ಅಧಿಕಾರಿ ಪ್ರತಿಮಾ ಕೊಲೆ ಪ್ರಕರಣ: ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸುವಂತೆ ಸರಕಾರಿ ಮಹಿಳಾ ನೌಕರರ ಸಂಘ ಒತ್ತಾಯ

ಪ್ರತಿಮಾ
ಬೆಂಗಳೂರು, ನ.6: ಗಣಿ ಮತ್ತು ಭೂ ವಿಜ್ಞಾನಿ ಪ್ರತಿಮಾರನ್ನು ಕೊಲೆಗೈದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳಿಗೆ ಸರಕಾರ ಕಠಿಣ ಶಿಕ್ಷೆ ವಿಧಿಸಬೇಕೆಂದು ಅಖಿಲ ಕರ್ನಾಟಕ ರಾಜ್ಯ ಸರಕಾರಿ ಮಹಿಳಾ ನೌಕರರ ಸಂಘದ ಅಧ್ಯಕ್ಷೆ ರೋಶಿನಿ ಗೌಡ ಒತ್ತಾಯಿಸಿದ್ದಾರೆ.
ಸೋಮವಾರ ಪ್ರಕಟನೆ ಹೊರಡಿಸಿರುವ ಅವರು, ಅಕ್ರಮ ಕಲ್ಲು ಗಣಿಗಾರಿಕೆ ವಿರುದ್ಧ ಪ್ರಾಣದ ಹಂಗು ತೊರೆದು ಕರ್ತವ್ಯ ನಿರ್ವಹಿಸಿದ್ದ ಪ್ರತಿಮಾ ಅವರನ್ನು ಭೀಕರವಾಗಿ ಕೊಲೆ ಮಾಡಿರುವುದು ನಾಗರಿಕ ಸಮಾಜವೇ ತಲ್ಲಣಗೊಳ್ಳುವಂತೆ ಮಾಡಿದೆ. ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪಿಗಳ ಮೇಲೆ ನಿರ್ದಾಕ್ಷಿಣ್ಯವಾಗಿ ಕ್ರಮ ಜರುಗಿಸಬೇಕು ಎಂದಿದ್ದಾರೆ.
ಆರೋಪಿಗಳು ಯಾರೇ ಇರಲಿ ಕೂಡಲೇ ಬಂಧಿಸಬೇಕು. ತ್ವರಿತವಾಗಿ ಪ್ರಕರಣದ ವಿಚಾರಣೆ ನಡೆಸಿ ಮುಂದೆ ಇಂತಹ ಕೃತ್ಯದಲ್ಲಿ ಭಾಗಿಯಾಗಿರುವವರಿಗೆ ಎಚ್ಚರಿಕೆಯ ಪಾಠವಾಗುವ ಶಿಕ್ಷೆಯನ್ನು ನೀಡಬೇಕು. ಇಲ್ಲದಿದ್ದರೆ ನಾಳೆ ಇಂತಹ ಹತ್ತು ಹಲವು ಕೃತ್ಯಗಳು ನಡೆಯಬಹುದೆಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.
ಇತ್ತೀಚೆಗೆ ನಾಗರಿಕ ಸಮಾಜದಲ್ಲಿ ಮಹಿಳೆಯರ ಮೇಲೆ ದೌರ್ಜನ್ಯ, ಅತ್ಯಾಚಾರ, ಕೊಲೆ, ಸುಲಿಗೆಯಂತಹ ಪ್ರಕರಣಗಳು ನಡೆಯುತ್ತಲೇ ಇವೆ. ನಾವು ಏನೇ ಮಾಡಿದರೂ ಯಾರು ನಮ್ಮನ್ನು ಏನೂ ಮಾಡಲಾರರು ಎಂಬ ಉದ್ಧಟತನದಿಂದ ಇಂತಹ ಕೃತ್ಯ ಎಸಗುತ್ತಾರೆ. ಈ ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪಿಗಳ ಮೇಲೆ ನಿರ್ದಾಕ್ಷಿಣ್ಯವಾಗಿ ಕ್ರಮ ಜರುಗಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಆರೋಪಿಗಳು ಯಾರೇ ಇರಲಿ ಕೂಡಲೇ ಬಂಧಿಸಬೇಕು. ತ್ವರಿತವಾಗಿ ಪ್ರಕರಣದ ವಿಚಾರಣೆ ನಡೆಸಿ ಮುಂದೆ ಇಂತಹ ಕೃತ್ಯದಲ್ಲಿ ಭಾಗಿಯಾಗಿರುವವರಿಗೆ ಎಚ್ಚರಿಕೆ ಪಾಠವಾಗುವ ಶಿಕ್ಷೆಯನ್ನು ನೀಡಬೇಕು. ಇಲ್ಲದಿದ್ದರೆ ನಾಳೆ ಇಂತಹ ಹಲವಾರು ಕೃತ್ಯಗಳು ನಡೆಯಬಹುದು ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.
ಮಹಿಳಾ ನೌಕರರು ಕಛೇರಿಗಳಲ್ಲಿ ನಿರ್ಭಯವಾಗಿ ಕಾರ್ಯ ನಿರ್ವಹಿಸಲು ಆತ್ಮಸ್ಥೈರ್ಯ ತುಂಬುವ ಸಲುವಾಗಿ ಕಾನೂನಿನ ಅಡಿಯಲ್ಲಿ ಕಠಿಣ ಕಾನೂನುಗಳ ರಚನೆ, ನೆರವು ಅಗತ್ಯವಿದ್ದು, ಈ ಸಂಬಂಧ ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಕಾರ್ಯೋನ್ಮುಖ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಅವರು ಕಳಕಳಿ ವ್ಯಕ್ತಪಡಿಸಿದ್ದಾರೆ.







