‘ಪಡಿತರ ವಿತರಣೆ’ ಅಕ್ರಮ ಸಹಿಸುವುದಿಲ್ಲ; ದೂರು ಬಂದ ನ್ಯಾಯಬೆಲೆ ಅಂಗಡಿಗಳ ಪರವಾನಗಿ ರದ್ದು: ಸಚಿವ ರಿಝ್ವಾನ್ ಅರ್ಶದ್
"ಕೇಂದ್ರ ಸರಕಾರದ ಸೂಚನೆಯಂತೆ ರಾಜ್ಯದಲ್ಲಿ 4.94 ಲಕ್ಷ ಕಾರ್ಡ್ಗಳನ್ನು ಪರಿಷ್ಕರಿಸಲಾಗುತ್ತಿದೆ"

ಸಚಿವ ರಿಝ್ವಾನ್ ಅರ್ಶದ್
ಬೆಂಗಳೂರು: ರಾಜ್ಯದಲ್ಲಿ ಪಡಿತರ ವಿತರಣೆಯಲ್ಲಿ ಯಾವುದೇ ರೀತಿಯ ಅಕ್ರಮ ಸಹಿಸಲು ಸಾಧ್ಯವಿಲ್ಲ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಸಚಿವ ರಿಝ್ವಾನ್ ಅರ್ಶದ್ ಹೇಳಿದ್ದಾರೆ.
ಸೋಮವಾರ ವಿಧಾನಸಭೆ ಪ್ರಶ್ನೋತ್ತರ ಅವಧಿಯಲ್ಲಿ ಕಾಂಗ್ರೆಸ್ ಸದಸ್ಯ ಎಸ್.ಎನ್.ನಾರಾಯಣಸ್ವಾಮಿ ಕೇಳಿದ್ದ ಪ್ರಶ್ನೆಗೆ ಉತ್ತರಿಸಿದ ಅವರು, ಪಡಿತರ ವಿತರಣೆಯಲ್ಲಿ ಅಕ್ರಮಗಳಾಗಬಾರದು. ಅಕ್ರಮ ನಡೆಸಿದರೆ ಅದನ್ನು ಗಂಭೀರವಾಗಿ ಪರಿಗಣಿಸಲಾಗುತ್ತದೆ. ಅಕ್ರಮದ ಕುರಿತು ದೂರುಗಳು ಬಂದ ನ್ಯಾಯಬೆಲೆ ಅಂಗಡಿಗಳನ್ನು ಅಮಾನತುಪಡಿಸಲಾಗುತ್ತದೆ. ಭದ್ರತಾ ಠೇವಣಿ ಮುಟ್ಟುಗೋಲು ಹಾಕಿಕೊಂಡು, ಉಲ್ಲಂಘನೆ ದೃಢಪಟ್ಟರೇ ಪರವಾನಗಿ ರದ್ದುಗೊಳಿಸಲಾಗುತ್ತದೆ ಎಂದರು.
ರಾಜ್ಯದಲ್ಲಿ ಒಟ್ಟು 20,547 ನ್ಯಾಯಬೆಲೆ ಅಂಗಡಿಗಳಿವೆ. ಪಾರದರ್ಶಕ ಪಡಿತರ ವಿತರಣೆಗಾಗಿ ಬಯೋಮೆಟ್ರಿಕ್ ವ್ಯವಸ್ಥೆ ಅಳವಡಿಸಲಾಗಿದೆ. ನ್ಯಾಯಬೆಲೆ ಅಂಗಡಿ ಮಟ್ಟದಲ್ಲಿ ಜಾಗೃತಿ ಸಮಿತಿ ರಚಿಸಲಾಗಿದೆ. ಅಲ್ಲದೆ, ಅಕ್ರಮಗಳು ಕಂಡುಬಂದರೇ ಸಹಾಯವಾಣಿ ಸಂಖ್ಯೆ 1967ಕ್ಕೆ ಕರೆ ಮಾಡಿ ದೂರು ಸಲ್ಲಿಸಲು ಅವಕಾಶ ಇದೆ ಎಂದು ಅವರು ತಿಳಿಸಿದರು.
