ಮಾಧ್ಯಮಗಳಿಗೆ ಬಾಕಿ ಹಣವನ್ನು ಪಾವತಿಸುವಂತೆ ಜಾಹಿರಾತು ಸಂಸ್ಥೆಗಳಿಗೆ ಸೂಚನೆ: ಸಚಿವ ಎನ್.ಎಸ್.ಬೋಸರಾಜು

ಬೆಂಗಳೂರು, ಜು.13: ‘ಸರಕಾರವು ಜಾಹಿರಾತು ಸಂಸ್ಥೆಗಳಿಗೆ ಹಣವನ್ನು ಪಾವತಿ ಮಾಡಿದ್ದು, ಜಾಹೀರಾತು ಸಂಸ್ಥೆಗಳು, ಪತ್ರಿಕೆಗಳು ಹಾಗೂ ವಾಹಿನಿಗಳಿಗೆ ಹಣವನ್ನು ಪಾವತಿಸಿಲ್ಲ ಎಂಬ ಮಾಹಿತಿ ಇದ್ದು, ಬಾಕಿ ಹಣವನ್ನು ಪಾವತಿ ಮಾಡುವಂತೆ ಸಂಸ್ಥೆಗಳಿಗೆ ಸೂಚಿಸಲಾಗಿದೆ ಎಂದು ಸಚಿವ ಎನ್.ಎಸ್. ಬೋಸರಾಜು ತಿಳಿಸಿದ್ದಾರೆ.
ಗುರುವಾರ ಪರಿಷತ್ತಿನಲ್ಲಿ ಕಾಂಗ್ರೆಸ್‍ನ ಸದಸ್ಯ ಕೆ.ಹರೀಶ್‍ಕುಮಾರ್ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, 2022ರ ಎ.1ರಿಂದ 2023ರ ಮಾ.31ರ ತನಕ ವಿವಿಧ ಪತ್ರಿಕೆಗಳು ಹಾಗೂ ವಾಹಿನಿಗಳಿಗೆ ಜಾಹೀರಾತು ಮೊತ್ತ ಬಿಡುಗಡೆಗೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಸರಕಾರ ಜಾಹೀರಾತು ಸಂಸ್ಥೆಗಳಿಗೆ ಹಣ ಬಿಡುಗಡೆ ಮಾಡಿದ್ದರೂ ಇನ್ನೂ ಮಾಧ್ಯಮಗಳಿಗೆ ಹಣ ತಲುಪದಿದ್ದರೆ ಅದು ತಲುಪುವಂತೆ ಮಾಡಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದರು.
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಿಂದ ಮುದ್ರಣ ಮಾಧ್ಯಮ, ವಿಶೇಷಾಂಕಗಳಿಗೆ, ಎಲೆಕ್ಟ್ರಾನಿಕ್ ಮಾಧ್ಯಮ, ಬಸ್ ಬ್ರ್ಯಾಂಡಿಂಗ್, ಆಟೋ ಬ್ರ್ಯಾಂಡಿಂಗ್, ಹೋರ್ಡಿಂಗ್ಸ್, ಬಸ್ ಶೆಲ್ಟರ್ ಜಾಹೀರಾತುಗಳಿಗಾಗಿ ರೂ. 201.66 ಕೋಟಿ ವೆಚ್ಚ ಮಾಡಲಾಗಿದೆ. ಜನವರಿ 1, 2023ರಿಂದ ಮಾರ್ಚ್ 2023ರ ವರೆಗೆ ರೈಲುಗಳಲ್ಲಿ ಹಾಗೂ ಸ್ಟೇಷನ್‍ಗಳಲ್ಲಿ 3.44 ಕೋಟಿ ರೂ., ಟಿ.ವಿ.ವಾಹಿನಿಗಳಿಗೆ 14.90 ಕೋಟಿ ರೂ., ಥಿಯೇಟರ್‍ಗಳಲ್ಲಿ 1.72 ಕೋಟಿ ರೂ., ವಿಶೇಷ ಪುರವಣಿಗಳಿಗೆ 10.20 ಕೋಟಿ ರೂ., ಸಾಮಾಜಿಕ ಜಾಲತಾಣಗಳಿಗೆ 0.17ಕೋಟಿ ರೂ. ಮತ್ತು ಈವೆಂಟ್ ಮ್ಯಾನೇಜ್‍ಮೆಂಟ್‍ಗೆ 0.61 ಕೋಟಿ ರೂ. ವೆಚ್ಚ ಮಾಡಲಾಗಿದೆ ಎಂದು ತಿಳಿಸಿದರು.
ಇದೇ ವೇಳೆ ಕೆ.ಹರೀಶ್‍ಕುಮಾರ್ ಮಾತನಾಡಿ, ‘ಎವೆಂಟ್ ಮ್ಯಾನೇಜ್‍ಮೆಂಟ್‍ಗೆ ಸಂಬಂಧಿಸಿ ಟೆಂಡರ್ ನಲ್ಲಿ 4ಜಿ ವಿನಾಯಿತಿಯನ್ನು ನೀಡಲಾಗಿದೆ. ಇದನ್ನು ಪರಿಶೀಲನೆ ಮಾಡಿ ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು.







