ಬಸ್ ಪ್ರಯಾಣ ದರ ಏರಿಕೆ ಇಲ್ಲ: ಸಚಿವ ರಾಮಲಿಂಗಾರೆಡ್ಡಿ ಸ್ಪಷ್ಟನೆ

ಬೆಂಗಳೂರು: ಡೀಸೆಲ್ ಬೆಲೆ ಹೆಚ್ಚಾದರೆ ಕೆಎಸ್ಸಾರ್ಟಿಸಿ, ಬಿಎಂಟಿಸಿ ಸೇರಿದಂತೆ ಸಾರಿಗೆ ಸಂಸ್ಥೆಗಳಿಗೆ ಹೊರೆಯಾಗಲಿದೆ. ಆದರೆ, ರಾಜ್ಯದಲ್ಲಿ ಬಸ್ ಪ್ರಯಾಣ ದರ ಏರಿಕೆ ಬಗ್ಗೆ ಸದ್ಯಕ್ಕೆ ಯಾವುದೇ ಚಿಂತನೆ ಮಾಡಿಲ್ಲ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಸ್ಪಷ್ಟನೆ ನೀಡಿದ್ದಾರೆ.
ಬುಧವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡೀಸೆಲ್ ಬೆಲೆ ಹೆಚ್ಚಳ ಮಾಡುತ್ತಿರುವ ಮಾಹಿತಿ ನನ್ನಗಿಲ್ಲ. ಮಾಡದಿದ್ದರೆ ಸಂತೋಷ. ಆದರೆ, ಪ್ರಯಾಣ ದರ ಏರಿಕೆ ಸಂಬಂಧ ಯಾವುದೇ ಬೆಳವಣಿಗೆ ನಡೆದಿಲ್ಲ ಎಂದು ಹೇಳಿದರು.
ಸಾರಿಗೆ ಸಂಸ್ಥೆಗಳ ನೌಕರರ ವೇತನವನ್ನು ಪರಿಷ್ಕರಣೆ ಮಾಡಿದ್ದು, ಸರಕಾರದ ತೀರ್ಮಾನವನ್ನು ಹೇಳಿದ್ದೇವೆ. ಆದರೆ ನೌಕರರು ಒಪ್ಪದಿರುವ ಬಗ್ಗೆ ಏನೂ ಮಾತನಾಡುವುದಿಲ್ಲ ಎಂದ ಅವರು, ಜಿಬಿಎ ಚುನಾವಣೆ ವಿಳಂಬವಾಗುತ್ತಿರುವುದು ಆಕಾಂಕ್ಷಿಗಳಿಗೆ ಬೇಸರವಾಗುವುದು ಸಹಜ. ನಮಗೂ ಒತ್ತಡ ಹೆಚ್ಚಾಗುತ್ತದೆ. 1947ರಿಂದ ಇಲ್ಲಿಯವರೆಗೆ ಮೂಲಭೂತ ಸೌಕರ್ಯಗಳನ್ನು ಕಾಂಗ್ರೆಸ್ ಸರಕಾರದ ಅವಧಿಯಲ್ಲೇ ಹೆಚ್ಚು ಮಾಡಲಾಗಿದೆ. ಚುನಾವಣೆ ಏಕೆ ಮುಂದೂಡಲಾಗುತ್ತಿದೆ ಎಂಬುದನ್ನು ಉಪಮುಖ್ಯಮಂತ್ರಿಗಳನ್ನೆ ಕೇಳಬೇಕು ಎಂದರು.
ಅಧಿಕಾರ ಹಂಚಿಕೆ ಬಗ್ಗೆ ನನಗೆ ಗೊತ್ತಿಲ್ಲ. ಸಂಪುಟ ಪುನಾರಚನೆ ಬಗ್ಗೆ ಮಾತ್ರ ಗೊತ್ತು. 3 ವರ್ಷದಲ್ಲಿ ನಾನು ಮೂರು ಬಾರಿ ಮಾತ್ರ ದಿಲ್ಲಿಗೆ ಹೋಗಿದ್ದೇನೆ. ಬೇಗ ಸಂಪುಟ ವಿಸ್ತರಣೆಯಾದರೆ ಒಳ್ಳೆಯದು. ಎರಡೂವರೆ ವರ್ಷಕ್ಕೆ ಆಗುತ್ತದೆ ಎಂಬ ಮಾಹಿತಿ ಇತ್ತು. ಈಗಾಗಲೇ 6 ತಿಂಗಳು ತಡವಾಗಿದೆ ಎಂದು ರಾಮಲಿಂಗಾರೆಡ್ಡಿ ಹೇಳಿದರು.






