ನಿಗಮ ಮಂಡಳಿ ನೇಮಕದಲ್ಲಿ ಅದಲು-ಬದಲು : ನಾಲ್ಕು ದಿನ ಬಿಎಂಟಿಸಿ ಅಧ್ಯಕ್ಷರಾಗಿದ್ದ ನಿಕೇತ್ರಾಜ್ ಮೌರ್ಯಗೆ ಇದೀಗ ಉಪಾಧ್ಯಕ್ಷ ಪಟ್ಟ!

ನಿಕೇತ್ ರಾಜ್ ಮೌರ್ಯ
ಬೆಂಗಳೂರು, ಸೆ.29: ರಾಜ್ಯದ ವಿವಿಧ ನಿಗಮ-ಮಂಡಳಿ ನೇಮಕದಲ್ಲಿ ಬಾಕಿ ಉಳಿದಿದ್ದ ಐದು ನಿಗಮ ಮಂಡಳಿಗಳಿಗೂ ಅಧ್ಯಕ್ಷರ ನೇಮಕ ಮಾಡಲಾಗಿದ್ದು, ಜೊತೆಗೆ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಅಧ್ಯಕ್ಷ ಹಾಗೂ ಉಪಾಧ್ಯಕ್ಷರನ್ನು ಅದಲು-ಬದಲು ಮಾಡಿ ಸರಕಾರ ಸೋಮವಾರ ಆದೇಶ ಹೊರಡಿಸಿದೆ.
ಬಿಎಂಟಿಸಿ ಅಧ್ಯಕ್ಷರಾಗಿ ಅಧಿಕಾರ ಸ್ವೀಕಾರ ಮಾಡಿದ್ದ ನಿಕೇತ್ ರಾಜ್ ಮೌರ್ಯ ಅವರಿಗೆ ಇದೀಗ ಬಿಎಂಟಿಸಿ ಉಪಾಧ್ಯಕ್ಷ ಸ್ಥಾನ ನೀಡಲಾಗಿದ್ದು, ಬಿಎಂಟಿಸಿ ಅಧ್ಯಕ್ಷರಾಗಿ ವಿ.ಎಸ್.ಆರಾಧ್ಯ ಅವರನ್ನು ನೇಮಕ ಮಾಡಲಾಗಿದೆ.
ಸೆ.25ರಂದು ಬಿಎಂಟಿಸಿ ಅಧ್ಯಕ್ಷರನ್ನಾಗಿ ನಿಕೇತ್ರಾಜ್ ಮೌರ್ಯ ಅವರನ್ನು ನೇಮಕ ಮಾಡಲಾಗಿತ್ತು. ಬಳಿಕ ನಿಕೇತ್ರಾಜ್ ಮೌರ್ಯ ಅಧಿಕಾರವನ್ನೂ ಸ್ವೀಕಾರ ಮಾಡಿದ್ದರು. ಆದರೆ, ಸೆ.29ರಂದು ಅವರನ್ನು ಬಿಎಂಟಿಸಿ ಉಪಾಧ್ಯಕ್ಷರನ್ನಾಗಿ ಮರು ನೇಮಿಸಿ ಆದೇಶದಲ್ಲಿ ತಿಳಿಸಲಾಗಿದೆ. ಇನ್ನು ಬಿಎಂಟಿಸಿ ಉಪಾಧ್ಯಕ್ಷರಾಗಿದ್ದ ವಿ.ಎಸ್.ಆರಾಧ್ಯ ಅವರನ್ನು ಬಿಎಂಟಿಸಿ ಅಧ್ಯಕ್ಷರನ್ನಾಗಿ ಮರು ನೇಮಿಸಲಾಗಿದೆ.
ಇನ್ನು ಬಾಕಿ ಉಳಿದ 5 ನಿಗಮ ಮಂಡಳಿಗಳ ಪೈಕಿ ಕರ್ನಾಟಕ ರಾಜ್ಯ ದ್ವಿದಳ ಧಾನ್ಯ ಅಭಿವೃದ್ಧಿ ಮಂಡಳಿ ಹಾಗೂ ಕರ್ನಾಟಕ ತೊಗರಿ ಅಭಿವೃದ್ಧಿ ಮಂಡಳಿ ಅಧ್ಯಕ್ಷರನ್ನಾಗಿ ಸೈಯದ್ ಮೆಹಮೂದ್ ಚಿಸ್ತಿ, ರಾಜ್ಯ ಮದ್ಯಪಾನ ಸಂಯಮ ಮಂಡಳಿ ಅಧ್ಯಕ್ಷರನ್ನಾಗಿ ಶರಣಪ್ಪ ಸಲಾದ್ ಪುರ್, ರಾಜ್ಯ ಬೀಜ ನಿಗಮ ನಿಯಮಿತ ಅಧ್ಯಕ್ಷರನ್ನಾಗಿ ಆಂಜನಪ್ಪ, ರಾಜ್ಯ ಸಾಂಬಾರು ಅಭಿವೃದ್ಧಿ ಮಂಡಳಿ ಅಧ್ಯಕ್ಷರನ್ನಾಗಿ ನೀಲಕಂಠರಾವ್ ಎಸ್. ಮೂಲಗೆ ಹಾಗೂ ಜವಾಹರ ಬಾಲಭವನ ಸೊಸೈಟಿ ಉಪಾಧ್ಯಕ್ಷರನ್ನಾಗಿ ಅನಿಲ್ ಕುಮಾರ್ ಜಮಾದಾರ್ ಅವರನ್ನು ನೇಮಿಸಿ ಆದೇಶದಲ್ಲಿ ತಿಳಿಸಲಾಗಿದೆ.







