ನಮ್ಮ ಮೆಟ್ರೋ | ಸರ್ಜಾಪುರ-ಹೆಬ್ಬಾಳ ಮಾರ್ಗಕ್ಕೆ ಡಿಪಿಆರ್ ಸಿದ್ಧ: 16,543 ಕೋಟಿ ರೂ. ವೆಚ್ಚ

ಬೆಂಗಳೂರು: ನಮ್ಮ ಮೆಟ್ರೋ 3ನೇ ಹಂತದ ಯೋಜನೆಗೆ ವಿಸ್ತೃತ ಯೋಜನಾ ವರದಿ(ಡಿಪಿಆರ್) ಸಿದ್ಧವಾಗಿದ್ದು, ಈ ಯೋಜನೆಗೆ 16,543 ಕೋಟಿ ರೂ.ವೆಚ್ಚವಾಗಲಿದೆ ಎಂದು ಅಂದಾಜಿಸಲಾಗಿದೆ.
ನಮ್ಮ ಮೆಟ್ರೋ 3 ನೇ ಹಂತದ ಯೋಜನೆ ಸರ್ಜಾಪುರದಿಂದ ಹೆಬ್ಬಾಳಕ್ಕೆ ಸಂಪರ್ಕ ಕಲ್ಪಿಸಲಿದೆ. ಅಂದಾಜು 37 ಕಿ.ಮೀ. ಮಾರ್ಗದಲ್ಲಿ 28 ನಿಲ್ದಾಣಗಳು ತಲೆಯೆತ್ತಲಿವೆ. 2020ರಲ್ಲೇ ಯೋಜನೆಗೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಈ ಮಾರ್ಗದಿಂದ ಟೆಕ್ಕಿಗಳಿಗೆ ಭಾರಿ ಅನುಕೂಲವಾಗಲಿದೆ ಎಂದು ನಿರೀಕ್ಷಿಸಲಾಗಿದೆ.
ಅಂದಾಜು 15 ಸಾವಿರ ಕೋಟಿ ರೂ. ಮೊತ್ತದ ಈ ಯೋಜನೆಯನ್ನು 2022-23ನೇ ಸಾಲಿನ ಬಜೆಟ್‍ನಲ್ಲಿ ಘೋಷಣೆ ಮಾಡಲಾಗಿತ್ತು. ಸರ್ಜಾಪುರ-ಹೆಬ್ಬಾಳ ಮೆಟ್ರೋ ಮಾರ್ಗವು ಅಗರ, ಕೋರಮಂಗಲ, ಡೇರಿ ವೃತ್ತದ ಮೂಲಕ ಹಾದುಹೋಗಲಿದೆ. ಸಮಗ್ರ ಯೋಜನಾ ವರದಿ(ಡಿಪಿಆರ್) ಸಿದ್ಧಪಡಿಸುವ ಕೆಲಸವನ್ನು ಮುಂಬೈ ಮೂಲದ ಕಂಪೆನಿಗೆ ವಹಿಸಲಾಗಿತ್ತು. ಹೆಬ್ಬಾಳದಿಂದ ಕೋರಮಂಗಲದವರೆಗೆ ಸುರಂಗ ಮಾರ್ಗ ಹಾಗೂ ಅಲ್ಲಿಂದ ಸರ್ಜಾಪುರದವರೆಗೆ ಎತ್ತರಿಸಿದ ಮಾರ್ಗ ನಿರ್ಮಾಣ ಮಾಡಲು ಉದ್ದೇಶಿಸಲಾಗಿದೆ.
ಸರ್ಜಾಪುರ-ಹೆಬ್ಬಾಳ ಮಾರ್ಗದಿಂದ ಬಸವೇಶ್ವರ ವೃತ್ತ ಮತ್ತು ಹೆಬ್ಬಾಳ ನಡುವಿನ ವಾಹನ ದಟ್ಟಣೆ ಕಡಿಮೆ ಮಾಡಲಿದೆ. ಬಸವೇಶ್ವರ ವೃತ್ತ, ಬೆಂಗಳೂರು ಗಾಲ್ಪ್ ಕೋರ್ಸ್, ಪ್ಯಾಲೇಸ್ ಗುಟ್ಟಹಳ್ಳಿ, ಮೇಖ್ರಿ ವೃತ್ತ, ಪಶು ವೈದ್ಯಕೀಯ ಕಾಲೇಜು, ಗಂಗಾನಗರ ಮತ್ತು ಹೆಬ್ಬಾಳದಲ್ಲಿ ಏಳು ನಿಲ್ದಾಣಗಳು ತಲೆಯೆತ್ತಲಿವೆ ಎಂದು ಬಿಎಂಆರ್ ಸಿಎಲ್ ಮೂಲಗಳು ತಿಳಿಸಿವೆ.





