ಕಾಲ್ತುಳಿತ ಪ್ರಕರಣ | ಸರಕಾರದ ಅಮಾನತು ಪ್ರಶ್ನಿಸಿ ಸಿಎಟಿಗೆ ಐಪಿಎಸ್ ಅಧಿಕಾರಿ ಅರ್ಜಿ

ಆರ್ಸಿಬಿ ಗೆಲುವಿನ ಸಂಭ್ರಮಾಚರಣೆ ವೇಳೆ ಉಂಟಾದ ಕಾಲ್ತುಳಿತ ಹಿನ್ನಲೆಯಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿರುವ ಚಪ್ಪಲಿಗಳು
ಬೆಂಗಳೂರು : ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಕಾಲ್ತುಳಿತ ಪ್ರಕರಣದಲ್ಲಿ 11 ಜನರ ಸಾವು ಪ್ರಕರಣ ಸಂಬಂಧ ಅಮಾನತಾಗಿರುವ ಪಶ್ಚಿಮ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತರಾಗಿದ್ದ ವಿಕಾಸ್ ಕುಮಾರ್ ಅವರು ರಾಜ್ಯ ಸರಕಾರದ ಕ್ರಮವನ್ನು ಪ್ರಶ್ನಿಸಿ ಕೇಂದ್ರೀಯ ಆಡಳಿತಾತ್ಮಕ ನ್ಯಾಯಮಂಡಳಿ (ಸಿಎಟಿ)ಗೆ ಅರ್ಜಿ ಸಲ್ಲಿಸಿದ್ದಾರೆ.
ಸಿಎಟಿ ಕೇಂದ್ರ ಆಡಳಿತ ನ್ಯಾಯಮಂಡಳಿ ಕಾಯ್ದೆಯಡಿಯಲ್ಲಿ ಸ್ಥಾಪಿಸಲಾದ ಅರೆ ನ್ಯಾಯಾಂಗ ಸಂಸ್ಥೆಯಾಗಿದ್ದು, ಭಾರತದ ಕೇಂದ್ರ ಸರಕಾರಿ ನೌಕರರು ಮತ್ತು ರಾಜ್ಯ ಸರಕಾರಿ ನೌಕರರ ಕುಂದುಕೊರತೆಗಳನ್ನು ತ್ವರಿತ ಮತ್ತು ಪರಿಣಾಮಕಾರಿ ರೀತಿಯಲ್ಲಿ ಪರಿಹರಿಸುತ್ತದೆ.
ಇದೀಗ ಶಿಸ್ತು ಕ್ರಮಕ್ಕೆ ಕಾರಣವಾದ ಹಿನ್ನೆಲೆಯಲ್ಲಿ ಅಮಾನತುಗೊಂಡಿರುವ ಹೆಚ್ಚುವರಿ ಪೊಲೀಸ್ ಆಯುಕ್ತ ವಿಕಾಶ್ ಕುಮಾರ್ ಅವರು ತಮ್ಮ ಅಮಾನತು ಪ್ರಶ್ನಿಸಿ ಸಿಎಟಿ ಮೊರೆ ಹೋಗಿದ್ದು ವಿಚಾರಣೆ ನಡೆಸುವ ಸಾಧ್ಯತೆ ಇದೆ.
ಇನ್ನೂ, ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ 11 ಮಂದಿ ಪ್ರಾಣ ಕಳೆದುಕೊಂಡ ಬಳಿಕ ವ್ಯಾಪಕ ಆಕ್ರೋಶ ವ್ಯಕ್ತವಾದ ನಂತರ ರಾಜ್ಯ ಸರಕಾರ ಬೆಂಗಳೂರು ನಗರ ಪೊಲೀಸ್ ಕಮಿಷನರ್ ಸೇರಿ ಐವರು ಪ್ರಮುಖ ಪೊಲೀಸ್ ಅಧಿಕಾರಿಗಳನ್ನು ಕರ್ತವ್ಯ ಲೋಪದ ಕಾರಣ ನೀಡಿ ಅಮಾನತು ಮಾಡಿತ್ತು.
