ಕೇಂದ್ರ ಸರಕಾರ ಯಾವಾಗಲೂ ಶಿಷ್ಟಾಚಾರ ಪಾಲನೆ ಮಾಡುತ್ತಿದೆ : ಸಿದ್ದರಾಮಯ್ಯ ಆರೋಪಕ್ಕೆ ನಿತಿನ್ ಗಡ್ಕರಿ ಪ್ರತಿಕ್ರಿಯೆ

ನಿತಿನ್ ಗಡ್ಕರಿ/ಸಿದ್ದರಾಮಯ್ಯ
ಹೊಸದಿಲ್ಲಿ: ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಅಂಬಾರಗೋಡ್ಲು-ಕಳಸವಳ್ಳಿ (ಸಿಗಂದೂರು) ನಡುವೆ ಶರವಾವತಿ ಹಿನ್ನೀರಿನಲ್ಲಿ ನಿರ್ಮಾಣಗೊಂಡಿರುವ ನೂತನ ಸೇತುವೆ ಉದ್ಘಾಟನೆ ಕಾರ್ಯಕ್ರಮವನ್ನು ಮುಂದೂಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಬರೆದ ಪತ್ರಕ್ಕೆ ಕೇಂದ್ರ ಸಚಿವ ನಿತಿನ್ ಗಡ್ಕರಿ ಇಂದು ಪ್ರತಿಕ್ರಿಯಿಸಿದ್ದು, ಕೇಂದ್ರ ಸರಕಾರ ಯಾವಾಗಲೂ ನಿಗದಿತ ಶಿಷ್ಟಾಚಾರ ಪಾಲನೆ ಮಾಡುತ್ತಿದೆ ಎಂದು ಹೇಳಿದ್ದಾರೆ.
ಈ ಕುರಿತು ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಕೇಂದ್ರ ಸಚಿವ ನಿತಿನ್ ಗಡ್ಕರಿ, ಪ್ರಾದೇಶಿಕ ಸಂಪರ್ಕವನ್ನು ಕಲ್ಪಿಸುವ ಸಲುವಾಗಿ ಶಿವಮೊಗ್ಗದಲ್ಲಿ ಇಂದು ಹಲವು ಪ್ರಮುಖ ಮೂಲಸೌಕರ್ಯ ಯೋಜನೆಗಳ ಉದ್ಘಾಟನೆ ಹಾಗೂ ಶಿಲಾನ್ಯಾಸ ಕಾರ್ಯಕ್ರಮ ನಡೆಯುತ್ತಿದೆ. ಈ ಕಾರ್ಯಕ್ರಮಕ್ಕೆ ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ 2025ರ ಜುಲೈ 11ರಂದು ಆಹ್ವಾನ ನೀಡಲಾಗಿತ್ತು. ಅವರಿಗೆ ನಿಗದಿತ ಕಾರ್ಯಕ್ರಮವಿದ್ದ ಕಾರಣ ವೀಡಿಯೊ ಕಾನ್ಫರೆನ್ಸ್ ಮೂಲಕ ಕಾರ್ಯಕ್ರಮದಲ್ಲಿ ಹಾಜರಾಗುವಂತೆ ಜುಲೈ 12 ರಂದು ಮತ್ತೊಮ್ಮೆ ಪತ್ರವನ್ನು ಕಳುಹಿಸಲಾಗಿದೆ" ಎಂದು ಹೇಳಿದ್ದಾರೆ.
"ಕೇಂದ್ರ ಸರಕಾರವ ಯಾವಾಗಲೂ ನಿಗದಿತ ಶಿಷ್ಟಾಚಾರ ಪಾಲನೆ ಮಾಡುತ್ತಿದೆ. ಕರ್ನಾಟಕ ಸರಕಾರದ ಸಹಕಾರ ಹಾಗೂ ಮುಖ್ಯಮಂತ್ರಿಯ ಕೊಡುಗೆಗೆ ಕೃತಜ್ಞತೆ ವ್ಯಕ್ತಪಡಿಸುತ್ತದೆ. ಎಲ್ಲಾ ರಾಜ್ಯಗಳೊಂದಿಗೆ ಸಮನ್ವಯ ಹಾಗೂ ಸಹಕಾರಕ್ಕೆ ಕೇಂದ್ರ ಸರಕಾರ ಬದ್ಧವಾಗಿದೆ" ಎಂದು ಸಿಎಂ ಸಿದ್ದರಾಮಯ್ಯ ಅವರ ಆರೋಪಕ್ಕೆ ಪ್ರತಿಕ್ರಿಯಿಸಿದ್ದಾರೆ.
