ಮತದಾನದ ಹಕ್ಕು ರಕ್ಷಣೆಗೆ ಮುಖ್ಯ ನ್ಯಾಯಮೂರ್ತಿಗಳನ್ನು ಭೇಟಿ ಮಾಡದೆ ಬೇರೆ ದಾರಿಯಿಲ್ಲ: ಸಿಎಂ ಡಿ.ಕೆ.ಶಿವಕುಮಾರ್

ಚೆನ್ನೈ: ಮುಖ್ಯ ನ್ಯಾಯಮೂರ್ತಿಗಳು ದೇಶದ ಜನರ ಧ್ವನಿಯನ್ನು ಆಲಿಸಬೇಕು. ಚುನಾವಣಾ ಆಯೋಗವನ್ನು ಭೇಟಿಯಾಗಿ ಮನವಿ ಸಲ್ಲಿಸಿದರೂ ಸ್ಪಂದನೆ ಸಿಗದಿದ್ದಾಗ, ಪ್ರಧಾನಮಂತ್ರಿಗಳು ಕರೆದು ಸಮಸ್ಯೆ ಏನು ಎಂದು ಕೇಳಬೇಕಿತ್ತು. ಇಂತಹ ಪರಿಸ್ಥಿತಿಯಲ್ಲಿ ಮುಖ್ಯ ನ್ಯಾಯಮೂರ್ತಿಗಳನ್ನು ಭೇಟಿ ಮಾಡದೆ ಬೇರೆ ದಾರಿಯಿಲ್ಲ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅಭಿಪ್ರಾಯಪಟ್ಟರು.
ಚೆನ್ನೈನಲ್ಲಿ ಸೋಮವಾರ ಸುದ್ದಿ ಸಂಸ್ಥೆಯೊಂದರ ಪ್ರಶ್ನೆಗೆ ಅವರು ಪ್ರತಿಕ್ರಿಯಿಸಿದರು.
ಇಂಡಿಯಾ ಮೈತ್ರಿಕೂಟದ ನಾಯಕರ ಭೇಟಿಗೆ ಮುಖ್ಯ ನ್ಯಾಯಮೂರ್ತಿಗಳು ಅವಕಾಶ ನಿರಾಕರಿಸಿರುವ ಕುರಿತು ಕೇಳಿದಾಗ, ಸಾರ್ವಜನಿಕ ಜೀವನದಲ್ಲಿ ನಾವು ಲಭ್ಯವಿರುವ ಎಲ್ಲ ಅವಕಾಶಗಳನ್ನು ಬಳಸಿಕೊಂಡು ದೇಶದ ಪ್ರಜಾಪ್ರಭುತ್ವ ಹಾಗೂ ಎಲ್ಲ ನಾಗರಿಕರ ಮತದಾನದ ಹಕ್ಕನ್ನು ರಕ್ಷಿಸಲು ಪ್ರಯತ್ನಿಸುತ್ತೇವೆ ಎಂದರು.
ಮತದಾನದ ಹಕ್ಕು ನಮ್ಮ ಬದುಕಿನ ಹಕ್ಕಾಗಿದೆ. ಅದೇ ನಮ್ಮ ಬದುಕು. ವಿರೋಧ ಪಕ್ಷದ ನಾಯಕರು ದೇಶದ ಜನರ ಧ್ವನಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪ್ರಜಾಪ್ರಭುತ್ವದಲ್ಲಿ ಏನು ಬೇಕಾದರೂ ಆಗಬಹುದು ಎಂದು ತಿಳಿಸಿದರು.




