ಸಚಿವರಿಗೆ ‘ಖಾತೆ’ಗಳ ಸುಳಿವೇ ಇಲ್ಲ: ವಿಪಕ್ಷ ನಾಯಕ ಆರ್. ಅಶೋಕ್ ವ್ಯಂಗ್ಯ

ಆರ್. ಅಶೋಕ್ (File Photo)
ಬೆಂಗಳೂರು: ‘ನೂತನ ಸಚಿವರ ಪ್ರಮಾಣ ವಚನ ಸ್ವೀಕಾರ ಮುಗಿದು ಮೂರು ದಿನಗಳೇ ಕಳೆದಿವೆ... ಆದರೆ, ಇನ್ನೂ ‘ಖಾತೆ'ಗಳ ಸುಳಿವೇ ಇಲ್ಲ’ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಲೇವಡಿ ಮಾಡಿದ್ದಾರೆ.
ಗುರುವಾರ ಎಕ್ಸ್ ನಲ್ಲಿ ಪೋಸ್ಟ್ ಹಾಕಿರುವ ಅವರು, ಡಮ್ಮಿ ಸಿಎಂ ಡಿ.ಕೆ.ಶಿವಕುಮಾರ್ ಅವರೇ, ಪೇಮೆಂಟ್ ಕೋಟಾ ಸಚಿವರಿಗೆ ಖಾತೆ ಹಂಚಲು ಹೈಕಮಾಂಡ್ ಅನುಮತಿಗಾಗಿ ಕಾಯುತ್ತಿದ್ದೀರೋ ಅಥವಾ ನಿಗದಿಯಾದ ಪೇಮೆಂಟ್ ಇನ್ನೂ ‘ಖಾತೆ'ಗೆ ಜಮಾ ಆಗಿಲ್ಲವೆಂದು ತಡೆ ಹಿಡಿದಿದ್ದೀರೋ?’ ಎಂದು ಪ್ರಶ್ನಿಸಿದ್ದಾರೆ.
‘ಇತ್ತ ದಿಲ್ಲಿಯ ‘ಕಲೆಕ್ಷನ್ ಏಜೆಂಟ್' ರಣದೀಪ್ ಸುರ್ಜೇವಾಲ ಸಾಹೇಬರು, ಅಸಮಾಧಾನಗೊಂಡ ಶಾಸಕರ ಮನೆ ಮನೆಗೆ ತೆರಳಿ ತೇಪೆ ಹಚ್ಚುವುದರಲ್ಲಿ ಹಾಗೂ ಕುಸಿಯುತ್ತಿರುವ ಸರಕಾರಕ್ಕೆ ‘ಪ್ಯಾಚ್ ವರ್ಕ್' ಹಾಕುವುದರಲ್ಲೇ ಬ್ಯುಸಿ. ಅಂದಹಾಗೆ, ಇನ್ನು ಮುಂದೆ ಪ್ರತಿಯೊಂದು ಕಡತಕ್ಕೂ ಸಹಿ ಹಾಕಲು ಸುರ್ಜೇವಾಲರೇ ಬರಬೇಕಾ? ವಿಧಾನಸೌಧದಲ್ಲಿ ಅವರಿಗೆ ಒಂದು ಕೊಠಡಿ ಮೀಸಲಿಟ್ಟಿದ್ದೀರಾ?’ ಎಂದು ಅವರು ವಾಗ್ದಾಳಿ ನಡೆಸಿದ್ದಾರೆ.
