ಸಚಿವ ತಿಮ್ಮಾಪುರ್ ರಾಜೀನಾಮೆಗೆ ಆಗ್ರಹಿಸಿ ಪ್ರತಿಪಕ್ಷಗಳ ಧರಣಿ; ವಿಧಾನಸಭೆಯ ಅರ್ಧದಿನದ ಕಲಾಪ ಬಲಿ

ಬೆಂಗಳೂರು: ಅಬಕಾರಿ ಇಲಾಖೆಯಲ್ಲಿ ಕೋಟ್ಯಂತರ ರೂ. ಭ್ರಷ್ಟಾಚಾರ ನಡೆದಿದ್ದು, ಸಚಿವ ಆರ್.ಬಿ. ತಿಮ್ಮಾಪುರ್ ಕೂಡಲೆ ರಾಜೀನಾಮೆ ನೀಡುವಂತೆ ಆಗ್ರಹಿಸಿ ಪ್ರತಿಪಕ್ಷ ಬಿಜೆಪಿ ಹಾಗೂ ಜೆಡಿಎಸ್ ಧರಣಿ ನಡೆಸಿದ ಪರಿಣಾಮ ಶುಕ್ರವಾರ ವಿಧಾನಸಭೆಯ ಅರ್ಧದಿನದ ಕಲಾಪ ಬಲಿಯಾಯಿತು.
ಅಬಕಾರಿ ಇಲಾಖೆಯಲ್ಲಿ ನಡೆದಿದೆ ಎನ್ನಲಾದ ಭ್ರಷ್ಟಾಚಾರದ ಕುರಿತು ಚರ್ಚಿಸಲು ನಿಲುವಳಿ ಸೂಚನೆಯಡಿ ಚರ್ಚೆಗೆ ಅವಕಾಶ ನೀಡುವಂತೆ ವಿಪಕ್ಷ ನಾಯಕ ಆರ್.ಅಶೋಕ್ ಆಗ್ರಹಿಸಿದರು. ಆದರೆ, ರಾಜ್ಯಪಾಲರ ಭಾಷಣದ ಮೇಲಿನ ವಂದನಾ ನಿರ್ಣಯದ ಕುರಿತು ಕಾಂಗ್ರೆಸ್ ಸದಸ್ಯ ಎ.ಎಸ್.ಪೊನ್ನಣ್ಣ ಮಾತನಾಡಿದ ಬಳಿಕ ಅವಕಾಶ ಕಲ್ಪಿಸುವುದಾಗಿ ಸ್ಪೀಕರ್ ಯು.ಟಿ.ಖಾದರ್ ಹೇಳಿದರು.
ಆದರೆ, ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಅಶೋಕ್, ಅಬಕಾರಿ ಸಚಿವರ ವಿಚಾರದಲ್ಲಿ ಮಾತನಾಡಲು ಅವಕಾಶ ನೀಡಿ ಎಂದರು. ಇದಕ್ಕೆ ದನಿಗೂಡಿಸಿದ ಸುನೀಲ್ ಕುಮಾರ್, ನಿಲುವಳಿ ಸೂಚನೆ ಮೇರೆಗೆ ಚರ್ಚೆಗೆ ವಿರೋಧ ಪಕ್ಷದ ನಾಯಕರು ಪತ್ರ ಕೊಟ್ಟಿದ್ದಾರೆ. ನಮಗೆ ಗೊತ್ತಿಲ್ಲದೆ ಅದನ್ನು ನಿಯಮ 69ಕ್ಕೆ ಪರಿವರ್ತನೆ ಮಾಡಲಾಗಿದೆ. ಅಬಕಾರಿ ಇಲಾಖೆಯಲ್ಲಿ ದೊಡ್ಡ ಪ್ರಮಾಣದಲ್ಲಿ ಭ್ರಷ್ಟಾಚಾರ ನಡೆದಿದೆ. ಪ್ರಸ್ತಾವನೆ ಮಾಡಲು ಅವಕಾಶ ನೀಡಿ ಎಂದು ಹೇಳಿದರು.
