ಮಂಗಳೂರು: ಅಶ್ರಫ್, ರಹ್ಮಾನ್ ಹಂತಕರ ಮೇಲೆ ಯುಎಪಿಎ ದಾಖಲಿಸಲು ಆನ್‌ಲೈನ್ ಅಭಿಯಾನ
ಕರ್ನಾಟಕದಲ್ಲಿ ಟ್ರೆಂಡ್ ಆದ #UAPAforAshrafRaheemMurderers, #justiceformangaloremuslims

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇತ್ತೀಚೆಗೆ ಹತ್ಯೆಗೊಳಗಾದ ಅಶ್ರಫ್ ಹಾಗೂ ರಹ್ಮಾನ್ ಹಂತಕರ ವಿರುದ್ಧ ಯುಎಪಿಎ ಪ್ರಕರಣ ದಾಖಲಿಸಬೇಕೆಂದು ಒತ್ತಾಯಿಸಿ #UAPAforAshrafRaheemMurderers ಆನ್‌ಲೈನ್ ನಲ್ಲಿ ಟ್ರೆಂಡ್ ಆಗಿದೆ.
ಅದೇ ವೇಳೆ, ಮಂಗಳೂರು ಮುಸ್ಲಿಮರಿಗೆ ನ್ಯಾಯ ಬೇಕು (#justiceformangaloremuslims) ಎಂಬ ಬೇಡಿಕೆಯ ಅಭಿಯಾನವೂ ಎಕ್ಸ್ ಸಾಮಾಜಿಕ ಖಾತೆಯಲ್ಲಿ ಟ್ರೆಂಡ್ ಆಗಿತ್ತು.
"ರೌಡಿ ಶೀಟರ್ ಸುಹಾಸ್ ಶೆಟ್ಟಿಯ ಕೊಲೆ ಕೇಸನ್ನು NIA ಗೆ ಕೊಡಲು ಸಾಧ್ಯ ಆಗುವುದಾದರೆ, ಸಂಘಪರಿವಾರದ ಗುಂಪಿನಿಂದ ಹತ್ಯೆಯಾದ ಅಶ್ರಫ್ ಹಾಗು ಸಂಘಪರಿವಾರದ ಕಾರ್ಯಕರ್ತ ದೀಪು ಮತ್ತು ತಂಡದಿಂದ ಕೊಲೆಯಾದ ಅಬ್ದುಲ್ ರಹ್ಮಾನರ ಕೇಸನ್ನು NIA ತನಿಖೆಗೆ ಒಪ್ಪಿಸಲು ಯಾಕೆ ಸಾಧ್ಯವಿಲ್ಲ?" ಎಂದು ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ.
"ಅದೇ ವೇಳೆ, ಹಿಂದೂ ಬಲಿಪಶುಗಳ ಪ್ರಕರಣಗಳನ್ನು ತ್ವರಿತವಾಗಿ ರಾಷ್ಟ್ರೀಯ ತನಿಖಾ ಸಂಸ್ಥೆ ತನಿಖೆ ನಡೆಸುತ್ತಿರುವಾಗ ಮುಸ್ಲಿಂ ಹತ್ಯೆಗಳನ್ನು ಏಕೆ ನಿರ್ಲಕ್ಷಿಸಲಾಗುತ್ತಿದೆ? ನನ್ನ ನಂಬಿಕೆ, ನನ್ನ ಹಕ್ಕು - ನ್ಯಾಯದಲ್ಲಿ ಸಮಾನತೆ" ಎಂದು ಆಶಿಫ್ ಜಿಎಂ ಎಂಬ ಎಕ್ಸ್ ಖಾತೆ ಬಳಕೆದಾರರು ಪೋಸ್ಟ್ ಮಾಡಿದ್ದಾರೆ.
ನಗರದ ಹೊರವಲಯದ ಕುಡುಪುವಿನಲ್ಲಿ 2025ರ ಎಪ್ರಿಲ್ 27 ರಂದು ಕೇರಳದ ಅಶ್ರಫ್ ಎಂಬವರನ್ನು ಗುಂಪೊಂದು ಥಳಿಸಿ ಹತ್ಯೆಗೈದಿತ್ತು. ಘಟನೆ ಸಂಬಂಧ ಹಲವರನ್ನು ಪೊಲೀಸರು ಬಂಧಿಸಿದ್ದಾರೆ.
ಬಂಟ್ವಾಳ ತಾಲೂಕಿನ ಕುರಿಯಾಳ ಗ್ರಾಮದ ಈರಾಕೋಡಿಯಲ್ಲಿ ದುಷ್ಕರ್ಮಿಗಳ ತಂಡವೊಂದು ಕೊಳತ್ತಮಜಲು ನಿವಾಸಿ ಅಬ್ದುಲ್ ರಹ್ಮಾನ್ ಎಂಬವರನ್ನು ಭೀಕರವಾಗಿ ಹತ್ಯೆಗೈದಿತ್ತು. ಅಲ್ಲದೇ ರಹ್ಮಾನ್ ಅವರ ಜೊತೆಗಿದ್ದ ಖಲಂದರ್ ಶಾಫಿ ಎಂಬವರ ಮೇಲೂ ದಾಳಿ ನಡೆಸಿತ್ತು.