ನಗರ ಯೋಜನಾ ನಿರ್ದೇಶಕರ ಕಚೇರಿ ಇನ್ನು ಮುಂದೆ ‘ಯೋಜನಾ ಆಯುಕ್ತಾಲಯ’: ಸರಕಾರದ ಆದೇಶ

ಬೆಂಗಳೂರು, ನ.7: ರಾಜ್ಯದ ನಗರಾಭಿವೃದ್ಧಿ ಪ್ರಾಧಿಕಾರಗಳು, ನಗರ ಯೋಜನಾ ಪ್ರಾಧಿಕಾರಗಳು(ಬಿಡಿಎ, ಬಿಬಿಎಂಪಿ, ಬಿಎಂಆರ್‍ಡಿಎ, ಬಿಎಂಐಸಿಎಪಿಎ ಹೊರತುಪಡಿಸಿ) ಹಾಗೂ ನಗರ ಮತ್ತು ಗ್ರಾಮಾಂತರ ಯೋಜನಾ ನಿರ್ದೇಶಕರ ಕಚೇರಿಯನ್ನು ‘ನಗರಾಭಿವೃದ್ಧಿ ಪ್ರಾಧಿಕಾರಗಳು ಹಾಗೂ ನಗರ ಮತ್ತು ಗ್ರಾಮಾಂತರ ಯೋಜನಾ ಆಯುಕ್ತಾಲಯ’ ಎಂದು ಪದನಾಮೀಕರಿಸಿ ಸರಕಾರ ಆದೇಶ ಹೊರಡಿಸಿದೆ.
ನಗರ ಮತ್ತು ಗ್ರಾಮಾಂತರ ಯೋಜನಾ ನಿರ್ದೇಶಕರ ಇಲಾಖೆಯಲ್ಲಿ ಮಂಜೂರಾದ ನಗರ ಮತ್ತು ಗ್ರಾಮಾಂತರ ಯೋಜನಾ ಸಹಾಯಕ ನಿರ್ದೇಶಕರ ಹುದ್ದೆಗಳ ಪೈಕಿ ಒಂದು ನಗರ ಮತ್ತು ಗ್ರಾಮಾಂತರ ಯೋಜನಾ ಸಹಾಯಕ ನಿರ್ದೇಶಕರ ಹುದ್ದೆಯನ್ನು ರದ್ದುಪಡಿಸಿ, ಹೊಸದಾಗಿ ಸೃಜಿಸಿರುವ ಆಯುಕ್ತಾಲಯಕ್ಕೆ, ಒಂದು ಆಯುಕ್ತರ ಹುದ್ದೆಯನ್ನು ಸೃಜಿಸಿ, ಐಎಎಸ್ ಹಿರಿಯ ವೃಂದದ ಅಧಿಕಾರಿಯನ್ನು ಭರ್ತಿ ಮಾಡಲು ನಗರಾಭಿವೃದ್ಧಿ ಇಲಾಖೆ ಹೊರಡಿಸಿರುವ ಆದೇಶದಲ್ಲಿ ತಿಳಿಸಲಾಗಿದೆ.
ಷರತ್ತುಗಳು: ನಗರಾಭಿವೃದ್ಧಿ ಪ್ರಾಧಿಕಾರಗಳು, ನಗರ ಯೋಜನಾ ಪ್ರಾಧಿಕಾರಗಳು ಹಾಗೂ ನಗರ ಮತ್ತು ಗ್ರಾಮಾಂತರ ಯೋಜನಾ ಇಲಾಖೆಗೆ ಸಂಬಂಧಿಸಿದಂತೆ ರಾಜ್ಯ ನಗರ ಮತ್ತು ಗ್ರಾಮಾಂತರ ಯೋಜನಾ ಕಾಯ್ದೆ 1961 ಮತ್ತು ಕರ್ನಾಟಕ ನಗರಾಭಿವೃದ್ಧಿ ಪ್ರಾಧಿಕಾರಗಳ ಕಾಯ್ದೆ 1987ರಡಿಯಲ್ಲಿ ಸರಕಾರವು ಕಾಲಕಾಲಕ್ಕೆ ಹೊರಡಿಸುವ ಸುತ್ತೋಲೆ, ಆದೇಶ, ನಿರ್ದೇಶನಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲು ಆಯುಕ್ತಾಲಯವು ಕ್ರಮ ವಹಿಸಬೇಕು.
ನಗರ ಮತ್ತು ಗ್ರಾಮಾಂತರ ಯೋಜನಾ ನಿರ್ದೇಶಕರಿಗೆ ಹಾಲಿ ಇರುವ ಎಲ್ಲ ಅಧಿಕಾರವು ಯಥಾವತ್ತಾಗಿ ಮುಂದುವರೆಯುತ್ತದೆ. ನಗರಾಭಿವೃದ್ಧಿ ಪ್ರಾಧಿಕಾರಗಳು, ನಗರ ಯೋಜನಾ ಪ್ರಾಧಿಕಾರಗಳು ಹಾಗೂ ನಗರ ಮತ್ತು ಗ್ರಾಮಾಂತರ ಯೋಜನಾ ಇಲಾಖೆಯು ಸರಕಾರಕ್ಕೆ ಸಲ್ಲಿಸುವ ಎಲ್ಲ ಪ್ರಸ್ತಾವನೆಗಳನ್ನು(ಬಿಡಿಎ, ಬಿಬಿಎಂಪಿ, ಬಿಎಂಆರ್‍ಡಿಎ, ಬಿಎಂಐಸಿಎಪಿಎ ಹೊರತುಪಡಿಸಿ)ಆಯುಕ್ತರ ಮೂಲಕ ಸಲ್ಲಿಸಬೇಕು ಎಂದು ತಿಳಿಸಲಾಗಿದೆ.







