ಪತ್ರಕರ್ತರಿಗೆ ಪಾರದರ್ಶಕವಾಗಿ ಬರೆಯುವ ಕೌಶಲ್ಯ ಅಗತ್ಯ: ದಿನೇಶ್ ಅಮೀನ್ ಮಟ್ಟು

ದಿನೇಶ್ ಅಮೀನ್ ಮಟ್ಟು
ಬೆಂಗಳೂರು: ಪತ್ರಕರ್ತರಿಗೆ ಜನಸಾಮಾನ್ಯರನ್ನು ಜಾಗೃತಗೊಳಿಸುವ ರೀತಿಯಲ್ಲಿ ಪಾರದರ್ಶಕವಾಗಿ ಬರೆಯುವ ಕೌಶಲ್ಯವಿರಬೇಕು ಎಂದು ಹಿರಿಯ ಪತ್ರಕರ್ತ ದಿನೇಶ್ ಅಮೀನ್ಮಟ್ಟು ಅವರು ಅಭಿಪ್ರಾಯಪಟ್ಟಿದ್ದಾರೆ.
ಶುಕ್ರವಾರ ನಗರದ ರಾಜಭವನ ರಸ್ತೆಯ ಖಾಸಗಿ ಹೋಟೆಲ್ನಲ್ಲಿ ವಿಧಾನ ಮಂಡಲದ ತರಬೇತಿ ಸಂಸ್ಥೆಯ ವತಿಯಿಂದ ಪತ್ರಿಕಾ ಹಾಗೂ ವಿದ್ಯುನ್ಮಾನ ಮಾಧ್ಯಮದ ವರದಿಗಾರರಿಗೆ ಹಮ್ಮಿಕೊಂಡಿದ್ದ ತರಬೇತಿ ಶಿಬಿರದಲ್ಲಿ ‘ಶಾಸಕಾಂಗ ಮತ್ತು ಪತ್ರಿಕಾ ರಂಗದ ಸಂಬಂಧಗಳು ಹಾಗೂ ವರದಿಗಾರಿಕೆ’ ವಿಷಯದ ಕುರಿತು ಅವರು ಮಾತನಾಡಿದರು.
ಪ್ರಸಕ್ತದಲ್ಲಿ ತಂತ್ರಜ್ಞಾನ ಬಳಕೆಯಿಂದ ಸರಕಾರ ಹಾಗೂ ಮಾಧ್ಯಮ ಕ್ಷೇತ್ರದಲ್ಲಿ ಹೊಸ ಕ್ರಾಂತಿ ಸೃಷ್ಠಿಯಾಗಿದೆ. ಅಧಿವೇಶನವನ್ನು ನೇರ ವೆಬ್ಕ್ಯಾಸ್ಟಿಂಗ್ ಮೂಲಕ ಎಲ್ಲಿಂದಾದರೂ ವೀಕ್ಷಿಸಿ ವರದಿ ಮಾಡಬಹುದು. ಆದರೆ, ಮಾಧ್ಯಮದವರು ವಸ್ತು ಸ್ಥಿತಿಯನ್ನು ಅರಿತು ಸುದ್ದಿ ಮಾಡಬೇಕು ಎಂದು ದಿನೇಶ್ ಅಮೀನ್ ಮಟ್ಟು ಹೇಳಿದರು.
ಮಾಧ್ಯಮದವರು ಅಗಾಧವಾಗಿ ಓದುವುದರ ಜೊತೆಗೆ ಸಚಿವಾಲಯದ ಗ್ರಂಥಾಲಯವನ್ನು ಸದುಪಯೋಗ ಪಡಿಸಿಕೊಳ್ಳಬೇಕು. ಇರುವುದನ್ನು ಬರೆಯುವುದಕ್ಕಿಂತ, ದೋಷಗಳನ್ನು ಎತ್ತಿ ತೋರಿಸುವುದೇ ನಿಜವಾದ ಸುದ್ದಿ. ಮಾಧ್ಯಮದವರು ವರದಿಗಾರಿಕೆಯ ಜತೆಗೆ ಎಲ್ಲರ ಘನತೆಯನ್ನು ಕಾಪಾಡುವುದು ಮುಖ್ಯ ಎಂದು ದಿನೇಶ್ ಅಮೀನ್ಮಟ್ಟು ತಿಳಿಸಿದರು.
