ಮಂಗಳೂರು-ಬೆಂಗಳೂರು ಗ್ರೀನ್ ಫೀಲ್ಡ್ ಹೈಸ್ಪೀಡ್ ಕಾರಿಡಾರ್ ಕುರಿತು ಚರ್ಚೆ

Photo: X/@dineshgrao
ಬೆಂಗಳೂರು: ಬೆಂಗಳೂರು-ಮಂಗಳೂರು ಇಂಟಿಗ್ರೆಟೇಡ್ ಗ್ರೀನ್ ಫೀಲ್ಡ್ ಹೈಸ್ಪಿಡ್ ಕಾರಿಡಾರ್ ನಿರ್ಮಾಣ ಕುರಿತಂತೆ ಯೂರೋಪಿಯನ್ ಬ್ಯುಸಿನೆಸ್ ಅಂಡ್ ಟೆಕ್ನಾಲಜಿ ಸಂಸ್ಥೆಯ ಮುಖ್ಯಸ್ಥರು, ಗುರುವಾರ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಅವರೊಂದಿಗೆ ಚರ್ಚೆ ನಡೆಸಿದರು.
ಮಂಗಳೂರು-ಬೆಂಗಳೂರು ಹಸಿರು ವಲಯ ಹೈಸ್ಪೀಡ್ ಕಾರಿಡಾರ್ ಮಂಗಳೂರು ಅಭಿವೃದ್ದಿಯ ಜೊತೆಗೆ ಮಾರ್ಗ ಮಧ್ಯೆ ಬರುವ ಇತರ ನಗರಗಳ ಅಭಿವೃದ್ಧಿಗೆ ಹೆಚ್ಚು ಸಹಕಾರಿಯಾಗಲಿದೆ. 6 ರಿಂದ 8 ಲೈನ್ ಹೈಸ್ಪೀಡ್ ಕಾರಿಡಾರ್ ನಿರ್ಮಾಣಕ್ಕೆ ಯೋಜಿಸಲಾಗಿದ್ದು, ಪ್ರಾರಂಭಿಕ ಹಂತವಾಗಿ ಇಂದು ಸಚಿವರೊಂದಿಗೆ ಸಂಸ್ಥೆಯವರು ಚರ್ಚೆ ನಡೆಸಿದರು.
ಬೆಂಗಳೂರಿನಿಂದ ಮಂಗಳೂರಿಗೆ ಹೈಸ್ಪೀಡ್ ಕಾರಿಡಾರ್ ಮಂಗಳೂರಿಗೆ ಹೆಚ್ಚಿನ ಬಂಡವಾಳವನ್ನು ತರುವಲ್ಲಿ ಹೆಚ್ಚು ಸಹಕಾರಿಯಾಗಲಿದೆ. ಕಾರಿಡಾರ್ ಮಂಗಳೂರು ಬಂದರಿಗೂ ಸಂಪರ್ಕ ಮಾಡುವುದರಿಂದ ವ್ಯಾಪಾರ ಉದ್ಯಮಗಳ ಬೆಳವಣಿಗೆಗೂ ನೆರವಾಗಲಿದೆ ಎಂದು ಸಭೆಯಲ್ಲಿ ದಿನೇಶ್ ಗುಂಡೂರಾವ್ ಅಭಿಪ್ರಾಯ ವ್ಯಕ್ತಪಡಿಸಿದರು.
ಕಾರಿಡಾರ್ ಮಾರ್ಗ ನಕ್ಷೆ(ರೋಡ್ ಮ್ಯಾಪ್) ಸಮೇತ ಹೆಚ್ಚಿನ ಮಾಹಿತಿಯೊಂದಿಗೆ ಚರ್ಚಿಸುವ ಅಗತ್ಯತೆ ಇದೆ. ಈ ನಿಟ್ಟಿನಲ್ಲಿ ಲೋಕೊಪಯೋಗಿ ಸಚಿವರು ಹಾಗೂ ಮುಖ್ಯಮಂತ್ರಿ ಜೊತೆ ಮಾತುಕತೆ ನಡೆಸುವುದಾಗಿ ಸಚಿವ ದಿನೇಶ್ ಗುಂಡೂರಾವ್ ಭರವಸೆ ನೀಡಿದರು.
ಮಂಗಳೂರು ಸುಸ್ಥಿರ ಅಭಿವೃದ್ಧಿಗೆ ಸಹಾಯಕವಾಗುವ ಇಂತಹ ಯೋಜನೆಗಳನ್ನು ರಾಜ್ಯ ಸರಕಾರ ಪ್ರೋತ್ಸಾಹಿಸಲಿದೆ. ಇಂತಹ ಯೋಜನೆಗಳ ಅನುಷ್ಠಾನಕ್ಕೆ ಖಾಸಗಿ ಸಹಭಾಗಿತ್ವವೂ ಬೇಕಾಗಿದೆ ಎಂದು ದಿನೇಶ್ ಗುಂಡೂರಾವ್ ಹೇಳಿದರು. ಸಭೆಯಲ್ಲಿ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಪಾಲ್ಗೊಂಡಿದ್ದರು.







