ʼಬೆಂಗಳೂರು ಬಂದ್ʼಗೆ ಅವಕಾಶವಿಲ್ಲ; ಇಂದು ಮಧ್ಯರಾತ್ರಿಯಿಂದಲೇ ನಗರದಲ್ಲಿ ನಿಷೇಧಾಜ್ಞೆ ಜಾರಿ: ಪೊಲೀಸ್ ಕಮಿಷನರ್ ಬಿ. ದಯಾನಂದ್
ʼʼಒತ್ತಾಯ ಪೂರ್ವಕವಾಗಿ ಬಂದ್ ಮಾಡಿದರೆ ಕ್ರಮʼʼ
ಬೆಂಗಳೂರು, ಸೆ.25: ಕಾವೇರಿ ನೀರಿಗಾಗಿ ಇಂದು(ಸೆ.26) ಕರೆ ನೀಡಿರುವ ಬೆಂಗಳೂರು ಬಂದ್‍ಗೆ ಯಾವುದೇ ಅವಕಾಶವಿಲ್ಲ. ನಗರದಾದ್ಯಂತ ಸೋಮವಾರ ಮಧ್ಯರಾತ್ರಿಯಿಂದ ಮಂಗಳವಾರ ಮಧ್ಯರಾತ್ರಿಯ ವರೆಗೆ ಕಲಂ 144 ಅನ್ವಯ ನಗರದಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ ಎಂದು ಬೆಂಗಳೂರು ನಗರ ಪೆÇಲೀಸ್ ಆಯುಕ್ತ ಬಿ.ದಯಾನಂದ್ ತಿಳಿಸಿದ್ದಾರೆ.
ಸೋಮವಾರ ನಗರದ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಒತ್ತಾಯಪೂರ್ವಕವಾಗಿ ಬಂದ್ ಮಾಡುವಂತಿಲ್ಲ. ಹೈಕೋರ್ಟ್ ಆದೇಶದ ಪ್ರಕಾರ ಬಂದ್‍ಗೆ ಅವಕಾಶ ನೀಡಿರುವುದಿಲ್ಲ. ಅದಾಗ್ಯೂ ಬಂದ್ ಮಾಡಿ ಯಾವುದೇ ರೀತಿಯ ಅಹಿತಕರ ಘಟನೆಗಳು ಸಂಭವಿಸಿದ್ದಲ್ಲಿ ಬಂದ್‍ನ ಆಯೋಜನರನ್ನೇ ಹೊಣೆಗಾರರನ್ನಾಗಿಸಿ ಕ್ರಮ ಕೈಗೊಳ್ಳಲಾಗುವುದು. ಪ್ರತಿಭಟನಾಕಾರರಿಗೆ ಕೋರ್ಟ್ ಆದೇಶ ಪ್ರತಿ ತೋರಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಬೆಂಗಳೂರಿನಲ್ಲಿ ಭದ್ರತೆಗಾಗಿ ಹೆಚ್ಚುವರಿ ಪೊಲೀಸ್ ಸಿಬ್ಬಂದಿ ನಿಯೋಜನೆ ಮಾಡಲಾಗಿದ್ದು, ಸಿವಿಲ್ ಪೊಲೀಸರೊಂದಿಗೆ ಸಿಐಡಿ, ಐಎಸ್‍ಡಿ ಅಧಿಕಾರಿಗಳೂ ಕರ್ತವ್ಯ ನಿರ್ವಹಿಸಲಿದ್ದಾರೆ. ನಗರದಲ್ಲಿ 60 ಕೆಎಸ್‍ಆರ್‍ಪಿ, 40 ಸಿಎಆರ್ ತುಕಡಿಗಳು ಸೇರಿದಂತೆ ಸುಮಾರು 20 ಸಾವಿರ ಪೊಲೀಸರನ್ನು ಭದ್ರತೆಗೆಂದು ನಿಯೋಜನೆ ಮಾಡಿದ್ದೇವೆ. ಅಗತ್ಯವಿದ್ದಲ್ಲಿ ತಮಿಳುನಾಡು ಸಾರಿಗೆ ಬಸ್‍ಗಳಿಗೆ ಭದ್ರತೆ ಒದಗಿಸುತ್ತೇವೆ. ಗಡಿಭಾಗದಲ್ಲಿ ಹೆಚ್ಚಾಗಿ ಭದ್ರತೆ ಮಾಡಲಾಗಿದೆ. ಪೊಲೀಸರು, ಕೆಎಸ್‍ಆರ್‍ಪಿ ಸಿಬ್ಬಂದಿ, ಸ್ಥಳೀಯ ಅಧಿಕಾರಿಗಳು, ಹೊಯ್ಸಳ ಪೊಲೀಸರು ಎಲ್ಲರು ಇರಲಿದ್ದಾರೆ ಎಂದು ಮಾಹಿತಿ ನೀಡಿದರು.
ಇಂದು ಪ್ರತಿಭಟನೆ ಹಾಗೂ ಮೆರವಣಿಗೆಗೆ ಅವಕಾಶವಿಲ್ಲ. ಸಾರ್ವಜನಿಕರು ಸ್ವಯಂಪ್ರೇರಿತರಾಗಿ ಬಂದ್‍ಗೆ ಬೆಂಬಲಿಸಿದರೆ ತೊಂದರೆ ಇಲ್ಲ. ಆದರೆ, ಒತ್ತಾಯ ಮಾಡುವಂತಿಲ್ಲ. ಅಲ್ಲದೆ, ಬಲವಂತವಾಗಿ ಅಂಗಡಿ, ಹೋಟೆಲ್, ಕಚೇರಿಗಳನ್ನು ಬಂದ್ ಮಾಡುವಂತಿಲ್ಲ ಎಂದು ಬಿ.ದಯಾನಂದ ತಿಳಿಸಿದರು.
ಟೌನ್‍ಹಾಲ್‍ನಿಂದ ಫ್ರೀಡಂಪಾರ್ಕ್‍ವರೆಗೆ ರ‍್ಯಾಲಿಗೆ ಅವಕಾಶ ಕೇಳಿದ್ದಾರೆ. ಆದರೆ, ಹೈಕೋರ್ಟ್ ಪ್ರೀಡಂಪಾರ್ಕ್ ಬಿಟ್ಟು ಬೇರೆ ಕಡೆ ಪ್ರತಿಭಟನೆ ಮಾಡಲು ಅವಕಾಶ ಇಲ್ಲ ಎಂದು ಹೇಳಿದೆ. ನ್ಯಾಯಾಲಯದ ಆದೇಶ ಉಲ್ಲಂಘನೆಯಾದಲ್ಲಿ ನಿರ್ದಾಕ್ಷಿಣ್ಯವಾಗಿ ಕ್ರಮ ಜರುಗಿಸಲಾಗುವುದು ಎಂದೂ ಅವರು ಉಲ್ಲೇಖಿಸಿದರು.