ವಿಪಕ್ಷ ನಾಯಕರು ಬೆಳಗ್ಗೆ ಈ ವಿಚಾರ ಪ್ರಸ್ತಾವನೆ ಮಾಡಿದ್ದಾರೆ. ಮಾಧ್ಯಮಗಳಲ್ಲಿ ವರದಿಯೂ ಆಗಿದೆ. ವಂದನಾ ನಿರ್ಣಯದ ಮೇಲಿನ ಚರ್ಚೆಯಲ್ಲಿ ಈ ವಿಷಯವನ್ನು ಮಾತನಾಡಿ, ಇಲ್ಲವೇ ಅದನ್ನು ನಿಯಮ 69ರಡಿ ಪರಿವರ್ತಿಸಿ ನೀಡುವುದಾಗಿ ಹೇಳಿದ್ದೇನೆ ಎಂದು ಸ್ಪೀಕರ್ ಉತ್ತರಿಸಿದರು.
ಕೇರಳ ಹಾಗೂ ತಮಿಳುನಾಡು ರಾಜ್ಯದ ಚುನಾವಣೆಗಳಿಗೆ ಇಲ್ಲಿ ಭ್ರಷ್ಟಾಚಾರ ಮಾಡಿ ಅನುಕೂಲ ಮಾಡಲು ಪ್ರಯತ್ನಿಸುತ್ತಿದ್ದಾರೆ ಎಂದು ಸುನೀಲ್ ಕುಮಾರ್ ದೂರಿದರು. ಇದಕ್ಕೆ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಆಕ್ಷೇಪ ವ್ಯಕ್ತಪಡಿಸಿದರು. ಆಗ ಕಾಂಗ್ರೆಸ್ ಹಾಗೂ ಪ್ರತಿಪಕ್ಷಗಳ ನಡುವೆ ವಾಗ್ವಾದ ಏರ್ಪಟ್ಟಿತು.
ಕೇರಳ ಹಾಗೂ ತಮಿಳುನಾಡು ಚುನಾವಣೆಗಳಿಗೆ ಇಲ್ಲಿಂದ ಹಣ ಹೋಗುತ್ತಿರುವುದು ನಿಜ. ಸರಕಾರಕ್ಕೆ ಧೈರ್ಯವಿದ್ದರೆ ಈ ಬಗ್ಗೆ ಉತ್ತರ ಕೊಡಲಿ ಎಂದು ಅಶೋಕ್ ಹೇಳಿದರು. ಇದಕ್ಕೆ ಸಚಿವ ದಿನೇಶ್ ಗುಂಡೂರಾವ್ ವಿರೋಧ ವ್ಯಕ್ತಪಡಿಸಿ, ಆಧಾರ ರಹಿತವಾಗಿ ಸದನದಲ್ಲಿ ಇಂತಹ ಹೇಳಿಕೆ ನೀಡುವುದು ಸರಿಯಲ್ಲ. ಸುನೀಲ್ ಕುಮಾರ್ ಗೆ ಮಾತನಾಡಲು ಅವಕಾಶ ನೀಡಬೇಡಿ ಎಂದರು. ಇದಕ್ಕೆ ಕಾಂಗ್ರೆಸ್ ಹಿರಿಯ ಸದಸ್ಯ ಆರ್.ವಿ.ದೇಶಪಾಂಡೆ ದನಿಗೂಡಿಸಿದರು.
ಅಬಕಾರಿ ಇಲಾಖೆಯಲ್ಲಿ ಯಾವ ರೀತಿ ಲೂಟಿ ಹೊಡೆಯಲಾಗುತ್ತಿದೆ ಎಂದು ಪತ್ರಿಕೆಗಳಲ್ಲಿ ಬಂದಿದೆ. ನನ್ನ ಬಳಿ ಈ ಸಂಬಂಧ ಪೆನ್‍ಡ್ರೈವ್ ಹಾಗೂ ದಾಖಲೆಗಳು ಇವೆ. ನಾನು ಮಾಡುತ್ತಿರುವ ಆರೋಪ ಸುಳ್ಳಾದರೆ ನನ್ನ ವಿರುದ್ಧ ಕ್ರಮ ಕೈಗೊಳ್ಳಿ. ಲೋಕಾಯುಕ್ತದಲ್ಲಿ ಪ್ರಕರಣ ದಾಖಲಾಗಿದೆ. ಹಿಂದಿನ ಸರಕಾರದಲ್ಲಿ ಈಶ್ವರಪ್ಪ ವಿಚಾರ ಬಂದಾಗ ನೀವೆ ವಿಪಕ್ಷದ ಉಪನಾಯಕರಾಗಿ ಬಂದು ಇಲ್ಲಿ ಪ್ರತಿಭಟನೆ ಮಾಡಿದ್ದೀರಾ. ಈಗ ನಮಗೆ ಚರ್ಚೆಗೆ ಅವಕಾಶ ಕೊಡಿ ಎಂದು ಸ್ಪೀಕರ್ ಗೆ ಅಶೋಕ್ ಒತ್ತಾಯಿಸಿದರು.
