ಸಿದ್ದರಾಮಯ್ಯರನ್ನು ಸಿಎಂ ಮಾಡಿ ಎಂದು ಮೂರು ಬಾರಿ ಸೋನಿಯಾ ಗಾಂಧಿ ಮನೆ ಬಾಗಿಲಿಗೆ ಹೋಗಿದ್ದೆ: ಎಚ್.ಡಿ. ದೇವೇಗೌಡ

ಎಚ್.ಡಿ. ದೇವೇಗೌಡ
ಬೆಂಗಳೂರು: ‘ಯಾವುದೇ ಕಾರಣಕ್ಕೂ ನಾವು ಎನ್ಡಿಎ ಮೈತ್ರಿಯನ್ನು ಕಡಿದುಕೊಳ್ಳುವುದಿಲ್ಲ. ಪ್ರಧಾನಿ ಮೋದಿ ಹಾಗೂ ಅಮಿತ್ ಶಾ ನಾಯಕತ್ವದಲ್ಲಿ ವಿಶ್ವಾಸ ಇರಿಸಿದ್ದೇವೆ’ ಎಂದು ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಹಾಗೂ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಪ್ರಕಟಿಸಿದ್ದಾರೆ.
ಶನಿವಾರ ಜೆಡಿಎಸ್ ಬೆಳ್ಳಿಹಬ್ಬವನ್ನು ಉದ್ಘಾಟಿಸಿ ಭಾಷಣ ಮಾಡಿದ ಅವರು, ಪ್ರಧಾನಿ ಮೋದಿ ನೇತೃತ್ವದ ಸರಕಾರದ ಮೇಲೆ ನಾವು ವಿಶ್ವಾಸ ಇಟ್ಟಿದ್ದೇವೆ. ಅವರ ನೇತೃತ್ವದಲ್ಲಿ ಬಲಿಷ್ಠ ಸರಕಾರ ಕೇಂದ್ರದಲ್ಲಿ ಆಡಳಿತದಲ್ಲಿದೆ. ಇದನ್ನು ನಮ್ಮ ಪಕ್ಷದ ಕಾರ್ಯಕರ್ತರು, ಮುಖಂಡರು ಯಾರು ಮರೆಯಬಾರದು ಎಂದು ಸಲಹೆ ನೀಡಿದರು.
ತುರ್ತು ಪರಿಸ್ಥಿತಿ ಹೇರಿದಾಗ ಎರಡನೇ ಸ್ವಾತಂತ್ರ್ಯ ಹೋರಾಟ ನಡೆಸಿದ ಜಯಪ್ರಕಾಶ ನಾರಾಯಣ ಜತೆಯಲ್ಲಿ ನಾವು, ಅವತ್ತಿನ ಬಿಜೆಪಿಯವರು ಒಟ್ಟಿಗೆ ಕೆಲಸ ಮಾಡಿದ್ದೇವೆ. ಹೀಗಾಗಿ ನಾವು ರಾಷ್ಟ್ರದ ಹಿತದೃಷ್ಟಿಯಿಂದ ಒಟ್ಟಾಗಿ ಕೆಲಸ ಮಾಡಬೇಕಿದೆ. ಕಾಂಗ್ರೆಸ್ ಪಕ್ಷದ ಕೆಟ್ಟ ಆಡಳಿತಕ್ಕೆ ಪಾಠ ಕಲಿಸಬೇಕು ಎಂದು ದೇವೇಗೌಡ ಹೇಳಿದರು.
‘ಜೆಡಿಎಸ್ನಲ್ಲೇ ಇದ್ದಿದ್ದರೆ ನಾನು ಸಿಎಂ ಆಗುತ್ತಿರಲಿಲ್ಲ’ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ನಾನು ಸಿಎಂ ಮಾಡಲು ತಯಾರಿದ್ದೆ. ಆದರೆ, ಸೋನಿಯಾ ಗಾಂಧಿ, ಧರ್ಮಸಿಂಗ್ರನ್ನು ಸಿಎಂ ಮಾಡಲು ಪಟ್ಟು ಹಿಡಿದರು. ಕಾಶ್ಮೀರದಲ್ಲಿ ಗುಲಾಮ್ ನಬಿ ಆಝಾದ್ರನ್ನು ಡಿಸಿಎಂ ಮಾಡಿದ್ದೀರಿ, ಮುಫ್ತಿ ಮೊಹಮ್ಮದ್ ಸಯ್ಯಿದ್ರನ್ನು ಸಿಎಂ ಮಾಡಿದ್ದೀರಿ. ಅದೇ ರೀತಿ ಕರ್ನಾಟಕದಲ್ಲಿ ಸಿದ್ದರಾಮಯ್ಯರನ್ನು ಸಿಎಂ ಮಾಡಿ ಎಂದು ಮೂರು ಬಾರಿ ಸೋನಿಯಾ ಗಾಂಧಿ ಮನೆ ಬಾಗಿಲಿಗೆ ಹೋಗಿ ಕೇಳಿದೆ. ಸಿದ್ದರಾಮಯ್ಯ ಬೇಕಿದ್ದರೆ ಸೋನಿಯಾ ಅವರನ್ನು ಕೇಳಲಿ, ಅವರು ಇನ್ನೂ ಬದುಕಿದ್ದಾರೆ ಎಂದು ದೇವೇಗೌಡ ನುಡಿದರು.
