ಶಾಸನಸಭೆಗಳನ್ನು ಕ್ರಿಯಾಶೀಲ ಸಂವಾದದ ಕೇಂದ್ರಗಳನ್ನಾಗಿ ಮಾಡಬೇಕು : ಲೋಕಸಭಾ ಸ್ಪೀಕರ್ ಓಂ ಬಿರ್ಲಾ

ಬೆಂಗಳೂರು, ಸೆ.11: ಶಾಸನ ಸಭೆಗಳನ್ನು ಹೆಚ್ಚು ಕ್ರಿಯಾಶೀಲ ಸಂವಾದದ ಕೇಂದ್ರಗಳನ್ನಾಗಿ ಮಾಡುವಲ್ಲಿ ನಮ್ಮ ಜವಾಬ್ದಾರಿ ಹೆಚ್ಚಿದೆ ಎಂಬುದನ್ನು ಪೀಠಾಸೀನ ಅಧಿಕಾರಿಗಳು ಅರ್ಥ ಮಾಡಿಕೊಳ್ಳಬೇಕು. ಜನಪ್ರತಿನಿಧಿಗಳು ತಮ್ಮ ಅಭಿವ್ಯಕ್ತಿಗಾಗಿ ಶಾಸನ ಸಭೆಗಳಿಗೆ ಬರುತ್ತಾರೆ. ಧ್ವನಿ ಇಲ್ಲದವರ ಧ್ವನಿಯಾಗಿ ಶಾಸನ ಸಭೆಗಳು ಕಾರ್ಯನಿರ್ವಹಿಸಬೇಕು ಎಂದು ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಹೇಳಿದರು.
ಗುರುವಾರ ವಿಧಾನಸೌಧದ ಭವ್ಯ ಮೆಟ್ಟಿಲುಗಳ ಮೇಲೆ ಆಯೋಜಿಸಿದ್ದ ಕಾಮನ್‍ವೆಲ್ತ್ ಸಂಸದೀಯ ಸಂಘ(ಸಿಪಿಎ) ಭಾರತ ವಿಭಾಗದ 11ನೆ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದ ಅವರು, ಜನಪ್ರತಿನಿಧಿಗಳು ತಮ್ಮ ಪ್ರಯತ್ನಗಳಿಂದ ತಮ್ಮ ದೃಷ್ಟಿಕೋನವನ್ನು ಸಭೆಯ ಮುಂದಿಡಲಿ. ನಾವು ಎಷ್ಟು ಶ್ರೇಷ್ಠ ಚರ್ಚೆ ಮಾಡುತ್ತೇವೆಯೋ ಅಷ್ಟೇ ಶ್ರೇಷ್ಠ ಜನಪ್ರತಿನಿಧಿಯಾಗಲು ಸಾಧ್ಯ ಎಂದು ತಿಳಿಸಿದರು.
ವಿಧಾನಮಂಡಲದ ಕಾರ್ಯವಿಧಾನಗಳನ್ನು ಶ್ರೇಷ್ಠವನ್ನಾಗಿ ಮಾಡಬೇಕು. ಅವುಗಳನ್ನು ಜನರ ಆಸೆ, ಆಶೋತ್ತರಗಳನ್ನು ಈಡೇರಿಸುವ ವೇದಿಕೆಯನ್ನಾಗಿ ಮಾಡಬೇಕು. 75 ವರ್ಷಗಳಲ್ಲಿ ನಾವು ಶಾಸನ ಸಭೆಗಳಲ್ಲಿ ನಡೆಸಿದಂತಹ ಚರ್ಚೆಗಳ ಮೂಲಕವೆ ದೇಶವನ್ನು ಮುನ್ನಡೆಸಿದ್ದೇವೆ. ಈ ಸಮ್ಮೇಳನದ ಮೂಲಕ ದೇಶದಲ್ಲಿ ಪ್ರಜಾಪ್ರಭುತ್ವ ಸಂಸ್ಥೆಗಳು, ಕಾರ್ಯ ಪದ್ಧತಿಯಲ್ಲಿ ಜವಾಬ್ದಾರಿ, ಪಾರದರ್ಶಕತೆ ತರುವ ಮೂಲಕ ಜನರಲ್ಲಿ ವಿಶ್ವಾಸ ಮೂಡಿಸುವ ಪ್ರಯತ್ನ ಮಾಡಬೇಕು ಎಂದು ಅವರು ಹೇಳಿದರು.
