ಡಿಕೆಶಿ ವಿರುದ್ಧ ಸಿಬಿಐ ತನಿಖೆಗೆ ಅನುಮತಿ ವಾಪಸ್ಸು; ವಿಧಾನಸಭಾಧ್ಯಕ್ಷರ ಅನುಮತಿಯಿಲ್ಲದೇ ತನಿಖೆಗೆ ಆದೇಶ ಕಾನೂನು ಬಾಹಿರ: ಸಿದ್ದರಾಮಯ್ಯ

Photo: facebook
ಬೆಂಗಳೂರು, ನವೆಂಬರ್ 24 : ಡಿ ಕೆ ಶಿವಕುಮಾರ್ ವಿರುದ್ಧ ಸಿಬಿಐ ತನಿಖೆಗೆ ಅನುಮತಿ ನೀಡುವುದಕ್ಕೆ ಸಂಬಂಧಿಸಿದಂತೆ ವಿಧಾನಸಭಾಧ್ಯಕ್ಷರಿಂದ ಯಾವುದೇ ಅನುಮತಿ ಪಡೆಯದೇ ಹಾಗೂ ಅಡ್ವೊಕೇಟ್ ಜನರಲ್ ಅವರ ಅಭಿಪ್ರಾಯವನ್ನು ಪರಿಗಣಿಸದೇ ಹಿಂದಿನ ಸರ್ಕಾರದ ಮುಖ್ಯಮಂತ್ರಿಗಳು ತನಿಖೆಗೆ ಆದೇಶ ನೀಡಿರುವುದು ಕಾನೂನು ಬಾಹಿರ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಶುಕ್ರವಾರ ಬೆಂಗಳೂರು ನಗರ ಸೇಫ್ ಸಿಟಿ ಕಮಾಂಡ್ ಸೆಂಟರ್ ಕಟ್ಟಡ ಲೋಕಾರ್ಪಣೆ ಕಾರ್ಯಕ್ರಮದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು,ಡಿಸಿಎಂ ವಿರುದ್ಧ ಆರೋಪದ ತನಿಖೆ ನಡೆಸಲು ಸಿಬಿಐಗೆ ನೀಡಿದ ಅನುಮತಿ ಹಿಂಪಡೆಯಲು ತೀರ್ಮಾನಿಸಿರುವ ಬಗ್ಗೆ ಪ್ರತಿಕ್ರಿಯೆ ನೀಡಿದರು.
ಯಾವುದೇ ಸರ್ಕಾರಿ ಸೇವೆಯಲ್ಲಿದ್ದವರ ವಿರುದ್ಧ ತನಿಖೆಯಾಗಬೇಕಾದರೆ ಸರ್ಕಾರದ ಅನುಮತಿ ಅವಶ್ಯ. 2019 ರಲ್ಲಿ ಡಿ.ಕೆ.ಶಿವಕುಮಾರ್ ಅವರ ವಿರುದ್ಧ ತನಿಖೆ ಅನುಮತಿಸಿದಾಗ ಅವರು ಶಾಸಕರಾಗಿದ್ದರು. ಇವರ ವಿರುದ್ಧ ತನಿಖೆಗೆ ಕಾನೂನು ರೀತ್ಯವಾಗಿ ವಿಧಾನ ಸಭಾಧ್ಯಕ್ಷರಿಂದ ಅನುಮತಿ ಪಡೆದು ನಂತರ ಮುಖ್ಯಮಂತ್ರಿಗಳು ತನಿಖೆ ಕೈಗೊಳ್ಳಲು ಆದೇಶಿಸಬೇಕು. ಆದರೆ ವಿಧಾನಸಭಾಧ್ಯಕ್ಷರಿಂದ ಯಾವುದೇ ಅನುಮತಿ ಪಡೆದಿಲ್ಲ ಹಾಗೂ ಅಡ್ವೊಕೇಟ್ ಜನರಲ್ ಅವರ ಅಭಿಪ್ರಾಯವನ್ನು ಪರಿಗಣಿಸದೇ ಅಂದಿನ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಮೌಖಿಕವಾಗಿ ಮುಖ್ಯ ಕಾರ್ಯದರ್ಶಿಗೆ ಸೂಚನೆ ನೀಡಿದ್ದರು. ಅವರ ಮೌಖಿಕ ಆದೇಶದ ಮೇರೆಗೆ ಮುಖ್ಯ ಕಾರ್ಯದರ್ಶಿಗಳು ಸಿಬಿಐ ತನಿಖೆಗೆ ವಹಿಸಿದ್ದಾರೆ. ಈ ರೀತಿ ಮಾಡುವುದು ಕಾನೂನಿನ ರೀತ್ಯ ಸರಿಯಲ್ಲ ಎಂದರು.
