ಬಿಜೆಪಿ ಎಕ್ಸ್ ಖಾತೆಯಲ್ಲಿ ಇಂದಿರಾ ಗಾಂಧಿ ಬಗ್ಗೆ ಅವಹೇಳನಕಾರಿ ಪೋಸ್ಟ್: ಕಾಂಗ್ರೆಸ್‍ನಿಂದ ಪೊಲೀಸರಿಗೆ ದೂರು

ಬೆಂಗಳೂರು : ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ ಬಗ್ಗೆ ಬಿಜೆಪಿ ಸಾಮಾಜಿಕ ಜಾಲತಾನ ಎಕ್ಸ್ ಖಾತೆಯಲ್ಲಿ ಅವಹೇಳನಕಾರಿ ಪೋಸ್ಟ್ ಹಾಕಿದ್ದು, ಬಿಜೆಪಿ ವಿರುದ್ಧ ಅಗತ್ಯ ಕಾನೂನು ಕ್ರಮ ವಹಿಸುವಂತೆ ಕೋರಿ ಕೆಪಿಸಿಸಿ ಪ್ರದಾನ ಕಾರ್ಯದರ್ಶಿ ಎಸ್.ಮನೋಹರ್, ಪೊಲೀಸರಿಗೆ ದೂರು ನೀಡಿದ್ದಾರೆ.
ಇಂದಿರಾ ಗಾಂಧಿ ಬಗ್ಗೆ ಹಾಕಿರುವ ಅವಹೇಳನಕಾರಿ ಪೋಸ್ಟ್ ಸಮಾಜದಲ್ಲಿ ಗಲಭೆಯುಂಟಾಗಿ, ಧರ್ಮಗಳ ಮಧ್ಯೆ ವೈರತ್ವವನ್ನುಂಟು ಮಾಡುವಂತಿದೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಬುಧವಾರ ಮೊಬೈಲ್‍ನಲ್ಲಿ ಎಕ್ಸ್ ಖಾತೆಯನ್ನು ವೀಕ್ಷಿಸುತ್ತಿದ್ದಾಗ ಕರ್ನಾಟಕ ರಾಜ್ಯ ಬಿಜೆಪಿ ಪಕ್ಷದ ಅಧಿಕೃತ ಎಕ್ಸ್ ಖಾತೆ @BJP4Karnataka ಯಲ್ಲಿ ಸಂಜೆ 3:54ಗಂಟೆಗೆ ಇಂದಿರಾ ಇಂಡಿಯಾ ಇಂದಿರಾ ಎಂದು ಬರೆದು, 0.38 ನಿಮಿಷಗಳ ವಿಡಿಯೋವನ್ನು ಅಪ್‍ಲೋಡ್ ಮಾಡಿ, ಸದರಿ ವಿಡಿಯೋದಲ್ಲಿ ಭಾರತದ ತುರ್ತು ಪರಿಸ್ಥಿತಿ ಸಮಯಕ್ಕೆ ಸಂಬಂಧಿಸಿದ್ದಾಗಿದ್ದು, ಸದರಿ ವಿಡಿಯೋದಲ್ಲಿ ಇಂದಿರಾಗಾಂಧಿಯವರ ಫೋಟೋವನ್ನು ಹಿಟ್ಲರ್ ರೀತಿ ಗ್ರಾಫಿಕ್ಸ್ ಮಾಡಲಾಗಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಮಾಜಿ ಪ್ರಧಾನಿ ಬಗ್ಗೆ ಅವಹೇಳನಕಾರಿಯಾಗಿ ಪೋಸ್ಟ್ ಮಾಡಿ ಸಮಾಜದಲ್ಲಿ ಧರ್ಮಗಳ ಮದ್ಯೆ ವೈರತ್ವವನ್ನುಂಟು ಮಾಡುತ್ತಿದ್ದಾರೆ. ಆದ್ದರಿಂದ ರಾಜ್ಯ ಬಿಜೆಪಿ ಎಕ್ಸ್ ಖಾತೆದಾರರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಎಂದು ಕೋರಿದ್ದಾರೆ.