ಅನ್ನಭಾಗ್ಯ ಅಕ್ಕಿ ಕಾಳಸಂತೆಯಲ್ಲಿ ಮಾರಾಟ, ಪಡಿತರದಲ್ಲಿನ ಗೋಲ್ಮಾಲ್ಗೆ ಕಡಿವಾಣ ಹಾಕಲು ಅಗತ್ಯ ಕ್ರಮಕೈಗೊಳ್ಳಲಾಗುತ್ತಿದೆ. ಎಲ್ಲ ಗೋದಾಮುಗಳಲ್ಲಿ ಸಿಸಿಟಿವಿ ಅಳವಡಿಕೆ, ಪಡಿತರ ಧಾನ್ಯಗಳ ಸರಬರಾಜು ಮಾಡುವ ವಾಹನಗಳಿಗೆ ಜಿಪಿಎಸ್ ಅಳವಡಿಕೆಗೆ ಈಗಾಗಲೇ ಸೂಚನೆ ನೀಡಲಾಗಿದೆ. ರಾಜ್ಯದಲ್ಲಿ ಆದ್ಯತಾ ಮತ್ತು ಆದ್ಯತೇರ ಸೇರಿದಂತೆ ಒಟ್ಟು 1 ಕೋಟಿ 54 ಲಕ್ಷ 64 ಸಾವಿರ ಕಾರ್ಡ್ಗಳಿವೆ. ರಾಜ್ಯಕ್ಕೆ ಪ್ರತಿ ತಿಂಗಳು ಕೇಂದ್ರದ ಎನ್ಎಫ್ಎಸ್ಎ ಆಹಾರ ಹಂಚಿಕೆ ಪ್ರಮಾಣದಂತೆ 2,17,403 ಮೆಟ್ರಿಕ್ ಟನ್ ಆಹಾರ ಧಾನ್ಯ ಪೂರೈಕೆಯಾಗುತ್ತಿದೆ.
ರಾಗಿ ಮತ್ತು ಜೋಳವನ್ನು ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ KFCSC, KSCMF, KSAMB ಸಂಸ್ಥೆಗಳ ಮೂಲಕ ರಾಜ್ಯದ ರೈತರಿಂದ ಖರೀದಿಸಿ ವಿತರಿಸಲಾಗುತ್ತಿದೆ. ರಾಜ್ಯ ಯೋಜನೆಗಳಿಗೆ ಮುಕ್ತ ಮಾರುಕಟ್ಟೆ ಮೂಲಕ ಅಕ್ಕಿ ಖರೀದಿಸಲಾಗುತ್ತಿದೆ. ಮೂರು ವರ್ಷದಲ್ಲಿ 96,16,988 ಮೆಟ್ರಿಕ್ ಟನ್ ಅಕ್ಕಿ, 9,90,516 ಮೆ.ಟನ್ ರಾಗಿ, 4,54,243 ಮೆಟ್ರಿಕ್ ಟನ್ ಬಿಳಿಜೋಳ ಫಲಾನುಭವಿಗಳಿಗೆ ವಿತರಿಸಲಾಗಿದೆ. ಪಡಿತರ ಚೀಟಿಗಳು ಹಾಗೂ ಹೆಚ್ಚುವರಿ 5ಕೆಜಿ ಅಕ್ಕಿ ಹಂಚಲು ಮೂರು ವರ್ಷಗಳಲ್ಲಿ 22,756 ಕೋಟಿ ರೂ. ಭರಿಸಲಾಗಿದೆ ಎಂದರು.
3.70 ಲಕ್ಷ ಹೊಸ ಕಾರ್ಡ್ ವಿತರಣೆ:
ಕೇಂದ್ರ ಸರಕಾರವೂ ರಾಜ್ಯದಲ್ಲಿ 7,76,206 ಶಂಕಾಸ್ಪದ ಕಾರ್ಡ್ಗಳನ್ನು ಗುರುತಿಸಿದ್ದು ಕೇಂದ್ರದ ಸೂಚನೆಯಂತೆ ಸುಮಾರು 4.94 ಲಕ್ಷ ಕಾರ್ಡ್ಗಳನ್ನು ಪರಿಷ್ಕರಿಸಲಾಗುತ್ತಿದೆ. ಕಾರ್ಡ್ಗಳ ಪರಿಷ್ಕರಣೆ ಹಿನ್ನೆಲೆಯಲ್ಲಿ ಕೇಂದ್ರದಿಂದ ಹಂಚಿಕೆಯಾಗಿರುವ ಆಧಾರದ ಮೇಲೆ ಹೊಸ ಫಲಾನುಭವಿಗಳಿಗೆ ಕಾರ್ಡ್ ನೀಡಲಾಗುತ್ತಿದೆ. 2023ರ ಜೂನ್ 1ರಿಂದ 2026ರ ಜುಲೈ 31ರ ವರೆಗೂ 3,70,803 ಆದ್ಯತಾ ಕಾರ್ಡ್ಗಳು ಹಾಗೂ 6358 ಆದ್ಯತೇತರ ಕಾರ್ಡ್ಗಳನ್ನು ವಿತರಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು.






