ಬೆಂಗಳೂರು ಶಿಕ್ಷಕರ ಕ್ಷೇತ್ರದ ಉಪಚುನಾವಣೆ; ಕಾಂಗ್ರೆಸ್ ಅಭ್ಯರ್ಥಿ ಪುಟ್ಟಣ್ಣಗೆ ಗೆಲುವು

ಬೆಂಗಳೂರು: ವಿಧಾನ ಪರಿಷತ್ತಿನ ಬೆಂಗಳೂರಿನ ಶಿಕ್ಷಕರ ಕ್ಷೇತ್ರದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪುಟ್ಟಣ್ಣ ಅವರು ಗೆಲುವು ಸಾಧಿಸಿದ್ದಾರೆ.
ಬಿಜೆಪಿ-ಜೆಡಿಎಸ್ ಮೈತ್ರಿಯ ಅಭ್ಯರ್ಥಿಯಾಗಿದ್ದ ಎ.ಪಿ.ರಂಗನಾಥ್ ಅವರನ್ನು 1,507 ಮತಗಳ ಅಂತರದಿಂದ ಸೋಲಿಸಿರುವ ಪುಟ್ಟಣ್ಣ ಅವರು, ಮತ್ತೊಮ್ಮೆ ವಿಧಾನ ಪರಿಷತ್ ಪ್ರವೇಶ ಮಾಡಲಿದ್ದಾರೆ.
ಕಾಂಗ್ರೆಸ್ ಅಭ್ಯರ್ಥಿ ಪುಟ್ಟಣ್ಣ ಒಟ್ಟು 8,260 ಮತಗಳನ್ನು ಗಳಿಸಿದ್ದರೆ, ಬಿಜೆಪಿ-ಜೆಡಿಎಸ್ ಅಭ್ಯರ್ಥಿ ಎ.ಪಿ.ರಂಗನಾಥ್-6,753 ಮತಗಳನ್ನು ಪಡೆದಿದ್ದಾರೆ. ಶಿಕ್ಷಕರ ಕ್ಷೇತ್ರ ಉಪ ಚುನಾವಣೆಗೆ ಬೆಂ.ನಗರ, ಗ್ರಾಮಾಂತರ ಹಾಗೂ ರಾಮನಗರ ಜಿಲ್ಲೆ ವ್ಯಾಪ್ತಿಯ ಒಟ್ಟು 19,152 ಮತದಾರರ ಪೈಕಿ 16,544 ಮಂದಿ ಮತ ಚಲಾಯಿಸಿದ್ದರು.
ಈ ಹಿಂದೆ ಇದೇ ಕ್ಷೇತ್ರದಿಂದ ಆಯ್ಕೆಯಾಗಿದ್ದ ಪುಟ್ಟಣ್ಣ, ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ರಾಜೀನಾಮೆ ನೀಡಿದ್ದರಿಂದ ತೆರವಾಗಿದ್ದ ಸ್ಥಾನಕ್ಕೆ ಫೆ.16ರಂದು ಉಪಚುನಾವಣೆ ನಡೆದಿತ್ತು. ಇದೀಗ ಪುನಃ ಪುಟ್ಟಣ್ಣ ಅವರು ಗೆಲುವು ಸಾಧಿಸಿದ್ದು, ಅವರ ಅವಧಿ 2026ರ ನವೆಂಬರ್ 11ರ ವರೆಗೆ ಇದೆ ಎಂದು ಗೊತ್ತಾಗಿದೆ.