ಪಿಐಎಲ್ ಸಲ್ಲಿಕೆ: ಮತ್ತೊಂದೆಡೆ, ಇದೇ ಪ್ರಕರಣ ಸಂಬಂಧ ಹೈಕೋರ್ಟ್ನ ಹಾಲಿ ನ್ಯಾಯಮೂರ್ತಿ ನೇತೃತ್ವದ ನ್ಯಾಯಾಂಗ ತನಿಖೆಗೆ ಆದೇಶಿಸಬೇಕು ಎಂದು ವಕೀಲ ಹಾಗೂ ಸಾಮಾಜಿಕ ಕಾರ್ಯಕರ್ತ ಗಿರೀಶ್ ಭಾರದ್ವಾಜ್ ಕರ್ನಾಟಕ ಹೈಕೋರ್ಟ್ನ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಕಾಮೇಶ್ವರ ರಾವ್ ಅವರಿಗೆ ಮನವಿ ಸಲ್ಲಿಸಿದ್ದಾರೆ.
ಸಿದ್ಧತೆ ಇಲ್ಲದೇ ಇರುವುದರಿಂದ ಸೂಕ್ಷ್ಮ ಪ್ರದೇಶವಾದ ವಿಧಾನ ಸೌಧದ ಬಳಿ ಆರ್ಸಿಬಿ ವಿಜಯೋತ್ಸವ ನಡೆಸುವುದು ಸೂಕ್ತವಲ್ಲ ಎಂದು ವಿಧಾನ ಸೌಧ ಭದ್ರತಾ ವಿಭಾಗದ ಡಿಸಿಪಿಯು ಜೂನ್ 4ರಂದು ನೀಡಿರುವ ವರದಿಯನ್ನು ಮನವಿಯಲ್ಲಿ ಉಲ್ಲಂಘಿಸಲಾಗಿದೆ. ಹೀಗಾಗಿ, ವಿಧಾನ ಸೌಧ ಮತ್ತು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿನ ಸಮಾರಂಭಕ್ಕೆ ಸಂಬಂಧಿಸಿದ ಎಲ್ಲಾ ಅಧಿಕೃತ ದಾಖಲೆಗಳು, ಸಂವಹನ, ಅನುಮತಿ ಮತ್ತು ವರದಿಗಳನ್ನು ಜಪ್ತಿ ಮಾಡಲು ಆದೇಶಿಸಬೇಕು. ಸ್ವತಂತ್ರ ಮತ್ತು ಕಾಲಮಿತಿಯಲ್ಲಿ ಹೈಕೋರ್ಟ್ನ ಹಾಲಿ ನ್ಯಾಯಮೂರ್ತಿಯೊಬ್ಬರ ನೇತೃತ್ವದಲ್ಲಿ ತನಿಖೆಗೆ ಆದೇಶಿಸಬೇಕು ಎಂದು ಗಿರೀಶ್ ಮನವಿ ಮಾಡಿದ್ದಾರೆ.
ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ನೇತೃತ್ವದಲ್ಲಿ ಸತ್ಯ ಶೋಧನೆಗೆ ಮತ್ತು ಸಂತ್ರಸ್ತರಿಗೆ ನೆರವು ನೀಡಲು ಸಮಿತಿಯನ್ನು ರಚಿಸಬೇಕು. ಪರ್ಯಾಯವಾಗಿ ಮ್ಯಾಜಿಸ್ಟೀರಿಯಲ್ ತನಿಖೆ ಮತ್ತು ನಿವೃತ್ತ ನ್ಯಾಯಮೂರ್ತಿ ಮೈಕೆಲ್ ಕುನ್ಹಾ ನೇತೃತ್ವದಲ್ಲಿ ತನಿಖೆಗೆ ಆಯೋಗ ರಚಿಸಿರುವುದಕ್ಕೆ ತಡೆ ನೀಡಬೇಕು ಎಂದು ಮನವಿ ಮಾಡಲಾಗಿದೆ.
ಇನ್ನೂ, ಕಾಲ್ತುಳಿತ ಘಟನೆ ಸಂಬಂಧ ಈಗಾಗಲೇ ಹೈಕೋರ್ಟ್ ಸ್ವಯಂಪ್ರೇರಿತ ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾಖಲಿಸಿಕೊಂಡು, ವಸ್ತುಸ್ಥಿತಿ ವರದಿ ಸಲ್ಲಿಸಲು ರಾಜ್ಯ ಸರಕಾರಕ್ಕೆ ಆದೇಶಿಸಿದ್ದು, ಆ ಅರ್ಜಿಯ ವಿಚಾರಣೆ ಜೂ.10ಕ್ಕೆ ನಿಗದಿಯಾಗಿದೆ.