ಸಿ.ಸಿ.ಪಾಟೀಲ್ ಏನೋ ವಿಡಿಯೋ ನೋಡಿದರು ಎಂದು ರಾಜೀನಾಮೆ ಪಡೆದರು, ಆಮೇಲೆ ತನಿಖೆ, ಈಶ್ವರಪ್ಪ ಪ್ರಕರಣದಲ್ಲಿ ಮೊದಲು ರಾಜೀನಾಮೆ ಆಮೇಲೆ ತನಿಖೆ. ಕಾಂಗ್ರೆಸ್ ಸರಕಾರದಲ್ಲಿ ಇದೊಂದು ವಿಶೇಷ ಪ್ರಕರಣವೇ, ಬಿಜೆಪಿಯವರು ಮೊದಲು ರಾಜೀನಾಮೆ ನೀಡಬೇಕು, ಕಾಂಗ್ರೆಸ್ ನವರು ರಾಜೀನಾಮೆ ನೀಡಬಾರದು ಇದು ಎಂತಹ ನ್ಯಾಯ?. ಅಬಕಾರಿ ಸಚಿವರು ಮೊದಲು ರಾಜೀನಾಮೆ ನೀಡಲಿ, ಆನಂತರ ತನಿಖೆಯಾಗಲಿ ಎಂದು ಅವರು ಆಗ್ರಹಿಸಿದರು.
ಎ.ಎಸ್.ಪೊನ್ನಣ್ಣಗೆ ಸ್ಪೀಕರ್ ಮಾತನಾಡಲು ಅವಕಾಶ ನೀಡುತ್ತಿದ್ದಂತೆ ಬಿಜೆಪಿ ಸದಸ್ಯರು ಸದನದ ಬಾವಿಗಿಳಿದು ಧರಣಿ ಆರಂಭಿಸಿದರು. ಅಬಕಾರಿ ಸಚಿವರಿಗೆ ಧಿಕ್ಕಾರಗಳನ್ನು ಕೂಗಿದರು. ಆನಂತರ ಸ್ಪೀಕರ್ ಸದನವನ್ನು 15 ನಿಮಿಷ ಮುಂದೂಡಿದರು. ಸದನ ಪುನಃ ಸಮಾವೇಶಗೊಳ್ಳುತ್ತಿದ್ದಂತೆ ಮತ್ತೆ ಗದ್ದಲದ ವಾತಾವರಣ ಏರ್ಪಟ್ಟಿತು.
ರಾಜ್ಯಪಾಲರ ಭಾಷಣದ ಮೇಲಿನ ವಂದನಾ ನಿರ್ಣಯದ ಕುರಿತು ಮಾತನಾಡಲು ಅವಕಾಶ ನೀಡದಿದ್ದರೆ ರಾಜ್ಯಪಾಲರಿಗೆ ಅವಮಾನ ಮಾಡಿದಂತೆ ಎಂದು ಸ್ಪೀಕರ್ ಹೇಳಿದರು. ಇದಕ್ಕೆ ತಿರುಗೇಟು ನೀಡಿದ ಅಶೋಕ್, ಈಗಾಗಲೆ ನೀವು ಅವಮಾನ ಮಾಡಿ ಆಗಿದೆ. ಇನ್ನೇನು ಉಳಿದಿದೆ. ಸಂಪುಟದಲ್ಲಿ ಇಂತಹ ಭ್ರಷ್ಟ ಸಚಿವರು ಇರಬಾರದು. ಅಬಕಾರಿ ಸಚಿವರು ರಾಜೀನಾಮೆ ನೀಡುವವರೆಗೆ ನಾವು ಧರಣಿ ಹಿಂಪಡೆಯುವುದಿಲ್ಲ ಎಂದು ಹೇಳಿದರು.
ಗದ್ದಲದ ನಡುವೆ ಪೊನ್ನಣ್ಣ ಮಾತನಾಡಲು ಯತ್ನಿಸಿದರು. ಆದರೆ, ಪರಿಸ್ಥಿತಿ ತಿಳಿಯಾಗದಿದ್ದರಿಂದ ಸ್ಪೀಕರ್ ಸದನವನ್ನು ಮಂಗಳವಾರ ಬೆಳಗ್ಗೆ 10 ಗಂಟೆಗೆ ಸೇರುವಂತೆ ಮುಂದೂಡಿದರು.







