ಪ್ರಸಕ್ತ ವರ್ಷದಿಂದಲೇ ಶಾಲಾ ಮಕ್ಕಳಿಗೆ ರಸ್ತೆ ಸುರಕ್ಷತೆಯ ಕುರಿತು ಪಾಠ

ಸಾಂದರ್ಭಿಕ ಚಿತ್ರ | PC : Meta AI
ಬೆಂಗಳೂರು : ಪ್ರಸಕ್ತ ಶೈಕ್ಷಣಿಕ ಸಾಲಿನ ಪಠ್ಯದಲ್ಲಿ ಟ್ರಾಫಿಕ್ ಲೈಟ್, ಸಂಚಾರ, ವೈಯುಕ್ತಿಕ ಸುರಕ್ಷತೆ, ರಸ್ತೆ ಸುರಕ್ಷತೆಯ ಕುರಿತು ಪಠ್ಯಗಳನ್ನು ಅಳವಡಿಸಲಾಗಿದೆ ಎಂದು ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆ ತಿಳಿಸಿದೆ.
ಈ ಸಂಬಂಧ ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆಯ ನಿರ್ದೇಶಕರು ಆದೇಶ ಹೊರಡಿಸಿದ್ದು, ರಾಜ್ಯ ಪಠ್ಯಕ್ರಮ ಅನುಸರಿಸುತ್ತಿರುವ ಶಾಲೆಗಳಿಗೆ ಅನ್ವಯಿಸುವಂತೆ 2ನೇ ತರಗತಿ, 4, 6, 7 ಮತ್ತು 9ನೇ ತರಗತಿಯ ಮಕ್ಕಳಿಗೆ ಸಂಚಾರ ಸುರಕ್ಷತೆ ಕುರಿತು ಪಠ್ಯ ಅಳವಡಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.
2ನೇ ತರಗತಿಯ ಹಿಂದಿ ಪ್ರಥಮ ಭಾಷೆ ವಿಷಯದಲ್ಲಿ ಟ್ರಾಫಿಕ್ ಲೈಟ್ಸ್ ಬಗ್ಗೆ, 4ನೇ ತರಗತಿಯ ಆಂಗ್ಲ ದ್ವಿತೀಯ ಭಾಷೆಯಲ್ಲಿ ಟ್ರಾವೆಲ್, 4ನೇ ತರಗತಿಯ ಆಂಗ್ಲ ಪರಿಸರ ಅಧ್ಯಯನದಲ್ಲಿ ಟ್ರಾಫಿಕ್ ರೂಲ್ಸ್, 6ನೇ ತರಗತಿಯ ದೈಹಿಕ ಶಿಕ್ಷಣದಲ್ಲಿ ವೈಯಕ್ತಿಕ ಸುರಕ್ಷತೆ, 7ನೇ ತರಗತಿಯ ಆಂಗ್ಲ ದ್ವಿತೀಯ ಭಾಷೆ ವಿಷಯದಲ್ಲಿ ರೋಡ್ ಸೇಫ್ಟಿ ಮತ್ತು 9ನೇ ತರಗತಿಯ ತೃತೀಯ ಭಾಷೆ ಹಿಂದಿಯಲ್ಲಿ ಸಡಕ್ ಕೀ ರಕ್ಷಾ ಸಬ್ ಕೀ ಸುರಾಕ್ಷ ಪಠ್ಯಗಳನ್ನು ಅಳವಡಿಸಲಾಗಿದೆ ಎಂದು ಅವರು ಹೇಳಿದ್ದಾರೆ.