ಸಿಎಂ ಬದಲಾವಣೆಯ ಬಗ್ಗೆ ಯಾವುದೇ ಚರ್ಚೆ ಆಗಿಲ್ಲ: ಸುರ್ಜೇವಾಲ ಸ್ಪಷ್ಟಣೆ

ರಣದೀಪ್ ಸಿಂಗ್ ಸುರ್ಜೇವಾಲ (Photo: X)
ಬೆಂಗಳೂರು: ರಾಜ್ಯದಲ್ಲಿ ‘ಮುಖ್ಯಮಂತ್ರಿ ಬದಲಾವಣೆ’ ಕುರಿತು ಚರ್ಚೆಯ ಬೆನ್ನಲ್ಲೆ ಈ ಕುರಿತು ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ, ಮುಖ್ಯಮಂತ್ರಿ ಬದಲಾವಣೆ ಬಗ್ಗೆ ಕಾಂಗ್ರೆಸ್ ಪಕ್ಷದಲ್ಲಿ ಯಾವುದೇ ಚರ್ಚೆಯೇ ನಡೆದಿಲ್ಲ’ ಎಂದು ಸ್ಪಷ್ಟಣೆ ನೀಡಿದ್ದಾರೆ.
ಶುಕ್ರವಾರ ಇಲ್ಲಿನ ಸದಾಶಿವನಗರದಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡಿದ ಬಳಿಕ ಮಾತನಾಡಿದ ಅವರು, ಸಿಎಂ ಬದಲಾವಣೆ ಸಂಬಂಧ ಯಾರೂ ಹೇಳಿಕೆಗಳನ್ನು ನೀಡಬಾರದು. ಯಾರೂ ಪಕ್ಷದ ಚೌಕಟ್ಟು ಮೀರಬಾರದು ಎಂದು ಸೂಚನೆ ಕೊಟ್ಟಿದ್ದರೂ ಕೆಲವರು ಅದನ್ನು ಮೀರಿ ಮಾತನಾಡಿದ್ದಾರೆ. ಈ ಬಗ್ಗೆ ಗಮನ ಹರಿಸಲು ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಡಿಸಿಎಂ ಡಿ.ಕೆ.ಶಿವಕುಮಾರ್ ಅವರಿಗೆ ಸೂಚನೆ ನೀಡಲಾಗಿದೆ ಎಂದರು.
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಪೇಸ್ಮೇಕರ್ ಅಳವಡಿಸಿದ್ದು, ಆರೋಗ್ಯ ವಿಚಾರಿಸಲು ಆಗಮಿಸಿದ್ದೆ. ಖರ್ಗೆ ಅವರು ಚೇತರಿಸಿಕೊಳ್ಳುತ್ತಿದ್ದಾರೆ ಎಂದರು. ಈ ವೇಳೆ ಬಿಡಿಎ ಅಧ್ಯಕ್ಷರೂ ಆಗಿರುವ ಶಾಸಕ ಎನ್.ಎ.ಹಾರಿಸ್ ಉಪಸ್ಥಿತರಿದ್ದರು.





