ನೂತನ ಸಿಎಂ ಪ್ರಮಾಣ ವಚನ: ‘ಶಕ್ತಿಕೇಂದ್ರದ ಸಿಬ್ಬಂದಿಗೆ ಅರ್ಧದಿನ ರಜೆ’

ಬೆಂಗಳೂರು : ನೂತನ ಮುಖ್ಯಮಂತ್ರಿ ಪ್ರಮಾಣ ವಚನ ಸ್ವೀಕಾರ ಸಮಾರಂಭ ಲೋಕಭವನದಲ್ಲಿ ನಡೆಯಲಿದ್ದು, ಭದ್ರತೆ ಕಾರಣಕ್ಕೆ ವಿಧಾನಸೌಧ, ವಿಕಾಸಸೌಧ ಹಾಗೂ ಬಹುಮಹಡಿ ಕಟ್ಟಡ(ಎಂ.ಎಸ್.ಬಿಲ್ಡಿಂಗ್)ದಲ್ಲಿನ ಅಧಿಕಾರಿ-ಸಿಬ್ಬಂದಿಗಳಿಗೆ ನಾಳೆ(ಜೂ.3) ಮಧ್ಯಾಹ್ನ ಅರ್ಧದಿನ ರಜೆ ನೀಡಲಾಗಿದೆ.
ಮಂಗಳವಾರ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಸರಕಾರದ ಅಧೀನ ಕಾರ್ಯದರ್ಶಿ ಆರ್.ಯದುಕುಮಾರ್ ಆದೇಶ ಹೊರಡಿಸಿದ್ದು, ರಾಜ್ಯದ ನಿಯೋಜಿತ ಸಿಎಂ ಪ್ರಮಾಣ ವಚನ ನಾಳೆ ಸಂಜೆ 4:05ರ ಸುಮಾರಿಗೆ ಲೋಕಭವನದಲ್ಲಿ ನಿಗದಿಯಾಗಿದೆ. ಲೋಕಭವನ ಮತ್ತು ಸುತ್ತಮುತ್ತಲಿನ ಪ್ರದೇಶದಲ್ಲಿ ಜನಸಂದಣಿ ಹಾಗೂ ವಾಹನ ಸಂಚಾರ ದಟ್ಟಣೆ ಉಂಟಾಗುವ ಸಂಭವವಿದೆ. ಭದ್ರತೆ ಮತ್ತು ಸುರಕ್ಷತೆಯ ದೃಷ್ಟಿಯಿಂದ ಮೇಲ್ಕಂಡ ಸಿಬ್ಬಂದಿಗೆ ಅರ್ಧದಿನ ರಜೆ ನೀಡಲಾಗಿದೆ ಎಂದು ತಿಳಿಸಲಾಗಿದೆ.
ನೂತನ ಸಿಎಂ ಪ್ರಮಾಣ ವಚನ ಸಮಾರಂಭದಲ್ಲಿ ಲೋಕಭವನಕ್ಕೆ ಸುಮಾರು 800 ಗಣ್ಯರಿಗೆ ಆಹ್ವಾನ ನೀಡಲಾಗಿದೆ. ಕಾಂಗ್ರೆಸ್ ಆಡಳಿತದ ರಾಜ್ಯಗಳ ಮುಖ್ಯಮಂತ್ರಿಗಳು, ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಹಲವು ಗಣ್ಯರು ಪಾಲ್ಗೊಳ್ಳುವ ಸಾಧ್ಯತೆಗಳಿವೆ.
ಸಿಬ್ಬಂದಿ ಹಾಗೂ ಆಡಳಿತ ಸುಧಾರಣೆ ಇಲಾಖೆಯಿಂದ ಪ್ರಮಾಣ ವಚನ ಸಮಾರಂಭಕ್ಕೆ ಸುಮಾರು 2,200ಪಾಸ್‍ಗಳನ್ನು ವಿತರಿಸಿದೆ. ಲೋಕಭವನ ಸುತ್ತುಮುತ್ತ ವಿವಿಐಪಿ ಸಂಚಾರ ಹೆಚ್ಚಿರಲಿದೆ. ಹೀಗಾಗಿ ಸಂಚಾರ ದಟ್ಟಣೆ ಉಂಟಾಗಲಿದೆ. ಲೋಕಭವನ ಸುತ್ತಮುತ್ತ ಜನದಟ್ಟಣೆ ಉಂಟಾಗುವ ಸಾಧ್ಯತೆ ಹಿನ್ನೆಲೆಯಲ್ಲಿ ಮುನ್ನಚ್ಚರಿಕೆ ಕ್ರಮವಾಗಿ ಸಿಬ್ಬಂದಿಗೆ ಅರ್ಧದಿನ ರಜೆ ನೀಡಲಾಗಿದೆ.






