ಏಕಪಾತ್ರಾಭಿನಯ ಬಿಜೆಪಿಗರಿಗೆ ಮಾತ್ರ ಸಾಧ್ಯ: ಪ್ರಿಯಾಂಕ್ ಖರ್ಗೆ
ಏಕಪಾತ್ರಾಭಿನಯ ಬಿಜೆಪಿಗರಿಗೆ ಮಾತ್ರ ಸಾಧ್ಯ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ವ್ಯಂಗ್ಯವಾಡಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಚೀನಾ ಅತಿಕ್ರಮಣ ಮಾಡಿದಾಗ ಬಿಜೆಪಿಗರು ರಕ್ಷಣಾ ತಜ್ಞರಾಗುತ್ತಾರೆ, ಬೆಲೆ ಏರಿಕೆಗೆ ಆರ್ಥಿಕ ತಜ್ಞರಾಗುತ್ತಾರೆ, ಮೋದಿ ವಿದೇಶ ಪ್ರವಾಸಕ್ಕೆ ಹೋದರೆ ವಿದೇಶಾಂಗ ತಜ್ಞರಾಗುತ್ತಾರೆ! ಈ ಏಕಪಾತ್ರಾಭಿನಯ ಬಿಜೆಪಿಗರಿಗೆ ಮಾತ್ರ ಸಾಧ್ಯ ಎಂದು ಹೇಳಿದ್ದಾರೆ.
ನಾನು ನನ್ನ ಪಕ್ಷದ ವಕ್ತಾರನಾಗಿದ್ದೇನೆ, ಜನರ ಆಶೀರ್ವಾದದಿಂದ ಸಚಿವ ಸ್ಥಾನದ ಜವಾಬ್ದಾರಿ ಹೊತ್ತಿದ್ದೇನೆ, ಸರ್ಕಾರದ ಪರವಾಗಿ, ನಾಡಿನ ಜನರ ಪರವಾಗಿ ಕೆಲಸ ಮಾಡುವುದು ನನ್ನ ಕರ್ತವ್ಯವಾಗಿದೆ. ಬಿಜೆಪಿಗರಿಗೆ ಕರ್ತವ್ಯದ ಬಗ್ಗೆ ಅಜ್ಞಾನವಿದ್ದರೆ ನಾನು ಹೊಣೆಗಾರನಲ್ಲ ಎಂದಿದ್ದಾರೆ.
ಬಿಜೆಪಿಗೆ ಕರ್ತವ್ಯದ ಅರಿವು ಇಲ್ಲದಿದ್ದರಿಂದಲೇ ಹೀನಾಯ ಸೋಲಿಗೆ ಗುರಿಯಾಗಿದ್ದು. ಬಿಜೆಪಿ ಆಡಳಿತದ ಇಬ್ಬರು ಮುಖ್ಯಮಂತ್ರಿಗಳ ಅವಧಿಯಲ್ಲಿ ಯಾರು ಶಾಡೋ ಸಿಎಂ ಆಗಿದ್ದರು, ಯಾರು ಸೂಪರ್ ಸಿಎಂ ಆಗಿದ್ದರು ಎನ್ನುವುದು ಜಗತ್ತಿಗೆ ತಿಳಿದ ವಿಚಾರ, ಬಿಜೆಪಿಗೆ ತಿಳಿದಿಲ್ಲವೆಂದರೆ ಯತ್ನಾಳರ ಹಾಗೂ ರೇಣುಕಾಚಾರ್ಯರ ಮಾತುಗಳನ್ನು ರಿವೈಂಡ್ ಮಾಡಿ ಕೇಳಿಸಿಕೊಳ್ಳಲಿ ಎಂದು ಹೇಳಿದ್ದಾರೆ.
ಸೋತು ವಿರೋಧ ಪಕ್ಷದಲ್ಲಿ ಕೂತಿದ್ದರೂ ವಿರೋಧ ಪಕ್ಷದ ನಾಯಕನ ಆಯ್ಕೆ ಮಾಡುವ ಕನಿಷ್ಠ ಹೊಣೆಗಾರಿಕೆ ಪ್ರದರ್ಶಿಸಲು ಬಿಜೆಪಿಗೆ ಸಾಧ್ಯವಾಗಿಲ್ಲ. ಅಧಿವೇಶನ ಶುರುವಾಗಿ, ರಾಜ್ಯಪಾಲರ ಬಾಷಣವಾಗಿ, ಬಜೆಟ್ ಮಂಡನೆಯಾಗಿ, ಬಜೆಟ್ ಮೇಲಿನ ಚರ್ಚೆಯೂ ಆಯ್ತು, ಆದರೆ ಒಬ್ಬ ವಿರೋಧ ಪಕ್ಷದ ನಾಯಕ ಸಿಗದಿರುವುದು ಬಿಜೆಪಿಯ ರಾಜಕೀಯ ಹಾಗೂ ನೈತಿಕ ದಿವಾಳಿತನಕ್ಕೆ ಸಾಕ್ಷಿ ಎಂದು ಟೀಕಿಸಿದ್ದಾರೆ.
ಹೈಕಮಾಂಡ್ ನಾಯಕರಿಂದ ತಿರಸ್ಕಾರಕ್ಕೊಳಪಟ್ಟ ಕರ್ನಾಟಕ ಬಿಜೆಪಿಯವರು ವಿಪಕ್ಷ ನಾಯಕನ ಆಯ್ಕೆಯ ವಿಚಾರದಲ್ಲಿ ಬೊಗಸೆಯಷ್ಟಾದರೂ ಗೌರವವನ್ನು ಪಡೆದು ಬಂದ ನಂತರ ನನ್ನ ಬಗ್ಗೆ ಮಾತಾಡಲಿ ಎಂದು ಹೇಳಿದ್ದಾರೆ.