ಮತೀಯವಾದಿ ಮನಸ್ಸುಗಳಿಗೆ ಡಾ.ಅಂಬೇಡ್ಕರ್, ಸಂವಿಧಾನ ಕಹಿಯಾಗಿದೆ : ಸಚಿವ ಎಚ್.ಸಿ.ಮಹದೇವಪ್ಪ

ಎಚ್.ಸಿ.ಮಹದೇವಪ್ಪ
ಬೆಂಗಳೂರು : ಮತೀಯವಾದದ ಮನಸ್ಸುಗಳಿಗೆ ಡಾ.ಅಂಬೇಡ್ಕರ್ ಮತ್ತು ಅವರ ಸಂವಿಧಾನ ಕಹಿಯಾಗಿದೆ. ಹೀಗಾಗಿಯೇ ಅವರಿಗೆ ಸಹಿಸಿಕೊಳ್ಳಲು ಆಗುತ್ತಿಲ್ಲ ಎಂದು ಸಮಾಜ ಕಲ್ಯಾಣ ಇಲಾಖೆ ಸಚಿವ ಡಾ.ಎಚ್.ಸಿ.ಮಹದೇವಪ್ಪ ಅಭಿಪ್ರಾಯಪಟ್ಟಿದ್ದಾರೆ.
ಸೋಮವಾರ ನಗರದ ಜ್ಞಾನಜ್ಯೋತಿ ಸಭಾಂಗಣದಲ್ಲಿ ದಲಿತ ಸಂಘರ್ಷ ಸಮಿತಿಯ ವತಿಯಿಂದ ಆಯೋಜಿಸಿದ್ದ ಪ್ರೊ.ಬಿ.ಕೃಷ್ಣಪ್ಪ ಅವರ ನೆನಪಿನಲ್ಲಿ ‘ನಾಗರಿಕರ ಹಕ್ಕು ರಕ್ಷಣಾ ದಿನ’ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಭಾರತೀಯರಾದ ನಾವೆಲ್ಲರು ಎದ್ದು ನಿಲ್ಲಬೇಕು. ಆಗ ಮಾತ್ರ ಸಮೃದ್ಧ ಭಾರತ ಕಟ್ಟಲು ಸಾಧ್ಯವಾಗುತ್ತದೆ. ಇನ್ನೂ ಕೂಡ ಸಾಮಾಜಿಕ ಅಸಮಾನತೆ ಹೋಗಿಲ್ಲ. ಸ್ವಾತಂತ್ರ್ಯ ಬಂದು ಸಮಾನತೆ ಬರದೇ ಇದ್ದರೆ ಸ್ವಾತಂತ್ರ್ಯಕ್ಕೆ ಏನು ಅರ್ಥ ಇದೆ ಎಂದು ಪ್ರಶ್ನಿಸಿದರು.
ಸ್ವಾತಂತ್ರ್ಯ ಮತ್ತು ಸಮಾನತೆ ಇದ್ದೂ ಬ್ರಾತೃತ್ವ ಇಲ್ಲದಿದ್ದರೇ ಸೌಹಾರ್ದಕ್ಕೆ ಎಲ್ಲಿ ಬೆಲೆ ಇದೆ. ಎಲ್ಲವೂ ಒಂದಕ್ಕೊಂದು ಸಂಬಂಧ ಹೊಂದಿವೆ. ಅಮೇರಿಕಾದ ಮಾಜಿ ಅಧ್ಯಕ್ಷ ಒಬಾಮ ಬಂದು ಸಂವಿಧಾನದ ಬಗ್ಗೆ ಹೇಳಬೇಕಾಯಿತು. ಅವರು ಸಂಸತ್ತನ್ನು ಉದ್ದೇಶಿಸಿ ಮಾತನಾಡುವಾಗ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಕಷ್ಟಪಟ್ಟು ಅಧ್ಯಯನ ಮಾಡಿ, 140ಕೋಟಿ ಜನರ ಹಕ್ಕುಗಳನ್ನು ರಕ್ಷಣೆ ಮಾಡುವ ಶೇಷ್ಠ ಸಂವಿಧಾನ ನೀಡಿದ್ದಾರೆ ಎಂದು ಹೇಳಿದ್ದರು. ಒಬಾಮ ಅವರು ಅಮೇರಿಕಾದ ಅಧ್ಯಕ್ಷರಾದ ಮೇಲೆ ರಾಜತಾಂತ್ರಿಕ ಸಂಬಂಧವೇ ಬದಲಾದವು ಎಂದು ಹೇಳಿದರು.
