ತೆಂಗಿಗೆ ಕಪ್ಪು ತಲೆ ಹುಳು ಬಾಧೆ: ನಿಯಂತ್ರಣಕ್ಕೆ ಕ್ರಮ ವಹಿಸಲು ಸಿಎಂ ಸೂಚನೆ

ಬೆಂಗಳೂರು: ತೆಂಗು ಬೆಳೆಗೆ ಕಾಡುತ್ತಿರುವ ಕಪ್ಪು ತಲೆ ಹುಳುವಿನ ಬಾಧೆ ನಿಯಂತ್ರಣಕ್ಕೆ ಕೂಡಲೇ ತಜ್ಞರಿಂದ ವರದಿ ಪಡೆದು ಸಮಸ್ಯೆ ಬಗೆಹರಿಸಲು ಪ್ರಸ್ತಾವ ಮಂಡಿಸಬೇಕು ಎಂದು ತೋಟಗಾರಿಕಾ ಇಲಾಖೆ ನಿರ್ದೇಶಕರಿಗೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದಿಲ್ಲಿ ಸೂಚನೆ ನೀಡಿದ್ದಾರೆ.
ಶನಿವಾರ ಈ ಸಂಬಂಧ ವಿಧಾನ ಪರಿಷತ್ ಸದಸ್ಯ ದಿನೇಶ್ ಗೂಳಿಗೌಡ ಬರೆದ ಪತ್ರವನ್ನು ಆಧರಿಸಿ ಮೇಲ್ಕಂಡ ಸೂಚನೆ ನೀಡಿದ ಸಿದ್ದರಾಮಯ್ಯ, ‘ತೆಂಗು ಬೆಳೆಗಾರರಿಗೆ ಕಪ್ಪು ತಲೆ ಹುಳುವಿನ ಬಾಧೆಯಿಂದ ಆಗುತ್ತಿರುವ ತೊಂದರೆ ತಪ್ಪಿಸಲು ತೋಟಗಾರಿಕೆ ಇಲಾಖೆ ಅಧಿಕಾರಿಗಳು ಕಟ್ಟುನಿಟ್ಟಿನ ಕ್ರಮ ವಹಿಸಬೇಕು’ ಎಂದು ನಿರ್ದೇಶನ ನೀಡಿದ್ದಾರೆ.
ಬೆಳಗಾರರ ಹಿತರಕ್ಷಣೆಗೆ ಮನವಿ: ಕರ್ನಾಟಕದಲ್ಲಿ ಲಕ್ಷಾಂತರ ರೈತರ ಜೀವನಾಡಿಯಾಗಿರುವ ತೆಂಗು ಬೆಳೆಗೆ ಕಪ್ಪು ತಲೆ ಹುಳುವಿನ ಬಾಧೆ ವ್ಯಾಪಕವಾಗಿ ಕಾಡುತ್ತಿದ್ದು, ರೈತರು ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ. ಈ ಹುಳುವಿನ ಹಾವಳಿಯಿಂದ ತೆಂಗಿನ ಮರಗಳು ಗಂಭೀರವಾಗಿ ಹಾನಿಗೊಳಗಾಗುತ್ತಿದ್ದು, ಕೂಡಲೇ ಶಾಶ್ವತ ಪರಿಹಾರ ಕಲ್ಪಿಸಬೇಕು ಎಂದು ಪರಿಷತ್ ಸದಸ್ಯ ದಿನೇಶ್ ಗೂಳಿಗೌಡ ಕೋರಿದ್ದಾರೆ.
ತೋಟಗಾರಿಕೆ ಇಲಾಖೆ ಹಾಗೂ ತೆಂಗು ಅಭಿವೃದ್ಧಿ ಮಂಡಳಿಯು ಈ ಕೀಟಬಾಧೆ ನಿಯಂತ್ರಿಸಲು ಬೇವು ಆಧಾರಿತ ಕೀಟನಾಶಕಗಳ ಬಳಕೆ, ಬೇರಿನ ಪೋಷಣೆ, ತಜ್ಞರ ಮಾರ್ಗದರ್ಶನದಲ್ಲಿ ‘ಗೋನಿಯೋಜಸ್ ಪರತಂತ್ರ ಜೀವಿಗಳನ್ನು' ಮರಗಳಿಗೆ ಬಿಡುಗಡೆ ಮಾಡುವುದು ಹಾಗೂ ಸಮಗ್ರ ಪೋಷಕಾಂಶಗಳ ನಿರ್ವಹಣೆ ಮೂಲಕ ಕ್ರಮಗಳನ್ನು ಕೈಗೊಳ್ಳುತ್ತಿದೆ. ಆದರೆ, ಈ ಸಮಸ್ಯೆ ಶಾಶ್ವತ ಪರಿಹಾರಕ್ಕಾಗಿ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದಲ್ಲಿ ವಿಶೇಷ ಕಾರ್ಯಪಡೆ ರಚಿಸಬೇಕು.
‘ಗೋನಿಯೋಜಸ್ ಪರತಂತ್ರ ಜೀವಿಗಳನ್ನು' ಸ್ಥಳೀಯವಾಗಿ ಲ್ಯಾಬ್‍ಗಳಲ್ಲಿ ಉತ್ಪಾದಿಸಲಾಗುತ್ತಿದೆ. ಇದನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಮತ್ತು ದೊಡ್ಡ ಪ್ರಮಾಣದಲ್ಲಿ ಉತ್ಪಾದಿಸಲು ಅಗತ್ಯ ಅನುದಾನ ಮತ್ತು ತಾಂತ್ರಿಕ ಬೆಂಬಲಕ್ಕೆ ಪ್ರಯೋಗಾಲಯಗಳನ್ನು ಬಲಪಡಿಸಬೇಕು. ಕೀಟ ನಿಯಂತ್ರಣದ ಬಗ್ಗೆ ರೈತರಿಗೆ ನಿರಂತರವಾಗಿ ತಾಂತ್ರಿಕ ಮಾರ್ಗದರ್ಶನ, ಅರಿವು ಮತ್ತು ಪ್ರಾತ್ಯಕ್ಷಿಕೆಗಳನ್ನು ಏರ್ಪಡಿಸಬೇಕು.
ಸ್ಥಳೀಯವಾಗಿ ಕೃಷಿ ವಿಜ್ಞಾನ ಕೇಂದ್ರಗಳು, ತೋಟಗಾರಿಕೆ ವಿವಿ ಮೂಲಕ ತ್ವರಿತ ಸ್ಪಂದನಾ ತಂಡಗಳನ್ನು ರಚಿಸಬೇಕು. ರೈತರಿಗೆ ಬೇವು ಆಧಾರಿತ ಕೀಟನಾಶಕಗಳು, ಬೇವಿನ ಹಿಂಡಿ, ಎನ್‍ಪಿಕೆ ಮತ್ತು ಲಘು ಪೋಷಕಾಂಶಗಳ ಮತ್ತು ಕೀಟ-ರೋಗ ನಿರೋಧಕತೆ ಹೆಚ್ಚಿಸಲು ಸೂಕ್ಷ್ಮ ಜೀವಾಣುಗಳ ಸಮಿಶ್ರಣವನ್ನು ಉಚಿತವಾಗಿ ಪೂರೈಸಬೇಕು ಎಂದು ದಿನೇಶ್ ಗೂಳಿಗೌಡ, ಸಿಎಂಗೆ ಬರೆದ ಪತ್ರದಲ್ಲಿ ಆಗ್ರಹಿಸಿದ್ದಾರೆ.







