ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡಿರುವುದರಲ್ಲಿ ವಿಶೇಷವೇನು ಇಲ್ಲ: ಸಚಿವೆ ಲಕ್ಷ್ಮೀ ಹೆಬ್ಬಾಳಕರ್

ಬೆಂಗಳೂರು: ‘ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡಿರುವುದರಲ್ಲಿ ಯಾವುದೇ ವಿಶೇಷವೇನು ಇಲ್ಲ. ಸೌಹಾರ್ದಯುತವಾಗಿ ಅವರನ್ನು ಭೇಟಿ ಮಾಡಿದ್ದೇನೆ ಅಷ್ಟೇ’ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಸ್ಪಷ್ಟಪಡಿಸಿದ್ದಾರೆ.
ರವಿವಾರ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಬೆಂಗಳೂರಿನ ಸದಾಶಿವ ನಗರದ ನಿವಾಸಕ್ಕೆ ಭೇಟಿ ನೀಡಿ, ಕುಶಲೋಪರಿ ವಿಚಾರಿಸಿದ ಬಳಿಕ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ಖರ್ಗೆ ಅವರು ನಮ್ಮ ಪಕ್ಷದ ಧುರೀಣರು ಅವರ ಆಶೀರ್ವಾದ ಪಡೆಯುವ ಸಲುವಾಗಿ ಭೇಟಿ ಮಾಡಿದೆ ಎಂದರು.
ಖರ್ಗೆ ಅವರೊಂದಿಗೆ ಸುಮಾರು ವಿಷಯಗಳ ಬಗ್ಗೆ ಚರ್ಚೆ ನಡೆಸಲಾಯಿತು. ಹಲವು ದಿನಗಳ ಬಳಿಕ ಅವರನ್ನು ಭೇಟಿ ಮಾಡಿದೆ. ಕಳೆದ ಬಾರಿ ದಿಲ್ಲಿ ಪ್ರವಾಸಕ್ಕೆ ತೆರಳಿದಾಗಲೂ ಖರ್ಗೆ ಅವರು ಸಿಕ್ಕಿರಲಿಲ್ಲ. ಅವರ ಮಾರ್ಗದರ್ಶನ ನಮಗೆ ಅಗತ್ಯ. ನಮ್ಮ ಇಲಾಖೆ, ಗ್ಯಾರಂಟಿ ಯೋಜನೆಗಳ ಬಗ್ಗೆ ಚರ್ಚೆ ಮಾಡಲಾಯಿತು ಎಂದು ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.
ನನ್ನ ಆರೋಗ್ಯವನ್ನು ವಿಚಾರಿಸಿದರು. ಜಿಲ್ಲಾ ಪ್ರವಾಸ ಮಾಡುತ್ತಿದ್ದೀರಾ? ಅಂತ ಕೇಳಿದರು. ಅದರಲ್ಲೂ ಗೃಹಲಕ್ಷ್ಮಿ ಯೋಜನೆಯ ಬಗ್ಗೆ ಮಾಹಿತಿ ಪಡೆದುಕೊಂಡರು. ಅರ್ಹ ಮಹಿಳೆಯರಿಗೆ ಯೋಜನೆಯ ಹಣ ತಲುಪುತ್ತಿದ್ಯಾ, ಇಲಾಖೆಯ ಕಾರ್ಯವೈಖರಿ ಬಗ್ಗೆಯೂ ಕೇಳಿದರು ಎಂದು ಲಕ್ಷ್ಮಿ ಹೆಬ್ಬಾಳ್ಕರ್ ಅವರು ತಿಳಿಸಿದರು.







