ದ.ಕ. ಜಿಲ್ಲೆಯಲ್ಲಿ ಅಹಿತಕರ ಘಟನೆ | ಮಧ್ಯಂತರ ವರದಿ ಸಲ್ಲಿಸಿದ ಕೆಪಿಸಿಸಿ ಸತ್ಯಶೋಧನಾ ಸಮಿತಿ
ಗಲಭೆಗಳಿಗೆ ಧಾರ್ಮಿಕ ಅಸಹಿಷ್ಣುತೆ, ಪೊಲೀಸ್ ನಿಷ್ಕ್ರಿಯತೆ ಕಾರಣ : ವರದಿ

ಬೆಂಗಳೂರು : ದ.ಕ. ಜಿಲ್ಲೆಯಲ್ಲಿ ಇತ್ತೀಚೆಗೆ ನಡೆದ ಅಹಿತಕರ ಘಟನೆಗಳ ಹಿನ್ನೆಲೆಯಲ್ಲಿ ಸತ್ಯಾಸತ್ಯತೆ ಅರಿಯಲು ಕೆಪಿಸಿಸಿ ನೇಮಿಸಿದ್ದ ಎಐಸಿಸಿ ಪ್ರಧಾನ ಕಾರ್ಯದರ್ಶಿ ನಾಸಿರ್ ಹುಸೇನ್ ನೇತೃತ್ವದ ಸತ್ಯಶೋಧನಾ ಸಮಿತಿಯು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಗುರುವಾರ ಮಧ್ಯಂತರ ವರದಿ ಸಲ್ಲಿಸಿದೆ.
ವರದಿ ಸ್ವೀಕರಿಸಿ ಪ್ರತಿಕ್ರಿಯಿಸಿದ ಡಿ.ಕೆ.ಶಿವಕುಮಾರ್, ಕರಾವಳಿ ಪ್ರದೇಶದಲ್ಲಿ ಇತ್ತೀಚೆಗೆ ಕೋಮು ದ್ವೇಷದ ಪರಿಣಾಮ ಸರಣಿ ಹತ್ಯೆಗಳು ನಡೆದಿದ್ದು, ಇದು ಎಲ್ಲರಲ್ಲೂ ಆತಂಕವನ್ನು ಉಂಟುಮಾಡಿತ್ತು. ಇಂತಹ ಘಟನೆಗಳನ್ನು ತಡೆಯಲು ರಾಜ್ಯ ಸರಕಾರ ಈಗಾಗಲೇ ಅನೇಕ ಕ್ರಮಗಳನ್ನು ತೆಗೆದುಕೊಂಡಿದೆ. ಸ್ಥಳೀಯರ ಭಾವನೆ, ಪರಿಸ್ಥಿತಿ ಬಗ್ಗೆ ಅಧ್ಯಯನ ನಡೆಸಿ ವರದಿ ನೀಡಲು ಅಲ್ಲಿಗೆ ಪಕ್ಷದಿಂದ ಸತ್ಯಶೋಧನಾ ಸಮಿತಿ ಕಳುಹಿಸಲಾಗಿತ್ತು. ಸದ್ಯ ಮಧ್ಯಂತರ ವರದಿ ನಮಗೆ ತಲುಪಿದ್ದು, ಈ ವರದಿಯನ್ನು ಓದಿ ಮುಂದಿನ ತೀರ್ಮಾನ ತಿಳಿಸಲಾಗುವುದು ಎಂದರು.
ಈ ಸಂದರ್ಭ ಸತ್ಯಶೋಧನಾ ಸಮಿತಿಯ ಸದಸ್ಯರಾದ ಕೆಪಿಸಿಸಿ ಕಾರ್ಯಾಧ್ಯಕ್ಷ ಮಂಜುನಾಥ ಭಂಡಾರಿ, ಮಾಜಿ ಸಚಿವ ಕಿಮ್ಮನೆ ರತ್ನಾಕರ, ಕೆಪಿಸಿಸಿ ಉಪಾಧ್ಯಕ್ಷ ವಿ.ಆರ್.ಸುದರ್ಶನ್, ಮಾಜಿ ಸಂಸದ ಜಯಪ್ರಕಾಶ್ ಹೆಗ್ಡೆ ಇದ್ದರು.
ರಾಜಕೀಯ, ಧಾರ್ಮಿಕ ಅಸಹಿಷ್ಣುತೆ, ಮಾಫಿಯಾ, ಹೊರಗಿನವರ ಬೆಂಬಲ, ಪೊಲೀಸ್ ನಿಷ್ಕ್ರಿಯತೆ, ವ್ಯಾಪಕ ಪ್ರಚಾರ ಕೋಮು ಹತ್ಯೆಯಂತಹ ಘಟನೆಗಳಿಗೆ ಪ್ರಮುಖ ಕಾರಣ ಎಂದು ಮಧ್ಯಂತರ ವರದಿಯಲ್ಲಿ ಉಲ್ಲೇಖಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ರಾಜಕೀಯ ನಾಯಕರು ಧರ್ಮದ ಹೆಸರಿನಲ್ಲಿ ರಾಜಕೀಯ ಮಾಡುತ್ತಿದ್ದಾರೆ. ಅದರಲ್ಲೂ ಬಿಜೆಪಿ ಮತ್ತು ಸಂಘ ಪರಿವಾರದವರು ಜನರ ಧಾರ್ಮಿಕ ಭಾವನೆಗಳ ಮೇಲೆ ರಾಜಕೀಯ ಮಾಡುತ್ತಿದ್ದಾರೆ. ಕಾಂಗ್ರೆಸ್ ಮತ್ತು ಇತರೆ ಜಾತ್ಯತೀತ ರಾಜಕೀಯ ನಾಯಕರು ಈ ವಿಚಾರದಲ್ಲಿ ಸ್ಪಷ್ಟ ನಿಲುವು ಹೊಂದಿಲ್ಲ. ಅಲ್ಲದೆ, ಬಿಜೆಪಿ ವಿರೋಧಿ ಬಣದ ರಾಜಕೀಯ ಗೊಂದಲವೂ ಈ ಬೆಳವಣಿಗೆಗಳಿಗೆ ಕಾರಣ ಎಂಬುದು ವರದಿಯಲ್ಲಿದೆ ಎಂದು ಮೂಲಗಳು ಹೇಳಿವೆ.