ಅನೇಕ ಸಂದರ್ಭಗಳಲ್ಲಿ ನಾನು ಈ ವ್ಯಕ್ತಿ(ಸಿದ್ದರಾಮಯ್ಯ)ಯನ್ನು ಡಿಸಿಎಂ ಮಾಡಿದ್ದಕ್ಕೆ ಕಣ್ಣೀರು ಇಟ್ಟೆ. ಅವರನ್ನು ಹಣಕಾಸು ಮಂತ್ರಿ ಮಾಡಿದ್ದು ಹೆಗಡೆ ಅಲ್ಲ, ನಾನು. ಅದನ್ನು ಆ ಮನುಷ್ಯ ನೆನಪು ಇಟ್ಟುಕೊಳ್ಳಬೇಕು. ಸಿದ್ದರಾಮಯ್ಯ ನಮ್ಮ ಪಕ್ಷಕ್ಕೆ ಏನು ಕೊಡುಗೆ ನೀಡಿಲ್ಲ ಎಂದು ದೇವೇಗೌಡ, ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದರು.
ಸಿದ್ದರಾಮಯ್ಯನವರು ಪಕ್ಷದಿಂದ ಹೋಗಿದ್ದಕ್ಕೆ ನನಗೆ ಯಾವ ಪಶ್ಚಾತ್ತಾಪವು ಇಲ್ಲ. ಇಂತಹವರು ಅನೇಕರು ನಮ್ಮ ಪಕ್ಷಕ್ಕೆ ಬಂದಿದ್ದಾರೆ, ಹೋಗಿದ್ದಾರೆ. ಇದಕ್ಕೆಲ್ಲ ಹೆದರುವುದಿಲ್ಲ, ನಾನು ಜೆಡಿಎಸ್ ಪಕ್ಷವನ್ನು ಕಟ್ಟುತ್ತೇನೆ. ಎಲ್ಲಿ ಕರೆದರೂ ಹೋಗುತ್ತೇನೆ. ಈ ದೇವೇಗೌಡ ಸುಮ್ಮನೆ ಕೂರುವ ವ್ಯಕ್ತಿಯಲ್ಲ ಎಂದು ಗುಡುಗಿದರು.
ಅಲ್ಲಿ ನಿತೀಶ್, ಇಲ್ಲಿ ಕುಮಾರಸ್ವಾಮಿ:
‘ಉತ್ತರದಲ್ಲಿ ಜೆಡಿಯು, ದಕ್ಷಿಣದಲ್ಲಿ ಜೆಡಿಎಸ್. ಅಲ್ಲಿ ನಿತೀಶ್ ಕುಮಾರ್, ಇಲ್ಲಿ ಕುಮಾರಸ್ವಾಮಿ. ನಿತೀಶ್ ಕುಮಾರ್ ಮೂವತ್ತು ವರ್ಷದಿಂದಲೂ ರಾಜಕಾರಣದಲ್ಲಿದ್ದಾರೆ. 10ನೇ ಬಾರಿಗೆ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಅವರು ಬಹಳ ಸೂಕ್ಷ್ಮವಾಗಿ ರಾಜಕಾರಣ ಮಾಡಿಕೊಂಡಿದ್ದಾರೆ. ಇದನ್ನು ನಾವು ಗಮನದಲ್ಲಿ ಇಟ್ಟುಕೊಂಡು ನಾವು ಕೆಲಸ ಮಾಡಬೇಕು’
-ಎಚ್.ಡಿ.ದೇವೇಗೌಡ, ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ







