ಅಂಗನವಾಡಿ ಕಾರ್ಯಕರ್ತೆ-ಸಹಾಯಕಿಯರ ನೇಮಕಾತಿಗೆ ಸೂಕ್ತ ಕ್ರಮ ವಹಿಸಿ : ಸಿದ್ದರಾಮಯ್ಯ ಸೂಚನೆ
ಡಿಸಿ, ಸಿಇಒಗಳ ಜೊತೆ ಸಿಎಂ ಸಭೆ

ಸಿದ್ದರಾಮಯ್ಯ
ಬೆಂಗಳೂರು : ಅಂಗನವಾಡಿ ಕಾರ್ಯಕರ್ತೆಯರ ಹಾಗೂ ಸಹಾಯಕಿಯರ ನೇಮಕಾತಿ ಮಾಡಿಕೊಳ್ಳಲು ಸರಿಯಾಗಿ ಕ್ರಮ ವಹಿಸಲಾಗುತ್ತಿಲ್ಲ. ಅಧಿಕಾರಿಗಳು ಈ ಬಗ್ಗೆ ಗಮನಹರಿಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚಿಸಿದರು.
ಡಿಸಿ, ಸಿಇಒಗಳ ಸಭೆಯಲ್ಲಿ ಮೇಲಿನಂತೆ ಸೂಚಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ನಿರುದ್ಯೋಗ ಸಮಸ್ಯೆ ಇರುವ ಸಂದರ್ಭದಲ್ಲಿ ಅಂಗನವಾಡಿ ಕಾರ್ಯಕರ್ತೆಯರ ಹಾಗೂ ಸಹಾಯಕಿಯರ ನೇಮಕಾತಿ ಬಗ್ಗೆ ಆಸಕ್ತಿ ವಹಿಸಬೇಕು. ಇವರಿಗೆ ಗೌರವ ಧನ ನೀಡಲಾಗುತ್ತಿದೆ. ಹೆಚ್ಚಿನ ಸಂಖ್ಯೆಯಲ್ಲಿ ನೇಮಕಾತಿಗೆ ಆಗದಿರುವುದಕ್ಕೆ ಯಾರು ಹೊಣೆ ಎಂದು ಪ್ರಶ್ನಿಸಿದರು.
700 ಬಾಲ್ಯ ವಿವಾಹ ಪ್ರಕರಣಗಳು: ತಡೆಗಟ್ಟಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಿ :
ಬಾಲ್ಯ ವಿವಾಹ ತಡೆಗಟ್ಟಲು ಜಿಲ್ಲಾ ಸಮಿತಿಗಳು ಸಕ್ರಿಯವಾಗಬೇಕು. 700 ಬಾಲ್ಯ ವಿವಾಹ ಪ್ರಕರಣಗಳು ಘಟಿಸಿದ್ದು, ಇದನ್ನು ತಡೆಗಟ್ಟಲು ಕ್ರಮ ತೆಗೆದುಕೊಳ್ಳಿ ಎಂದು ಮುಖ್ಯಮಂತ್ರಿಗಳು ಕಟ್ಟುನಿಟ್ಟಿನ ಸೂಚನೆ ನೀಡಿದರು.
ಅಪೌಷ್ಟಿಕತೆ ಮಟ್ಟವನ್ನು ಕ್ರಮೇಣ ಶೇ.1ಕ್ಕೆ ಇಳಿಸಿ :
ವಿಜಯನಗರ ಜಿಲ್ಲೆಯಲ್ಲಿ ಅಪೌಷ್ಟಿಕತೆ ಮಟ್ಟ ಶೇಕಡ 5.53 ರಷ್ಟಿದೆ. ಬೀದರ್ ನಲ್ಲಿ ಶೇ.5.6 ರಷ್ಟಿದ್ದರೆ , ಬಳ್ಳಾರಿ ಜಿಲ್ಲೆಯಲ್ಲಿ ಶೇ.4.39 ರಷ್ಟಿದೆ. ಮಕ್ಕಳ ಪೌಷ್ಠಿಕತೆಗಾಗಿ ಶಾಲೆಗಳಲ್ಲಿ ಒದಗಿಸಲಾಗುವ ಹಾಲು, ಮೊಟ್ಟೆ ಸಮರ್ಪಕವಾಗಿ ನೀಡಲಾಗುತ್ತಿರುವ ಬಗ್ಗೆ ಪರಿಶೀಲನೆ ನಡೆಸಬೇಕು.
ಅಪೌಷ್ಟಿಕತೆ ಮಟ್ಟವನ್ನು ದಿಢೀರನೆ ಸರಿಮಾಡಲು ಆಗದಿದ್ದರೂ ಕ್ರಮೇಣ ಸರಿ ಮಾಡಲು ಅವಕಾಶಗಳಿವೆ. ಅಪೌಷ್ಟಿಕತೆ ಮಟ್ಟವನ್ನು ಶೇ.1ಕ್ಕೆ ಇಳಿಸಲು ಕ್ರಮ ವಹಿಸಿ ಎಂದು ಮುಖ್ಯಮಂತ್ರಿಗಳು ಸೂಚನೆ ನೀಡಿದರು.