ನ್ಯಾಯಾಲಯದ ತೀರ್ಮಾನದ ಬಗ್ಗೆ ನಾನು ಪ್ರತಿಕ್ರಿಯೆ ನೀಡುವುದಿಲ್ಲ. ಸರ್ಕಾರ ಕಾನೂನುಬಾಹಿರವಾಗಿ ಮಂಜೂರಾತಿ ನೀಡಿರುವುದರಿಂದ ಅದು ಸರಿಯಿಲ್ಲ. ಅದನ್ನು ವಾಪಸ್ಸು ತೆಗೆದುಕೊಳ್ಳುತ್ತೇವೆ ಎಂದು ತೀರ್ಮಾನಿಸಿರುವುದಾಗಿ ತಿಳಿಸಿದರು.
ನ್ಯಾಯಾಲಯವು ಕೂಡ ಆದೇಶವನ್ನು ಎತ್ತಿಹಿಡಿಯುವ ಭಯದಿಂದ ಸರ್ಕಾರ ಇದನ್ನು ಮಾಡಿದೆ ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿ ನ್ಯಾಯಾಲಯದ ತೀರ್ಮಾನಗಳಿಗೆ ನಾವು ಮಧ್ಯಪ್ರವೇಶಿಸುವಂತಿಲ್ಲ. ನ್ಯಾಯಾಲಯ ಏನು ತೀರ್ಮಾನ ಮಾಡುತ್ತದೆಯೋ ಮಾಡಲಿ ಎಂದರು.
ಬೆಂಗಳೂರು ನಗರ ಸೇಫ್ ಸಿಟಿ ಕಮಾಂಡ್ ಸೆಂಟರ್: ತೊಂದರೆಯಲ್ಲಿರುವವರಿಗೆ 7 ನಿಮಿಷದೊಳಗೆ ನೆರವು
ನಿರ್ಭಯ ನಿಧಿ ಅಡಿ ಬೆಂಗಳೂರು ನಗರ ಸೇಫ್ ಸಿಟಿ ಕಮಾಂಡ್ ಸೆಂಟರ್ ಕಟ್ಟಡವನ್ನು ಇಂದು ಉದ್ಘಾಟಿಸಲಾಗಿದೆ. ಈ ಯೋಜನೆಗೆ 661.5 ಕೋಟಿ ರೂ. ಖರ್ಚಾಗಿದೆ. ಕೇಂದ್ರ ಸರ್ಕಾರದ ಶೇ.60 ಹಾಗೂ ರಾಜ್ಯಸರ್ಕಾರದ ಶೇ. 40 ರಷ್ಟು ಅನುದಾನ ನೀಡಲಾಗಿದೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.
ಬೆಂಗಳೂರು ನಗರದ ಜನರಿಗೆ ಸುರಕ್ಷತೆಯನ್ನು ಈ ಕೇಂದ್ರ ಒದಗಿಸಲಿದೆ. ಮಹಿಳೆಯರು, ಅಂಗವಿಕಲರು, ವಯೋವೃದ್ಧರಿಗೆ ಯಾವುದೇ ತೊಂದರೆ ಸಂಭವಿಸಿದರೂ ಈ ಕೇಂದ್ರ ಅವರಿಗೆ ತ್ವರಿತ ಸಹಾಯ ಒದಗಿಸಲಿದೆ. ಈ ಕೇಂದ್ರದ ಸಹಕಾರದಿಂದ ಘಟನಾ ಸ್ಥಳಕ್ಕೆ ಸಂಬಂಧಪಟ್ಟ ಪೊಲೀಸ್ ಠಾಣೆಯ ಪೊಲೀಸರು 7 ನಿಮಿಷದೊಳಗೆ ಆಗಮಿಸಿ, ತೊಂದರೆಯಲ್ಲಿರುವ ಜನರಿಗೆ ನೆರವು ನೀಡಲಿದೆ. ಬೆಂಗಳೂರು ಸೇರಿದಂತೆ ದೇಶದ 8 ಕಡೆಗಳಲ್ಲಿ ಇಂತಹ ಕೇಂದ್ರವನ್ನು ತೆರೆಯಲಾಗಿದೆ. ದೇಶದ 8 ಸ್ಥಳಗಳಲ್ಲಿ ಈ ಕೇಂದ್ರಕ್ಕೆ ಮಂಜೂರಾತಿ ನೀಡಿದ್ದರೂ, ಬೆಂಗಳೂರಿನಲ್ಲಿ ಮಾತ್ರ ಸೇಫ್ ಸಿಟಿ ಕಮಾಂಡ್ ಕೇಂದ್ರ ಕಟ್ಟಡವನ್ನು ಪೂರ್ಣಗೊಳಿಸಿ ಲೋಕಾರ್ಪಣೆಗೊಳಿಸಲಾಗಿದೆ. ಈ ಕಟ್ಟಡಕ್ಕೆ ಸುಮಾರು 12 ಕೋಟಿ ರೂ. ವೆಚ್ಚವಾಗಿದೆ ಎಂದರು.







