಹಿನ್ನೆಲೆಯಲ್ಲಿ ಮಾಸಿಕ 200 ಲೀಟರ್ ವೈಟ್ ಪೆಟ್ರೋಲ್ನ್ನು ಲೀಟರ್ಗೆ 35 ರೂ.ನಂತೆ ಸಬ್ಸಿಡಿ ದರದಲ್ಲಿ 10 ತಿಂಗಳ ಕಾಲ ವಿತರಿಸಲಿದ್ದು, 300 ಲೀಟರ್ ವರೆಗೆ ಖರೀದಿಗೆ ಅವಕಾಶ ಕಲ್ಪಿಸಲಾಗಿದೆ ಎಂದು ಹೇಳಿದರು.
ಅದೇ ರೀತಿ, ಕೇಂದ್ರ ಸರಕಾರದ ಸಾಗರಮಾಲಾ ಯೋಜನೆಯಡಿ 1,015 ಕೋಟಿ ರೂ. ರಾಜ್ಯಕ್ಕೆ ಮಂಜೂರು ಮಾಡಲಾಗಿದೆ. ಆದರೆ ಕರಾವಳಿ ನಿಯಂತ್ರಣ ವಲಯ (ಸಿಆರ್ಝಡ್) ಕಠಿಣ ನಿಯಮಗಳ ಕಾರಣ 2017ರಿಂದ ಬಳಕೆ ಸಾಧ್ಯವಾಗಿಲ್ಲ.ನಿರಂತರ ಮನವಿ ಬಳಿಕ ಕೇಂದ್ರ ಸರಕಾರ ಸಿಆರ್ಝಡ್ ನಿಯಮಗಳಲ್ಲಿ ಅಲ್ಪ ಸಡಿಲಿಕೆ ನೀಡಿದ ಹಿನ್ನೆಲೆಯಲ್ಲಿ 320 ಕಿ.ಮೀ. ಉದ್ದದ ಕರಾವಳಿಯಲ್ಲಿ ವಿವಿಧ ಅಭಿವೃದ್ಧಿ ಚಟುವಟಿಕೆಗಳಿಗೆ ಅವಕಾಶ ಲಭಿಸಿದೆ ಎಂದು ಮಾಹಿತಿ ನೀಡಿದರು.
ಇದಕ್ಕೂ ಮುನ್ನ ನಡೆದ ಸಭೆಯಲ್ಲಿ ವಿಧಾನಸಭೆಯ ಸಭಾಧ್ಯಕ್ಷ ಯು.ಟಿ.ಖಾದರ್, ಆರೋಗ್ಯ ಇಲಾಖೆ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಕಲಚೇತನರ ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಆರ್.ಹೆಬ್ಬಾಳ್ಕರ್, ಶಾಸಕರಾದ ಶಿವರಾಂ ಹೆಬ್ಬಾರ್, ದಿನಕರ್ ಶೆಟ್ಟಿ, ಉಮಾನಾಥ್ ಕೋಟ್ಯನ್, ಗುರುರಾಜ್ ಗಂಟಿಹೊಳೆ, ಯಶ್ಪಾಲ್ ಸುವರ್ಣ, ವೇದವ್ಯಾಸ್ ಕಾಮತ್, ಸತೀಶ್ ಸೈಲ್, ಹರೀಶ್ ಪೂಂಜಾ, ವಿಧಾನ ಪರಿಷತ್ ಸದಸ್ಯರಾದ ಕೋಟ ಶ್ರೀನಿವಾಸ ಪೂಜಾರಿ, ಪ್ರತಾಪ್ ಸಿಂಹ ನಾಯಕ್ ಹಾಗೂ ಹಣಕಾಸು ಇಲಾಖೆಯ ಪ್ರಧಾನ ಕಾರ್ಯದರ್ಶಿ ಎಲ್.ಕೆ.ಅತೀಖ್ ಸೇರಿದಂತೆ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.







