ಡಿ.ಕೆ.ಶಿವಕುಮಾರ್ ನಾಡಿನ ಪ್ರಭುಗಳಾಗಿ, ನಾಡನ್ನು ಮುನ್ನಡೆಸಲಿ : ನಿಶ್ಚಲಾನಂದನಾಥ ಸ್ವಾಮೀಜಿ

ಬೆಂಗಳೂರು: ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಛಲ ಬಿಡದೇ ಯಾವುದೇ ಕೆಲಸವನ್ನು ಮಾಡಿ ತೋರಿಸುವಂತವರು. ಹೀಗಾಗಿ ಅವರು ಈ ನಾಡಿನ ಪ್ರಭುಗಳಾಗಿ, ನಾಡನ್ನು ಮುನ್ನಡೆಸಲಿ ಎಂದು ವಿಶ್ವ ಒಕ್ಕಲಿಗರ ಮಠದ ನಿಶ್ಚಲಾನಂದನಾಥ ಸ್ವಾಮೀಜಿ ಹೇಳಿದ್ದಾರೆ.
ಶುಕ್ರವಾರ ಇಲ್ಲಿನ ಬಾಬು ಜಗಜೀವನ ರಾಮ್ ಭವನದಲ್ಲಿ ಕನ್ನಡ ಮತ್ತು ಸಂಸ್ಕೃ ತಿ ಇಲಾಖೆ ಮತ್ತು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಹಾಗೂ ನಾಡಪ್ರಭು ಕೆಂಪೇಗೌಡ ಅಭಿವೃದ್ಧಿ ಪ್ರಾಧಿಕಾರ ವತಿಯಿಂದ ಆಯೋಜಿಸಿದ್ದ ‘ನಾಡಪ್ರಭು ಕೆಂಪೇಗೌಡರ 516ನೇ ಜಯಂತಿ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ರಾಜ್ಯದ ಎಲ್ಲ ಜನರಿಗೆ ಉದ್ಯೋಗ, ಆದಾಯ, ವರಮಾನ, ಜೀವನವನ್ನು ಎಲ್ಲವನ್ನು ಬೆಂಗಳೂರು ನಗರ ನೀಡುತ್ತಿದೆ. ಹೀಗಾಗಿ ಈ ನಗರವನ್ನು ಹೆಚ್ಚು ಫಲದಾಯಕವಾಗಿ, ಶ್ರೇಷ್ಟವಾಗಿ ರೂಪಿಸಬೇಕು ಎಂದು ಡಿ.ಕೆ. ಶಿವಕುಮಾರ್ ಪಣ ತೊಟ್ಟು ಹಗಲು-ರಾತ್ರಿ ಕೆಲಸ ಮಾಡುತ್ತಿದ್ದು, ಅಭಿವೃದ್ಧಿಯ ಹರಿಕಾರರಾಗಿದ್ದಾರೆ ಎಂದು ಅವರು ನುಡಿದರು.
ಡಿ.ಕೆ.ಶಿವಕುಮಾರ್ ಅವರನ್ನು ಅನೇಕರು ಟೀಕಿಸಬಹುದು. ಆದರೆ ಅವರು ಹಿಡಿದ ಹಠವನ್ನು ಸಾಧಿಸುತ್ತಾರೆ. ಮಾಡಿಯೇ ತೀರುತ್ತೇನೆ ಎಂಬ ಡಿ.ಕೆ.ಶಿವಕುಮಾರ್ ಸಂಕಲ್ಪ ಶಕ್ತಿ, ಅವರನ್ನು ನಾಡಪ್ರಭು ಕೆಂಪೇಗೌಡ ಸ್ಥಾನದಲ್ಲಿ ಕೂರಿಸಲಿದೆ. ಇದಕ್ಕೆ ಕೆಂಪೇಗೌಡ ಹೆಚ್ಚಿನ ಆಶಿರ್ವಾದವನ್ನು ಮಾಡಲಿ. ಈ ಮೂಲಕ ಜಗತ್ತಿಗೆ ಮತ್ತಷ್ಟು ಶಕ್ತಿಯುತ ಬೆಂಗಳೂರನ್ನು ನಿರ್ಮಾಣ ಮಾಡಲಿ ಎಂದು ನಿಶ್ಚಲಾನಂದನಾಥ ಸ್ವಾಮೀಜಿ ಹೇಳಿದರು.
ಕಂದಾಯ ಸಚಿವ ಕೃಷ್ಣ ಬೈರೇಗೌಡ ಇಲಾಖೆಯ ಕೆಲಸವನ್ನು ತಾಂತ್ರಿಕವಾಗಿ ಚನ್ನಾಗಿ ನಿರ್ವಹಿಸುತ್ತಿದ್ದಾರೆ. ಸರಕಾರಕ್ಕೆ ಒಳ್ಳೆಯ ಹೆಸರನ್ನು ತಂದು ಕೊಡುತ್ತಿದ್ದಾರೆ ಎಂದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಎಲ್ಲರೂ ಸಮಾಜವಾದಿಗಳಾಗಿ, ಸಂವಿಧಾನಬದ್ದರಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದರು.