ಪ್ರತಿ ಹಳ್ಳಿಗಳಲ್ಲಿ ಅಂಬೇಡ್ಕರ್ ಜಯಂತಿ ಮಾಡಲಾಗುತ್ತದೆ. ಅದು ಕೇರಿ ಅಥವಾ ಬೀದಿಯನ್ನು ದಾಟಿ ಬಂದರೆ ಕಲ್ಲಿನಿಂದ ಹೊಡೆಯಲಾಗುತ್ತಿತ್ತು. ಅದಕ್ಕಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜತೆಗೆ ಚರ್ಚಿಸಿ ಸಂವಿಧಾನ ಜಾಗೃತಿ ಜಾಥಾ ಆಯೋಜನೆ ಮಾಡಲಾಯಿತು. ಯಾವ ಜನ ದಲಿತರು ಕೇರಿಯಿಂದ ಹೊರಗಡೆ ಬಂದಾಗ ಪ್ರತಿಭಟನೆ ಮಾಡುತ್ತಿದ್ದರೋ ಸ್ವತಃ ಅವರೇ ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ವಿಜೃಂಭಣೆಯಿಂದ ಸಂವಿಧಾನ ಜಾಥಾವನ್ನು ಮಾಡಿದರು ಎಂದು ಅವರು ತಿಳಿಸಿದರು.
ದೇಶದಲ್ಲಿ ಪ್ರಜಾಪ್ರಭುತ್ವ ಇಲ್ಲದಿದ್ದರೆ ನಾವು ಪ್ರಾಣಿಗಳಂತೆ ಬದುಕಬೇಕಾಗುತ್ತದೆ ಎಂದು ಡಾ.ಅಂಬೇಡ್ಕರ್ ಅವರು ಹೇಳಿದ್ದರು. ಫ್ಯೂಡಲ್ಸ್, ಜಾತಿವಾದಿ ಮತ್ತು ಬಂಡವಾಳಶಾಹಿಗಳು ಅಧಿಕಾರದಲ್ಲಿದ್ದಾರೆ. ಇವರ ನಡುವೆಯೇ ಪ್ರಜಾಪ್ರಭುತ್ವನ್ನು ಬಲರ್ವಧನೆ ಮಾಡಬೇಕಾದರೆ ಬೀದರ್ನಿಂದ ಚಾಮರಾಜನಗರದ ವರೆಗೆ ಪ್ರಜಾಪ್ರಭುತ್ವದ ಮಾನವ ಸರಪಳಿಯನ್ನು 25ಲಕ್ಷ ಜನರನ್ನು ಸೇರಿಸಿ ಆಯೋಜಿಸಿದೆವು ಎಂದು ಮಹದೇವಪ್ಪ ತಿಳಿಸಿದರು.
ಪ್ರೊ.ಬಿ.ಕೃಷ್ಣಪ್ಪ ಅವರು ಅವರ ನಿಲುವುಗಳು, ಕಾರ್ಯಕ್ರಮ ಮತ್ತು ಸಿದ್ಧಾಂತದ ಮೂಲಕ ಪ್ರೇರಣಾ ಶಕ್ತಿಯಾಗಿದ್ದಾರೆ. ನಾವೆಲ್ಲರೂ ಒಟ್ಟಾಗಿ ಬಹಿಷ್ಕೃತ ಹಿತಕಾರಿಣಿ ಸಭೆಯ ಉದ್ದೇಶಗಳಾದ ಶಿಕ್ಷಣ, ಸಂಘಟನೆ, ಹೋರಾಟವ ಮುಂದುವರಿಸಬೇಕು. ಈಗಲೂ ಅಸ್ಪೃಶ್ಯತೆ ನಡೆಯುತ್ತಿದೆ. ಸಾಮಾಜಿಕ ಬಹಿಷ್ಕಾರ ಆಗುತ್ತಿದೆ. ದಲಿತ ಮರಣಹೊಂದಿದರೆ ಸರಕಾರದ ರಸ್ತೆಯಲ್ಲಿ ಹೋಗುವುದಕ್ಕೆ ಬಿಡುವುದಿಲ್ಲ. ಹಿಂದೂ ಧರ್ಮದ ಪ್ರತಿಪಾದಕರು ಏನು ಮಾಡುತ್ತಿದ್ದೀರಿ ಎಂದು ಪ್ರಶ್ನಿಸಿದರು.
