ಸುಳ್ಳು ಸುದ್ದಿ-ದ್ವೇಷಪೂರಿತ ವಿಚಾರ ಹರಡುವವರ ವಿರುದ್ಧ ಕಾನೂನು ವಿಚಾರ: ಗೃಹ ಸಚಿವರ ಅಧ್ಯಕ್ಷತೆಯಲ್ಲಿ ಸಭೆ

ಗೃಹ ಸಚಿವ ಡಾ.ಜಿ.ಪರಮೇಶ್ವರ್
ಬೆಂಗಳೂರು : ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿ ಹಾಗೂ ದ್ವೇಷಪೂರಿತ ವಿಚಾರ ಹರಡುವವರ ವಿರುದ್ಧ ಕಠಿಣ ಕಾನೂನು ರೂಪಿಸುವ ಸಲುವಾಗಿ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅಧ್ಯಕ್ಷತೆಯಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳ ಸಭೆ ನಡೆಸಲಾಯಿತು.
ಶುಕ್ರವಾರ ವಿಧಾನಸೌಧದ ಗೃಹ ಸಚಿವರ ಕಚೇರಿಯಲ್ಲಿ ನಡೆದ ಸಭೆಯಲ್ಲಿ ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್, ಗೃಹ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ತುಷಾರ್ ಗಿರಿನಾಥ್, ರಾಜ್ಯ ಪೊಲೀಸ್ ಮಹಾನಿರ್ದೇಶಕ ಡಾ.ಎಂ.ಎ.ಸಲೀಂ, ಗೃಹ ಇಲಾಖೆಯ ಕಾರ್ಯದರ್ಶಿ ಕೆ.ವಿ.ಶರತ್ ಚಂದ್ರ, ಆಂತರಿಕ ಭದ್ರತಾ ವಿಭಾಗದ ಡಿಜಿಪಿ ಪ್ರಣಬ್ ಮೊಹಾಂತಿ, ಕಾನೂನು ಸುವ್ಯವಸ್ಥೆ ಎಡಿಜಿಪಿ ಆರ್.ಹಿತೇಂದ್ರ, ಪೊಲೀಸ್ ನೇಮಕಾತಿ ವಿಭಾಗದ ಎಡಿಜಿಪಿ ಮುರುಗನ್ ಸೇರಿದಂತೆ ಇತರ ಅಧಿಕಾರಿಗಳು ಭಾಗವಹಿಸಿದ್ದರು.
ಸಮಾಜದಲ್ಲಿ ಶಾಂತಿ ಕದಡುವ, ಸೌಹಾರ್ದತೆಗೆ ಧಕ್ಕೆ ತರುವಂತಹ ಸುಳ್ಳು ಸುದ್ದಿಗಳಿಗೆ ಕಡಿವಾಣ ಹಾಕುವುದು, ಆನ್ಲೈನ್ ವಂಚನೆ, ದ್ವೇಷ ಭಾಷಣ ಹಾಗೂ ಪ್ರಚೋದನೆಗಳ ವಿರುದ್ಧ ಕಠಿಣ ಕಾನೂನು ರೂಪಿಸಲು ರಾಜ್ಯ ಸರಕಾರ ಮುಂದಾಗಿದೆ. ಇದನ್ನು ಮುಂದಿನ ದಿನಗಳಲ್ಲಿ ಜಾರಿಗೊಳಿಸುವ ಸಂಬಂಧ ಸಭೆಯಲ್ಲಿ ಚರ್ಚೆಗಳಾಗಿವೆ.
ಸಭೆಯ ಅಧ್ಯಕ್ಷತೆವಹಿಸಿದ್ದ ಸಚಿವ ಡಾ.ಜಿ.ಪರಮೇಶ್ವೇರ್ ಅವರು ಗೃಹ ಇಲಾಖೆಯಿಂದ ರೂಪಿಸಬೇಕಾದ ನಿಯಮಾವಳಿಗಳ ಬಗ್ಗೆ ಸಲಹೆ ಸೂಚನೆಗಳನ್ನು ನೀಡಿದ್ದಾರೆ. ಅದೇ ರೀತಿ, 402 ಪಿಎಸ್ಸೈ ಹುದ್ದೆಗಳ ನೇಮಕಾತಿಯ ಆದೇಶ ಹೊರಡಿಸುವ ಕುರಿತಂತೆ ಚರ್ಚಿಸಿದರು.







