ಸಮಯ ಬಂದರೆ ರಾಮನಗರದಲ್ಲಿಯೇ ನನ್ನ ಸ್ಪರ್ಧೆ: ನಿಖಿಲ್ ಕುಮಾರಸ್ವಾಮಿ

ಬೆಂಗಳೂರು : ‘ಚುನಾವಣೆಗೆ ನಿಲ್ಲುವ ಸಮಯ ಬಂದರೆ ರಾಮನಗರ ಕ್ಷೇತ್ರದಲ್ಲಿಯೇ ನನ್ನ ಮುಂದಿನ ಚುನಾವಣೆ. ಯಾವುದೇ ಕಾರಣಕ್ಕೂ ನಾನು ರಾಮನಗರ ಜಿಲ್ಲೆಯಿಂದ ಪಲಾಯನ ಮಾಡುವುದಿಲ್ಲ ಎಂದು ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಅವರು ಇಂದಿಲ್ಲಿ ಪ್ರಕಟಿಸಿದ್ದಾರೆ.
ಬುಧವಾರ ರಾಮನಗರ ಕ್ಷೇತ್ರದಲ್ಲಿ ಆಯೋಜಿಸಲಾಗಿದ್ದ ಆರನೇ ದಿನದ ಕಾರ್ಯಕರ್ತರ ಸಭೆ ಹಾಗೂ ಸದಸ್ಯತ್ವ ನೊಂದಣಿ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಇದು ನಮ್ಮ ಸ್ವಕ್ಷೇತ್ರ, ನೀವು ಬೆಳೆಸಿದ ಮನೆ ಮಕ್ಕಳು ನಾವು. ನಮ್ಮನ್ನ ಪ್ರೀತಿಯಿಂದ ಅರಸಿದ್ದೀರಿ, ಬೆಳೆಸಿದ್ದೀರಿ. ಯಾವುದೇ ಕಾರಣಕ್ಕೂ ಜಿಲ್ಲೆಯಿಂದ ಪಲಾಯನ ಮಾಡುವುದಿಲ್ಲ ಎಂದರು.
ಸೋಲು ಗೆಲುವು ಸರ್ವೇ ಸಾಮಾನ್ಯ. ನನ್ನ ಮೂರು ಸೋಲುಗಳು ನನಗೆ ರಾಜಕೀಯವಾಗಿ ಪರಿಪಕ್ವತೆಯನ್ನು ಕಲಿಸಿವೆ. ಈ ಸೋಲುಗಳಿಂದ ಕುಗ್ಗದೆ ಮತ್ತೆ ಅವಕಾಶ ಸಿಕ್ಕರೆ ರಾಮನಗರದಿಂದಲೇ ಸ್ಪರ್ಧೆ ಮಾಡುವೆ ಎಂದ ಅವರು, ಮಾವಿನ ಹಣ್ಣಿನ ಬೆಲೆ ಕುಸಿತದಿಂದ ಸಂಕಷ್ಟದಲ್ಲಿದ್ದ ರೈತರಿಗೆ ಕುಮಾರಣ್ಣ ನೆರವಿಗೆ ಬಂದಿದ್ದಾರೆಯೇ ಹೊರತು, ಡಿ.ಕೆ.ಬ್ರದರ್ಸ್ ಅಲ್ಲ ಎಂದು ಟೀಕಿಸಿದರು.
ಅಭಿವೃದ್ಧಿ ಆಗದು: ರಾಮನಗರ ಜಿಲ್ಲೆ ಹೆಸರು ಬದಲಾವಣೆ ಮಾಡುವುದರಿಂದ ಅಭಿವೃದ್ಧಿ ಸಾಧ್ಯವಿಲ್ಲ. ಕೆಂಗಲ್ ಹನುಮಂತಯ್ಯ ಕಟ್ಟಿದ ರಾಮನಗರ ಹೆಸರನ್ನು ಕಾಂಗ್ರೆಸ್ ಅಳಿಸಿದೆ. ಆದರೆ, ಜನಸಾಮಾನ್ಯರ ಹೃದಯದಲ್ಲಿ ರಾಮನಗರ ಶಾಶ್ವತವಾಗಿ ಉಳಿದಿದೆ ಮಿಸ್ಟರ್ ಡಿ.ಕೆ.ಶಿವಕುಮಾರ್ ಎಂದು ನಿಖಿಲ್ ಕುಮಾರಸ್ವಾಮಿ ತಿರುಗೇಟು ನೀಡಿದರು.







