ಫೆ.1ರಿಂದ ರಾಜ್ಯದಲ್ಲಿ ವಾಹನಗಳ ಖರೀದಿಗೆ ಹೊಸ ತೆರಿಗೆ ಅನ್ವಯ

ಸಾಂದರ್ಭಿಕ ಚಿತ್ರ (PTI)
ಬೆಂಗಳೂರು: ಕರ್ನಾಟಕ ಮೋಟಾರು ವಾಹನಗಳ ತೆರಿಗೆ ನಿರ್ಧರಣೆ ಎರಡನೇ ತಿದ್ದುಪಡಿ ಮಾಡಲಾಗಿದ್ದು, ತಿದ್ದುಪಡಿಯಂತೆ ದ್ವಿಚಕ್ರ ವಾಹನಗಳಿಗೆ 500 ರೂ. ಸಾರಿಗೆಯೇತರ ಮೋಟಾರು ಕಾರುಗಳ ಮೇಲೆ 1 ಸಾವಿರ ರೂ. ತೆರಿಗೆಯನ್ನು ಫೆ.1ರಿಂದ ವಿಧಿಸಲಾಗುತ್ತದೆ.
ಸೋಮವಾರ ಸಾರಿಗೆ ಇಲಾಖೆಯ ಅಧೀನಾ ಕಾರ್ಯದರ್ಶಿ ಪುಷ್ಪ ವಿ.ಎಸ್. ಅಧಿಸೂಚನೆ ಹೊರಡಿಸಿದ್ದು, ತಿದ್ದುಪಡಿ ಅನ್ವಯ ಈ ಹೆಚ್ಚುವರಿ ತೆರಿಗೆಯನ್ನು ವಾಹನ ಖರೀದಿ ವೇಳೆ ‘ಒನ್ ಟೈಮ್'(ಒಮ್ಮೆ ಮಾತ್ರ) ವಿಧಿಸಲಾಗುತ್ತದೆ. ಆದರೆ, ಸಾರಿಗೇತರ ಅಂದರೆ ಯೆಲ್ಲೋ ಬೋರ್ಡ್ ವಾಹನಗಳಿಗೆ ಇದು ಅನ್ವಯಿಸುವುದಿಲ್ಲ ಎಂದಿದ್ದಾರೆ.
ರಾಜ್ಯ ಮೋಟಾರು ಸಾರಿಗೆ ಮತ್ತು ಇತರ ಸಂಬಂಧಿತ ಕಾರ್ಮಿಕರ ಸಾಮಾಜಿಕ ಭದ್ರತೆ ಮತ್ತು ಕ್ಷೇಮಾಭಿವೃದ್ದಿ ನಿಧಿಗಾಗಿ ಹಾಕಲಾಗಿರುವ ತೆರಿಗೆ ಇದಾಗಿದೆ. ದ್ವಿಚಕ್ರ ಮತ್ತು ಸಾರಿಗೇತರ ಮೋಟಾರು ಕಾರುಗಳ ನೊಂದಣಿ ವೇಳೆ ಉಪಕರ ವಿಧಿಸುವ ಕರ್ನಾಟಕ ಮೋಟಾರು ವಾಹನಗಳ ತೆರಿಗೆ ನಿರ್ಧರಣೆ(2ನೆ ತಿದ್ದುಪಡಿ) ವಿಧೇಯಕಕ್ಕೆ ಬೆಳಗಾವಿಯ ಅಧಿವೇಶನದಲ್ಲಿ ಅನುಮೋದನೆ ಪಡೆಯಲಾಗಿತ್ತು.





