ರಾಮನಗರ ಬಾಲಕಿಯ ಹತ್ಯೆ ಪ್ರಕರಣ | ಎಲ್ಲ ಆಯಾಮಗಳಲ್ಲೂ ತನಿಖೆ, ನ್ಯಾಯ ಕೊಡಿಸುವ ಜವಾಬ್ದಾರಿ ನಮ್ಮದು : ಡಿ.ಕೆ.ಶಿವಕುಮಾರ್

ಬೆಂಗಳೂರು : ರಾಮನಗರ ಜಿಲ್ಲೆಯ ಬಾಲಕಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎಲ್ಲ ಆಯಾಮಗಳಲ್ಲೂ ತನಿಖೆ ನಡೆಯುತ್ತಿದೆ. ಸಂತ್ರಸ್ಥ ಕುಟುಂಬಕ್ಕೆ ನ್ಯಾಯ ಕೊಡಿಸುವ ಜವಾಬ್ದಾರಿ ನಮ್ಮದು ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಭರವಸೆ ನೀಡಿದ್ದಾರೆ.
ಬುಧವಾರ ರಾಮನಗರ ಜಿಲ್ಲೆಯ ಭದ್ರಾಪುರದಲ್ಲಿರುವ ಸಂತ್ರಸ್ಥ ಕುಟುಂಬಸ್ಥರನ್ನು ಭೇಟಿ ಮಾಡಿ ಸಾಂತ್ವನ ತಿಳಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾಪತ್ತೆಯಾಗಿದ್ದ ಬಾಲಕಿ ರೈಲು ಹಳಿ ಪಕ್ಕದಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಮೇಲ್ನೋಟಕ್ಕೆ ಮಾರಣಾಂತಿಕವಾಗಿ ಹಲ್ಲೆ ಮಾಡಿ ಹತ್ಯೆ ಮಾಡಲಾಗಿದೆ ಎಂದು ತಿಳಿದುಬಂದಿದೆ. ಈ ಕೊಲೆ ಸಾಕಷ್ಟು ಅನುಮಾನಸ್ಪದವಾಗಿದೆ. ಈ ಬಗ್ಗೆ ಕುಟುಂಬಸ್ಥರ ಬಳಿ ಮಾಹಿತಿ ಪಡೆದಿದ್ದು, ಎಲ್ಲ ಆಯಾಮಗಳಲ್ಲೂ ಸೂಕ್ತ ತನಿಖೆ ನಡೆಸಲು ಪೊಲೀಸರಿಗೆ ಸೂಚಿಸಿದ್ದೇನೆ ಎಂದರು.
ಪ್ರಕರಣದಲ್ಲಿ ಕೆಲ ಸಾಕ್ಷ್ಯಗಳನ್ನು ಎಫ್‍ಎಸ್‍ಎಲ್‍ಗೆ ಕಳುಹಿಸಲಾಗಿದೆ. ಬಾಲಕಿ ತಾಯಿ ಮತ್ತು ಸಹೋದರಿ ಬಳಿ ಮಾತನಾಡಿದ್ದೇನೆ. ಅಂತ್ಯಸಂಸ್ಕಾರಕ್ಕೆ ಪರಿಹಾರ ಕೊಡುವ ಕೆಲಸ ಮಾಡಿದ್ದೇವೆ. ಈ ಪ್ರಕರಣದಲ್ಲಿ ಅತ್ಯಾಚಾರ ಆಗಿದೆಯಾ? ಇಲ್ಲವಾ? ಎಂಬುದು ಎಫ್‍ಎಸ್‍ಎಲ್ ವರದಿ ಬಂದ ಬಳಿಕ ಗೊತ್ತಾಗಲಿದೆ ಎಂದು ಡಿ.ಕೆ.ಶಿವಕುಮಾರ್ ಹೇಳಿದರು.
ಘಟನೆ ನಡೆದಿರುವ ಗ್ರಾಮದಲ್ಲಿ ಮೂಲಸೌಕರ್ಯಗಳ ಕೊರತೆಯಿದೆ, ಬೀದಿ ದೀಪಗಳ ವ್ಯವಸ್ಥೆಯಿಲ್ಲ ಎನ್ನುವ ಆರೋಪದ ಬಗ್ಗೆ ಪ್ರಶ್ನಿಸಿದಾಗ, ಈಗ ಈ ಪ್ರಕರಣದ ಜತೆಗೆ ಬೇರೆ ವಿಚಾರಗಳನ್ನು ಬೆರೆಸಲು ಹೋಗುವುದಿಲ್ಲ. ಮೂಲ ಸೌಕರ್ಯಗಳ ವ್ಯವಸ್ಥೆ ಮಾಡಲಾಗುವುದು ಎಂದು ಡಿ.ಕೆ.ಶಿವಕುಮಾರ್ ತಿಳಿಸಿದರು.
ಇದೇ ಸಂದರ್ಭದಲ್ಲಿ ಕುಣಿಗಲ್ ಶಾಸಕ ಡಾ.ರಂಗನಾಥ್, ರಾಮನಗರದ ಜಿಲ್ಲಾಧಿಕಾರಿ ಯಶವಂತ್ ಗುರುಕರ್, ಎಸ್ಪಿ ಶ್ರೀನಿವಾಸಗೌಡ, ಕಾಂಗ್ರೆಸ್ ಮುಖಂಡ ಗಾಣಕಲ್ ನಟರಾಜ್ ಮತ್ತಿತರರು ಉಪಸ್ಥಿತರಿದ್ದರು.
4.62 ಲಕ್ಷ ರೂ. ಪರಿಹಾರ ವಿತರಣೆ: ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಕೊಲೆಯಾದ ಬಾಲಕಿಯ ಗ್ರಾಮಕ್ಕೆ ಭೇಟಿ ನೀಡಿ ಸಂತ್ರಸ್ಥ ಕುಟುಂಬಸ್ಥರಿಗೆ ಸಾಂತ್ವನ ತಿಳಿಸಿದ್ದು, ಜಿಲ್ಲಾಡಳಿತದ ವತಿಯಿಂದ 4,12,500 ರೂ. ಹಾಗೂ ಗ್ರಾಮ ಪಂಚಾಯಿತಿ ವತಿಯಿಂದ 50 ಸಾವಿರ ರೂ. ಪರಿಹಾರದ ಚೆಕ್ ವಿತರಣೆ ಮಾಡಿದರು.