ಅಧಿಕಾರಿ ಪ್ರತಿಮಾ ಕೊಲೆ ಪ್ರಕರಣ: ಚಾಲಕ ಕಿರಣ್ ಪೊಲೀಸ್ ವಶಕ್ಕೆ

ಕೊಲೆಗೀಡಾದ ಅಧಿಕಾರಿ ಪ್ರತಿಮಾ
ಬೆಂಗಳೂರು: ಗಣಿ ಮತ್ತು ಭೂವಿಜ್ಞಾನ ಅಧಿಕಾರಿ ಪ್ರತಿಮಾ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಓರ್ವನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಬೆಂಗಳೂರು ನಗರ ಪೊಲೀಸ್ ಆಯುಕ್ತ ದಯಾನಂದ್ ಅವರು, "ಪ್ರತಿಮಾ ಅವರ ಕಾರು ಚಾಲಕನಾಗಿದ್ದ ಕಿರಣ್ ನನ್ನು ಮಲೆಮಹದೇಶ್ವರ ದೇವಸ್ಥಾನದಲ್ಲಿ ವಶಕ್ಕೆ ಪಡೆಯಲಾಗಿದೆ'' ಎಂದು ತಿಳಿಸಿದರು.
"ಆರೋಪಿಯು ಕೆಲವು ವರ್ಷಗಳಿಂದ ಪ್ರತಿಮಾ ಅವರ ಕಾರು ಚಾಲಕನಾಗಿ ಗುತ್ತಿಗೆ ಆಧಾರದಲ್ಲಿ ಕಳೆದ ನಾಲ್ಕು ವರ್ಷಗಳಿಂದ ಕೆಲಸ ಮಾಡುತ್ತಿದ್ದ. ಇತ್ತೀಚೆಗೆ ಅವರಿಬ್ಬರ ನಡುವೆ ಭಿನ್ನಾಭಿಪ್ರಾಯ ಉಂಟಾಗಿತ್ತು. ಅದೇ ಕಾರಣಕ್ಕೆ ಕಿರಣ್ ನನ್ನು ವಾರದ ಹಿಂದಷ್ಟೇ ಪ್ರತಿಮಾ ಕೆಲಸದಿಂದ ತೆಗೆದುಹಾಕಿದ್ದರು ಎನ್ನಲಾಗಿದೆ'' ಎಂದು ಆಯುಕ್ತರು ಮಾಹಿತಿ ನೀಡಿದರು.
''ಬಲವಾದ ಅನುಮಾನದ ಮೇರೆಗೆ ಚಾಲಕನನ್ನು ವಶಕ್ಕೆ ಪಡೆಯಲಾಗಿದೆ. ಡಿಸಿಪಿ ನೇತೃತ್ವದಲ್ಲಿ ವಿಚಾರಣೆ ನಡೆಯುತ್ತಿದೆ. ಆತನೇ ಕೊಲೆ ಮಾಡಿದ್ದಾನೆಯೆ? ಅದಕ್ಕೆ ಕಾರಣವೇನು ? ಎಂಬುದು ವಿಚಾರಣೆಯಿಂದ ಗೊತ್ತಾಗಬೇಕಿದೆ'' ಎಂದು ತಿಳಿಸಿದರು.





