ವಾರಕ್ಕೆ 70 ಗಂಟೆ ಕೆಲಸ ಮಾಡುವ ಅಗತ್ಯವಿಲ್ಲ; ಉಳಿದ ಸಮಯವನ್ನು ನಿಮ್ಮ ಕುಟುಂಬದೊಂದಿಗೆ ಕಳೆಯಿರಿ: ನ್ಯಾ.ಸಂತೋಷ್ ಹೆಗ್ಡೆ

- ಸಂತೋಷ್ ಹೆಗ್ಡೆ - ಲೋಕಾಯುಕ್ತ ನಿವೃತ್ತ ನ್ಯಾಯಮೂರ್ತಿ
ಬೆಂಗಳೂರು, ನ. 2: ವಾರಕ್ಕೆ 70 ಗಂಟೆ ಕೆಲಸ ಮಾಡುವ ಅಗತ್ಯವಿಲ್ಲ. ಬದಲಿಗೆ ಕೆಲಸ ಮಾಡುವ ಸಮಯವನ್ನು ಹೆಚ್ಚು ಉಪಯುಕ್ತವಾಗಿ ಕಳೆದು ಉಳಿದ ಸಮಯವನ್ನು ನಿಮ್ಮ ಕುಟುಂಬದೊಂದಿಗೆ ಕಳೆಯಿರಿ ಎಂದು ಲೋಕಾಯುಕ್ತ ನಿವೃತ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಅಭಿಪ್ರಾಯಪಟ್ಟರು.
ನಗರದಲ್ಲಿ ಟ್ರೇಡಿಂಗ್ ಮತ್ತು ಶಿಕ್ಷಣದ ವಿಶ್ವದಲ್ಲಿ ಜ್ಞಾನ, ನೆಟ್ವರ್ಕಿಂಗ್ ಮತ್ತು ಆವಿಷ್ಕಾರವನ್ನು ಉತ್ತೇಜಿಸುವ ದಿ ಟ್ರೇಡಿಂಗ್ ಮೈಂಡ್ಸ್ ಆಯೋಜಿಸಿದ್ದ ‘ಟ್ರೇಡರ್ಸ್ ಮೀಟಪ್ ಮತ್ತು ಎಜುಕೇಷನ್ ಹೀರೋಸ್’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಹೆಚ್ಚು ಸಮಯ ಕೆಲಸ ಮಾಡುವುದು ಹೆಚ್ಚು ಉತ್ಪಾದಕತೆ ಎನ್ನುವುದು ತಪ್ಪು ಕಲ್ಪನೆಯಾಗಿದೆ. ಕೆಲಸ ಮಾಡುವ ಅವಧಿಯನ್ನು ಹೆಚ್ಚು ಪರಿಣಾಮಕಾರಿಯಾಗಿ ಕೆಲಸ ಮಾಡುವುದಷ್ಟೇ ನಮಗೆ ಮುಖ್ಯವಾಗಿದೆ ಎಂದು ಅವರು ಇನ್ಫೋಸಿಸ್ ಸಂಸ್ಥಾಪಕ ಎನ್.ಆರ್.ನಾರಾಯಣಮೂರ್ತಿ ಹೇಳಿಕೆಗೆ ಪ್ರತಿಕ್ರಯಿಸಿದರು.
ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ವಿ.ಗೋಪಾಲಗೌಡ ಮಾತನಾಡಿ, ಬರೀ ಆರ್ಥಿಕತೆಯ ಅಭಿವೃದ್ಧಿ ಮಾತ್ರವಲ್ಲ, ಎಲ್ಲ ರಂಗಗಳಲ್ಲೂ ನಾವು ಅಭಿವೃದ್ಧಿ ಸಾಧಿಸಬೇಕಾಗಿದೆ. ಈ ನಿಟ್ಟಿನಲ್ಲಿ ಸರಕಾರಗಳು ಆಲೋಚನೆ ನಡೆಸಬೇಕು ಎಂದು ಅವರು ನುಡಿದರು.
ಈ ಸಂದರ್ಭದಲ್ಲಿ ದಿ ಟ್ರೇಡಿಂಗ್ ಮೈಂಡ್ಸ್ ಸಂಸ್ಥಾಪಕ ಪವನ್ ಜೋಷಿ, ಅನುಶ್ರುತ್ ಮಂಚಿ, ಡಾ.ವಿನಯ್ ಶೆಟ್ಟಿ, ಅನಿಲ್ ಶೆಟ್ಟಿ, ಗಿರಿಧರ್ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.