ಸಿಗಂದೂರು ಕಾರ್ಯಕ್ರಮ-ಶಿಷ್ಠಾಚಾರ ಪಾಲನೆಯಾಗಿಲ್ಲ:
ಇಂದು ಮಾಧ್ಯಮದವರೊಂದಿಗೆ ಮಾತನಾಡಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಸಾಗರ ತಾಲ್ಲೂಕಿನಲ್ಲಿ ಹಮ್ಮಿಕೊಂಡಿರುವ ಕಾರ್ಯಕ್ರಮವನ್ನು ಮುಂದೂಡುವಂತೆ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರಿಗೆ ದೂರವಾಣಿ ಮೂಲಕ ಮಾತನಾಡಿ ಪತ್ರವನ್ನೂ ಬರೆಯಲಾಗಿತ್ತು. ಕೇಂದ್ರ ಸಚಿವರೂ ಕಾರ್ಯಕ್ರಮ ಮುಂದೂಡಲು ಸಮ್ಮತಿಸಿದ್ದರೂ, ಕೂಡ ಇಲ್ಲಿನ ಸ್ಥಳೀಯ ಬಿಜೆಪಿ ನಾಯಕರ ಒತ್ತಡಕ್ಕೆ ಮಣಿದು, ನನ್ನ ಗಮನಕ್ಕೆ ತಾರದೇ, ಕಾರ್ಯಕ್ರಮವನ್ನು ಇಂದೇ ಆಯೋಜಿಸಿದ್ದಾರೆ. ನನಗೆ ಪೂರ್ವನಿಯೋಜಿತ ಕಾರ್ಯಕ್ರಮಗಳಂತೆ ವಿಜಯಪುರ ಜಿಲ್ಲೆಗೆ ತೆರಳಬೇಕಾಗಿರುವುದರಿಂದ, ಸಾಗರ ತಾಲ್ಲೂಕಿನ ಕಾರ್ಯಕ್ರಮಕ್ಕೆ ಹೋಗಲು ಸಾಧ್ಯವಾಗುತ್ತಿಲ್ಲ ಎಂದಿದ್ದರು.
ಬಿಜೆಪಿಯ ಈ ನಡೆಯನ್ನು ಪ್ರತಿಭಟಿಸಲು ಸಂಬಂಧಪಟ್ಟ ಸಾಗರ ತಾಲ್ಲೂಕಿನ ಇಂದಿನ ಕಾರ್ಯಕ್ರಮವನ್ನು ಸರಕಾರದ ಯಾವುದೇ ಸಚಿವರು, ಸ್ಥಳೀಯ ಶಾಸಕರು ಭಾಗವಹಿಸುತ್ತಿಲ್ಲ. ನಮ್ಮ ನಡುವೆ ತಿಕ್ಕಾಟವನ್ನು ಪ್ರಾರಂಭಿಸಿರುವುದು ಕೇಂದ್ರ ಸರಕಾರವೇ. ಇಲ್ಲಿ ಶಿಷ್ಠಾಚಾರದ ಪಾಲನೆಯಾಗಿಲ್ಲ. ಕೇಂದ್ರ ಪುರಸ್ಕೃತ ಯೋಜನೆಗಳಲ್ಲಿ ರಾಜ್ಯ ಸರಕಾರದ ಪಾಲೂ ಇರುತ್ತದೆ. ಅಂತಹ ಸಂದರ್ಭದಲ್ಲಿ ರಾಜ್ಯ ಸರಕಾರ ಎಲ್ಲ ಶಿಷ್ಠಾಚಾರಗಳನ್ನೂ ತಪ್ಪದೇ ಪಾಲಿಸುತ್ತದೆ. ಇಂದಿನ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿಗಳಿಗಾಗಲಿ, ಸಂಬಂಧಪಟ್ಟ ಇಲಾಖಾ ಸಚಿವರನ್ನಾಗಲೀ, ಸ್ಥಳೀಯ ಶಾಸಕರನ್ನಾಗಲೀ ಆಮಂತ್ರಣ ನೀಡಲಾಗಿಲ್ಲ ಎಂದು ಆರೋಪಿಸಿದ್ದರು.
In a major step towards boosting regional connectivity, the inauguration and foundation stone laying ceremony for multiple key infrastructure projects is being held today in Shivamogga, Karnataka.
— Nitin Gadkari (@nitin_gadkari) July 14, 2025
An official invitation was duly extended to the Chief Minister of Karnataka, Shri… pic.twitter.com/yDPbRdsygd