‘ಎಲ್ಲ ಫೈಲ್ಗಳನ್ನ ದಿಲ್ಲಿಗೆ ಸ್ಪೀಡ್ ಪೋಸ್ಟ್ ನಲ್ಲಿ ಕಳುಹಿಸಿಕೊಡುವ ವ್ಯವಸ್ಥೆ ಮಾಡಿದ್ದೀರಾ ‘ರಬ್ಬರ್ ಸ್ಟ್ಯಾಂಪ್' ಮುಖ್ಯಮಂತ್ರಿಗಳೇ?. ರಾಜ್ಯದಲ್ಲಿ ನಿಜವಾದ ಸರಕಾರ ನಡೀತಾ ಇದೆಯೋ ಅಥವಾ ದಿಲ್ಲಿಯ ಹೈಕಮಾಂಡ್ನ ‘ರಿಮೋಟ್ ಕಂಟ್ರೋಲ್' ಹೈಜಾಕ್ ನಾಟಕ ನಡೀತಾ ಇದೆಯೋ ಜನತೆಗಂತೂ ಸ್ಪಷ್ಟವಾಗಿ ಅರ್ಥವಾಗುತ್ತಿದೆ’ ಎಂದು ಆರ್.ಅಶೋಕ್ ಟೀಕಿಸಿದ್ದಾರೆ.
‘ಪೇಮೆಂಟ್ ಕೋಟಾ ವಿಸ್ತರಣೆ’
‘ಇತ್ತೀಚೆಗೆ ನಡೆದ ಸಂಪುಟ ವಿಸ್ತರಣೆ ‘ಪೇಮೆಂಟ್ ಕೋಟಾ ವಿಸ್ತರಣೆ’ ಎಂದು ನಾನು ಮಾಡಿದ್ದ ಆರೋಪ ಈಗ ಅಕ್ಷರಶಃ ಸತ್ಯ ಎಂದು ಸಾಬೀತಾಗಿದೆ. ಮಾಜಿ ಸಚಿವ ಆರ್.ಬಿ. ತಿಮ್ಮಾಪುರ ವೈರಲ್ ಆಡಿಯೋ ಸಂಭಾಷಣೆಯೇ ಈ ಭ್ರಷ್ಟಾಚಾರಕ್ಕೆ ಜೀವಂತ ಸಾಕ್ಷಿ’ ಎಂದು ವಿಪಕ್ಷ ನಾಯಕ ಆರ್.ಅಶೋಕ್ ತಿಳಿಸಿದ್ದಾರೆ.
ಗುರುವಾರ ಎಕ್ಸ್ ನಲ್ಲಿ ಪೋಸ್ಟ್ ಹಾಕಿರುವ ಅವರು, ‘ಆ ಧ್ವನಿ ನನ್ನದಲ್ಲ, ಆಡಿಯೋದಲ್ಲಿ ಮಾತಾಡಿರೋದು ನಾನಲ್ಲ’ ಎಂಬ ಎಂದಿನ ಸವಕಲು ಸಮಜಾಯಿಷಿಗಳನ್ನು ಕೇಳಿ-ಕೇಳಿ ಕನ್ನಡಿಗರು ರೋಸಿ ಹೋಗಿದ್ದಾರೆ. ಈ ಕೂಡಲೇ ಈ ಆಡಿಯೋವನ್ನು ವೈಜ್ಞಾನಿಕ ಫೋರೆನ್ಸಿಕ್ ತನಿಖೆಗೆ ಒಳಪಡಿಸಿ, ಸತ್ಯಾಸತ್ಯತೆಯನ್ನು ನಾಡಿನ ಜನರ ಮುಂದಿಡಬೇಕು’ ಎಂದು ಆಗ್ರಹಿಸಿದ್ದಾರೆ.
‘ಆಡಿಯೋದಲ್ಲಿರುವುದು ಆರ್.ಬಿ.ತಿಮ್ಮಾಪುರ ಅವರ ಧ್ವನಿಯೇ ಅಲ್ಲ ಎನ್ನುವುದಾದರೆ, ಈ ಪ್ರಕರಣವನ್ನು ಫೋರೆನ್ಸಿಕ್ ತನಿಖೆಗೆ ಒಪ್ಪಿಸಲು ಭಯವೇಕೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾಗೂ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರೇ?’ ಎಂದು ಆರ್.ಅಶೋಕ್ ಪ್ರಶ್ನೆ ಮಾಡಿದ್ದಾರೆ.