ಪೀಠಾಸೀನ ಅಧಿಕಾರಿಗಳು ತಮ್ಮ ತಮ್ಮ ರಾಜ್ಯಗಳಲ್ಲಿ ಲೋಕತಂತ್ರ ವ್ಯವಸ್ಥೆಯನ್ನು ಸಬಲಗೊಳಿಸಬೇಕು. ಸಂವಿಧಾನ ಸಭೆಯಲ್ಲೂ ಸಹಮತಿ, ಅಸಹಮತಿ, ವಿಭಿನ್ನ ವಿಚಾರಗಳು, ಇದ್ದರೂ ನಾವು ವ್ಯಾಪಕ ಚರ್ಚೆ, ಸಂವಾದ ನಡೆಸಿ ಸಂವಿಧಾನ ರಚನೆ ಮಾಡಿದೆವು. ಇಂದು ನಮ್ಮ ದೇಶ ವಿಶ್ವದ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾಗಿದೆ ಹಾಗೂ ಜೀವಂತ ಸಂವಿಧಾನವನ್ನು ಹೊಂದಿದೆ ಎಂದು ಓಂ ಬಿರ್ಲಾ ತಿಳಿಸಿದರು.
ನಮ್ಮ ಭಾಷೆ, ಭೌಗೋಳಿಕತೆ, ಸಂಸ್ಕೃತಿ, ವಿಚಾರಗಳಲ್ಲಿ ಭಿನ್ನತೆಯಿದ್ದರೂ ಭಾರತವು ಒಂದು ಸಶಕ್ತ ರಾಷ್ಟ್ರವಾಗಿರುವುದಕ್ಕೆ ನಮ್ಮ ಸಂವಿಧಾನ ನಿರ್ಮಾತೃಗಳು ಕಾರಣ. ಅದೇ ರೀತಿ, ನಮ್ಮ ಶಾಸನ ಸಭೆಗಳಲ್ಲಿ ಎಲ್ಲ ವೈರುದ್ಧ್ಯಗಳಿದ್ದರೂ ದೇಶದ ವಿಷಯ ಬಂದಾಗ ಎಲ್ಲರೂ ಒಂದಾಗಿ ಸರ್ವಸಮ್ಮತ ನಿರ್ಣಯಗಳನ್ನು ತೆಗೆದುಕೊಳ್ಳುತ್ತೇವೆ ಎಂದು ಅವರು ಹೇಳಿದರು.
ನಮ್ಮ ಸಂಸ್ಥೆಗಳ ಮೇಲೆ ಜನರ ವಿಶ್ವಾಸ ಹೆಚ್ಚಾಗಬೇಕು. ಶಾಸಕಾಂಗ, ಕಾರ್ಯಾಂಗದಲ್ಲಿ ಪಾರದರ್ಶಕತೆ ಬರಬೇಕು. ಸಮಾಜದ ಕಟ್ಟಕಡೆಯ ವ್ಯಕ್ತಿಯ ಧ್ವನಿಯೂ ಈ ಸದನಗಳಲ್ಲಿ ತಲುಪಬೇಕು. ಶಾಸನ ಸಭೆಗಳು ಚರ್ಚೆ, ಸಂವಾದಗಳಿಗೆ ಮೀಸಲಾಗಿರಲಿ. ಅಲ್ಲಿ ದೇಶದ, ರಾಜ್ಯದ ಪ್ರಮುಖ ವಿಷಯಗಳ ಕುರಿತು ಚರ್ಚೆಗಳು ಆಗಬೇಕು, ಭವಿಷ್ಯದ ಸವಾಲುಗಳನ್ನು ಎದುರಿಸುವ ಬಗ್ಗೆ ಚರ್ಚೆಯಾಗಬೇಕು ಎಂದು ಲೋಕಸಭಾ ಸ್ಪೀಕರ್ ಕರೆ ನೀಡಿದರು.
ವಿಧೇಯಕಗಳ ಮೇಲಿನ ಚರ್ಚೆಯ ಮಹತ್ವ ಕುಸಿಯುತ್ತಿದೆ. ಎಲ್ಲ ಜನಪ್ರತಿನಿಧಿಗಳು ಇದರ ಬಗ್ಗೆ ಆಲೋಚನೆ ಮಾಡಬೇಕಿದೆ. ಆದರೆ, ಇಂದು ಸದನಗಳಲ್ಲಿ ನೀತಿ, ನಿಯಮಗಳಂತೆ ಚರ್ಚೆ ನಡೆಯಲು ಸಾಧ್ಯವಾಗದೆ ಇರುವುದು ಚಿಂತೆಯ ವಿಷಯವಾಗಿದೆ. ಹಲವಾರು ಸವಾಲುಗಳ ನಡುವೆಯೂ ನಾವು ವಿಶ್ವದಲ್ಲೆ ಪ್ರಜಾತಂತ್ರದ ಮೇಲೆ ಜನರು ವಿಶ್ವಾಸ ಇರಿಸುವಂತಹ ಕೆಲಸ ಮಾಡಿದ್ದೇವೆ ಎಂದು ಅವರು ಹೇಳಿದರು.