ಶಾಸಕ ಅಪ್ಪಾಜಿ ಸಿ.ಎಸ್.ನಾಡಗೌಡ ಮಾತನಾಡಿ, ಅಧಿವೇಶನದಲ್ಲಿ ಜನಪ್ರತಿನಿಧಿಗಳಿಗಿರುವಷ್ಟು ಜವಾಬ್ದಾರಿ ಪತ್ರಿಕಾ ಮಾಧ್ಯಮದವರಿಗೂ ಇರುತ್ತದೆ. ಪ್ರಜಾಪ್ರಭುತ್ವದಲ್ಲಿ ಶಾಸಕಾಂಗ, ನ್ಯಾಯಾಂಗ, ಕಾಯಾರ್ಂಗ ನಡುವೆ ಪತ್ರಿಕಾರಂಗ ನಾಲ್ಕನೆಯ ಅಂಗವಾಗಿದ್ದು, ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಸರಿಯಾದ ಮಾರ್ಗದಲ್ಲಿ ನಡೆಸುತ್ತದೆ ಎಂದರು.
ಫೆ.12ರಿಂದ ಪ್ರಾರಂಭವಾಗುವ ವಿಧಾನ ಮಂಡಲದ ಅಧಿವೇಶನದಲ್ಲಿ ಮಾಧ್ಯಮದವರು ರಾಜ್ಯದ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು, ಸರಕಾರದ ಅಭಿವೃದ್ಧಿಯ ಬಗ್ಗೆ ಹಾಗೂ ಸಾರ್ವಜನಿಕ ಮಹತ್ವದ ವಿಷಯಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಬೇಕು ಎಂದು ಅಪ್ಪಾಜಿ ಸಿ.ಎಸ್.ನಾಡಗೌಡ ತಿಳಿಸಿದರು.
ಮೂಲಭೂತವಾಗಿ ಶಿಸ್ತಿನ ನಿಯಮಗಳ ಪಾಲನೆ, ಸಮಯದ ಪಾಲನೆ, ಜವಾಬ್ದಾರಿಯುತವಾದ ವರ್ತನೆ, ನಮ್ಮ ನಡತೆ ಹೇಗಿರಬೇಕು ಎನ್ನುವುದನ್ನು ತಾವುಗಳು ಜನರ ಮುಂದೆ ಬಿಂಬಿಸುತ್ತೀರಿ, ಇದು ಸಾರ್ವಜನಿಕರಲ್ಲಿ ಪ್ರಭಾವ ಮೂಡುತ್ತದೆ. ಕಲಾಪದಲ್ಲಿ ಹತ್ತು ಹಲವಾರು ವಿಷಯಗಳು ಇರಬಹುದಾದರೂ ಅದರ ಬಗ್ಗೆ ಪತ್ರಿಕೋದ್ಯಮದವರು ಸರಿಯಾದ ಚರ್ಚೆಯ ಮೂಲಕ ಬಿಂಬಿಸಬೇಕು. ನಾವು ಸಂವಿಧಾನದ ಚೌಕಟ್ಟಿನಲ್ಲಿದ್ದೇವೆ ಎಂಬುದನ್ನು ಮರೆಯಬಾರದು ಎಂದು ಅಪ್ಪಾಜಿ ಸಿ.ಎಸ್.ನಾಡಗೌಡ ಸಲಹೆ ನೀಡಿದರು.
ಹಿರಿಯ ಪತ್ರಕರ್ತ ರವಿ ಹೆಗಡೆ ಮಾತನಾಡಿ, ಇಂತಹ ಕಾರ್ಯಾಗಾರಗಳು ಪ್ರತಿ ಆರು ತಿಂಗಳಿಗೊಮ್ಮೆ ನಡೆಯಬೇಕು. ಪತ್ರಿಕೋದ್ಯಮ ಶಿಕ್ಷಣದಲ್ಲಿ ವಿಧಾನ ಮಂಡಲದ ಕಲಾಪದ ವರದಿಗಾರಿಕೆಯ ಬಗ್ಗೆಗಿನ ಪಠ್ಯ ಸೇರ್ಪಡೆಯಾಗಬೇಕು. ಬಜೆಟ್ ಎಂದರೆ ಯೋಜನೆಗಳು ಎಂಬುದಕ್ಕೆ ಸೀಮಿತಗೊಳ್ಳದೆ ದೂರದೃಷ್ಟಿಯ ದಾಖಲೆ, ಆಡಳಿತದ ವಿಧಾನ ಎಂಬಂತೆ ವಿಶ್ಲೇಷಣೆಗೆ ಒಳಗೊಳ್ಳಬೇಕು ಎಂದು ಹೇಳಿದರು.
ಶಿಬಿರದಲ್ಲಿ ವಿಧಾನಸಭೆಯ ಕಾರ್ಯದರ್ಶಿ ಎಂ.ಕೆ.ವಿಶಾಲಾಕ್ಷಿ ಸೇರಿದಂತೆ ಮುದ್ರಣ ಹಾಗೂ ವಿದ್ಯುನ್ಮಾನ ಮಾಧ್ಯಮದವರು ಉಪಸ್ಥಿತರಿದ್ದರು.







