ಧಮ್ಮಿದ್ದರೆ ‘ಪ್ರಾದೇಶಿಕ ಪಕ್ಷ ಕಟ್ಟಿ’ ಒಂದು ಸ್ಥಾನ ಗೆಲ್ಲಲಿ : ಸಿಎಂ, ಡಿಸಿಎಂಗೆ ನಿಖಿಲ್ ಕುಮಾರಸ್ವಾಮಿ ಸವಾಲು

ಬೆಂಗಳೂರು, ಸೆ. 7: ತಾಕತ್ತು, ಧಮ್ಮು ಇದ್ದರೆ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಪ್ರಾದೇಶಿಕ ಪಕ್ಷವನ್ನು ಕಟ್ಟಿ ಕನಿಷ್ಟ ಒಂದು ಸ್ಥಾನವನ್ನು ತೆಗೆದುಕೊಳ್ಳಲಿ ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಸವಾಲು ಹಾಕಿದ್ದಾರೆ.
ರವಿವಾರ ಇಲ್ಲಿನ ಯಶವಂತಪುರ ಕ್ಷೇತ್ರದಲ್ಲಿ ನಡೆದ ಜನರೊಂದಿಗೆ ಜನತಾದಳ-ಜೆಡಿಎಸ್ ಪಕ್ಷದ ಸದಸ್ಯತ್ವ ನೋಂದಣಿ ಅಭಿಯಾನವನ್ನು ಉದ್ಘಾಟಿಸಿದ ಬಳಿಕ ‘ಜೆಡಿಎಸ್ ಎರಡು ಸ್ಥಾನಕ್ಕಿಂತ ಜಾಸ್ತಿ ಗೆಲ್ಲಲ್ಲ’ ಎಂಬ ಸಿಎಂ ಸಿದ್ದರಾಮಯ್ಯ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ಜೆಡಿಎಸ್ ಶಕ್ತಿ ಏನೆಂದು ಮುಂದಿನ ಚುನಾವಣೆಯಲ್ಲಿ ತೋರಿಸುತ್ತೇವೆ, ದಯವಿಟ್ಟು ಸ್ವಲ್ಪ ಸಹನೆ ಇರಲಿ ಎಂದರು.
ಡಿ.ಕೆ.ಶಿವಕುಮಾರ್ ಗೆ ಗಾಳಿಯಲ್ಲಿ ಗುಂಡು ಹೊಡೆಯುವ ಅಭ್ಯಾಸ. ಅವರ ಆರೋಪಗಳೆಲ್ಲ ಸುಳ್ಳು. ಸುಳ್ಳೇ ಅವರ ಮನೆ ದೇವರು. ರಾಮನಗರದಲ್ಲಿ ರೈತರ ಮುಂದೆ ಡಿ.ಕೆ.ಶಿವಕುಮಾರ್ ಅಪಪ್ರಚಾರ ಮಾಡಿದ್ದಾರೆ ಎಂದು ನಿಖಿಲ್ ಕುಮಾರಸ್ವಾಮಿ ಹೇಳಿದರು.
ರಿಯಲ್ ಎಸ್ಟೇಟ್ ದಂಧೆ ಮಾಡಲು ಬಿಬಿಎಂಪಿ ಪಂಚ ಪಾಲಿಕೆ ಮಾಡಿದ್ದಾರೆ. ಸಿಲಿಕಾನ್ ಸಿಟಿಯನ್ನು ಡಿ.ಕೆ.ಶಿವಕುಮಾರ್ ಗಾರ್ಬೇಜ್ ಸಿಟಿ ಮಾಡಿದ್ದಾರೆ. ಪಂಚ ಪಾಲಿಕೆಗಳಿಗೆ ಕಚೇರಿ ಮಾಡುವ ಮೊದಲು ನಗರದಲ್ಲಿ ಕಸ ಎತ್ತಿ. ಜಿಬಿಎ ಮಾಡಿದರೆ ಬೆಂಗಳೂರು ಅಭಿವೃದ್ಧಿ ಆಗುತ್ತಾ? ಎಂದು ನಿಖಿಲ್ ಕುಮಾರಸ್ವಾಮಿ ಪ್ರಶ್ನಿಸಿದರು.
ಈ ಸಂದರ್ಭದಲ್ಲಿ ಮಾಜಿ ಸಚಿವ ಸಿ.ಎಸ್.ಪುಟ್ಟರಾಜು, ಮಾಜಿ ಶಾಸಕ ಅನ್ನಧಾನಿ, ವಿಧಾನ ಪರಿಷತ್ ಸದಸ್ಯ ಶರವಣ ಸಹಿತ ಹಲವರು ಇದ್ದರು.