ತಂತ್ರಜ್ಞಾನ, ಕೃತಕ ಬುದ್ಧಿಮತ್ತೆಯ ಯುಗದಲ್ಲಿ ನಾವಿದ್ದೇವೆ. ಇವಗಳನ್ನು ಬಳಸಿಕೊಂಡು ಜನರಿಗೆ ಅಗತ್ಯವಾಗಿರುವುದನ್ನು ನೀಡಬೇಕಿದೆ. ವಿಧಾನಮಂಡಲಗಳನ್ನು ತಂತ್ರಜ್ಞಾನದೊಂದಿಗೆ ಜೋಡಿಸಬೇಕಿದೆ. ಡಿಜಿಟಲ್ ಸಂಸತ್ ಮೂಲಕ ಎಲ್ಲ ಸಂಸತ್ತು, ಕೇಂದ್ರಾಡಳಿತ ಪ್ರದೇಶಗಳ ಶಾಸನ ಸಭೆಗಳನ್ನು ನಾವು ನೋಡಲು ಸಾಧ್ಯವಾಗಿಸಿದ್ದೇವೆ. ಈ ಮೂರು ದಿನಗಳ ಕಾಲ ನಡೆಯುವ ಸಮ್ಮೇಳನ ಯಶಸ್ವಿಯಾಗಿ ಲೋಕತಂತ್ರ ವ್ಯವಸ್ಥೆಯನ್ನು ಬಲಪಡಿಸುವಂತಾಗಲಿ ಎಂದು ಓಂ ಬಿರ್ಲಾ ಹಾರೈಸಿದರು.
ಮೂವರು ಸ್ಪೀಕರ್ ಗಳಿಗೆ ಗೌರವ: ತಮ್ಮ ರಾಜ್ಯಗಳ ಪರಂಪರೆಯನ್ನು ಬಿಂಬಿಸುವ ವಸ್ತ್ರಗಳನ್ನು ಧರಿಸಿ ಸಮ್ಮೇಳನದ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿದ್ದ ಉತ್ತರಾಖಂಡ್ ರಾಜ್ಯದ ಸ್ಪೀಕರ್ ರೀತು ಖಂಡೂರಿ, ಉತ್ತರಪ್ರದೇಶದ ಸ್ಪೀಕರ್ ಸತೀಶ್ ಮಹಾನ ಹಾಗೂ ಸಿಕ್ಕಿಂ ರಾಜ್ಯದ ಸ್ಪೀಕರ್ ಮಿಂಗಾ ನೋರ್ಬು ಶೆರ್ಪಾ ಅವರನ್ನು ಗೌರವಿಸಲಾಯಿತು. ಇದೇ ವೇಳೆ ಉತ್ತರಪ್ರದೇಶದ ಸ್ಪೀಕರ್ ಅವರ ಕೋರಿಕೆಯ ಮೇರೆಗೆ ರಾಜ್ಯ ವಿಧಾನಸಭೆಯ ಸ್ಪೀಕರ್ ಯು.ಟಿ.ಖಾದರ್ ಅವರಿಗೆ ಓಂ ಬಿರ್ಲಾ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಸನ್ಮಾನಿಸಿದರು.
ರಾಜ್ಯ ವಿಧಾನಸಭೆಯ ಮಾಜಿ ಸ್ಪೀಕರ್‍ಗಳು ಹಾಗೂ ವಿಧಾನ ಪರಿಷತ್ತಿನ ಮಾಜಿ ಸಭಾಪತಿಗಳು, ನಿವೃತ್ತ ಕಾರ್ಯದರ್ಶಿಗಳನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ರಾಜ್ಯಸಭೆಯ ಉಪಸಭಾಪತಿ ಹರಿವಂಶ್ ನಾರಾಯಣ್ ಸಿಂಗ್, ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ.ಪಾಟೀಲ್, ಉಪಸಭಾಧ್ಯಕ್ಷ ರುದ್ರಪ್ಪ ಲಮಾಣಿ, ಸಿಪಿಎ ಮಹಾ ಪ್ರಧಾನ ಕಾರ್ಯದರ್ಶಿ ಸ್ಟೀಫನ್ ಟ್ವೀಡ್ ಉಪಸ್ಥಿತರಿದ್ದರು. ವಿಧಾನಸಭೆಯ ಕಾರ್ಯದರ್ಶಿ ಎಂ.ಕೆ.ವಿಶಾಲಾಕ್ಷಿ ವಂದನಾರ್ಪಣೆ ಮಾಡಿದರು.