ದಸಂಸ ಪ್ರಧಾನ ಸಂಚಾಲಕ ಮಾವಳ್ಳಿ ಶಂಕರ್, ಹಿರಿಯ ಸಾಹಿತಿ ಪ್ರೊ.ನಟರಾಜ್ ಹುಳಿಯಾರ್, ಕವಿ ಸುಬ್ಬು ಹೊಲೆಯಾರ್, ಪ್ರೊ.ಬಿ.ಕೃಷ್ಣಪ್ಪ ಟ್ರಸ್ಟ್ ಅಧ್ಯಕ್ಷೆ ಇಂದಿರಾ ಕೃಷ್ಣಪ್ಪ, ಸಾಮಾಜಿಕ ಕಾರ್ಯಕರ್ತ ಶಿವಪ್ಪ ಅರಿವು, ದಲಿತ ಹೋರಾಟಗಾರ ಕುಂದೂರು ತಿಮ್ಮಯ್ಯ ಮತ್ತಿತರರು ಉಪಸ್ಥಿತರಿದ್ದರು.
ಜಗತ್ತು ಬದಲಿಸುವ ಶಕ್ತಿ ಸಿದ್ಧಾಂತಗಳಿಗಿದೆ: ‘ಜಗತ್ತನ್ನು ಬದಲಾಯಿಸುವ ಶಕ್ತಿ ಯಾವುದಾದರೂ ಇದ್ದರೆ ಅದು ಸಿದ್ಧಾಂತಗಳಿಗೆ ಮಾತ್ರ. ಸಿದ್ಧಾಂತಗಳು ಮಾತ್ರ ಮನುಷ್ಯ ಸಂಬಂಧವನ್ನು ಹೆಚ್ಚು ಜೀವಂತಗೊಳಿಸುತ್ತವೆ. ಸಿದ್ಧಾಂತ ಸಮಾಜಮುಖಿಯಾಗಲು ನಿರಂತರವಾಗಿ ಶ್ರಮಿಸಬೇಕು. ಶ್ರಮಿಸದಿದ್ದರೆ ಯಾವುದೇ ಸಿದ್ಧಾಂತ ತುಕ್ಕು ಹಿಡಿಯುತ್ತದೆ. ಡಾ.ಅಂಬೇಡ್ಕರ್ ವಾದವನ್ನು ಹೆಚ್ಚು ಜೀವಂತಗೊಳಿಸಿ, ಚಲನಶೀಲಗೊಳಿಸಿದವರು ಪ್ರೊ.ಬಿ.ಕೃಷ್ಣಪ್ಪ ಅವರು. ಪ್ರೊ.ಬಿ,.ಕೃಷ್ಣಪ್ಪ ಅವರ ಭೂಮಿಗಾಗಿ ನಡೆದ ಹೋರಾಟ ಇವತ್ತು 87ಲಕ್ಷ ರೈತ ಹಿಡುವಳಿಗಳು ಕರ್ನಾಟಕದಲ್ಲಿವೆ. ಅದರಲ್ಲಿ 15.2ಲಕ್ಷ ರೈತ ಹಿಡುವಳಿಗಳು ದಲಿತರಲ್ಲಿವೆ. ಈ ಭೂಮಿ ದಲಿತರಿಗೆ ಬರುವುದರ ಹಿಂದೆ ಕೆಲಸ ಮಾಡಿದವರು ಪ್ರೊ.ಬಿ.ಕೃಷ್ಣಪ್ಪ ಅವರು ಹಾಗೂ ದಲಿತ ಚಳವಳಿ’ ಎಂದು ಸಿಎಂ ಆಪ್ತ ಕಾರ್ಯದರ್ಶಿ ಡಾ.ನೆಲ್ಲುಕುಂಟೆ ವೆಂಕಟೇಶಯ್ಯ ತಿಳಿಸಿದರು.