ಬಸವಣ್ಣನವರ ಕಲ್ಯಾಣ ರಾಜ್ಯದ ಕನಸಿನ ಈಡೇರಿಕೆಯ ದಿಕ್ಕಿನಲ್ಲಿ ನಮ್ಮ ಹೆಜ್ಜೆಗಳು: ಸಿದ್ದರಾಮಯ್ಯ

ಬೆಂಗಳೂರು: ದೇಶದ 79ನೇ ಸ್ವಾತಂತ್ರ್ಯ ದಿನೋತ್ಸವದ ಹಿನ್ನೆಲೆಯಲ್ಲಿ ಮಾಣಿಕ್ ಷಾ ಪರೇಡ್ ಮೈದಾನದಲ್ಲಿ ಸಿಎಂ ಸಿದ್ದರಾಮಯ್ಯ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.
ಕರ್ನಾಟಕವನ್ನು ಸರ್ವ ಜನಾಂಗದ ಶಾಂತಿಯ ತೋಟವನ್ನಾಗಿಯೇ ಉಳಿಸಿಕೊಳ್ಳುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಸಾಮರಸ್ಯದಿಂದ ಕೂಡಿದ ಸಮೃದ್ಧ ಕರ್ನಾಟಕವನ್ನು ನಿರ್ಮಾಣ ಮಾಡುವುದರ ಮೂಲಕ ಸಶಕ್ತ ಭಾರತವನ್ನು ಕಟ್ಟೋಣ. ಸ್ವಾತಂತ್ರ್ಯ, ಸಂವಿಧಾನ ಹಾಗೂ ನೈಜ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಜೀವಕ್ಕಿಂತ ಮಿಗಿಲು ಎಂದು ಭಾವಿಸೋಣ. ಸಾಮಾಜಿಕ, ಆರ್ಥಿಕ, ರಾಜಕೀಯ ಸ್ವಾತಂತ್ರ್ಯ ಹಾಗೂ ನ್ಯಾಯಗಳನ್ನು ನಿರಂತರವಾಗಿ ರಕ್ಷಿಸಿಕೊಳ್ಳುವ ಪ್ರತಿಜ್ಞೆ ಮಾಡಿ ಈ ಸ್ವಾತಂತ್ರ್ಯೋತ್ಸವವನ್ನು ಅರ್ಥಪೂರ್ಣಗೊಳಿಸೋಣ ಎಂದು ಸ್ವಾತಂತ್ರ್ಯ ದಿನಾಚರಣೆಯ ಸಂದೇಶ ನೀಡಿದರು.
ನುಡಿದಂತೆ ನಡೆಯಬೇಕು ಎಂಬುದು 12ನೇ ಶತಮಾನದ ಬಸವಾದಿ ಶರಣರ ನಿಶ್ಚಲ ನಿಲುವು. ನಮ್ಮ ಸರ್ಕಾರ ಈ ಧ್ಯೇಯ ವಾಕ್ಯದಲ್ಲಿ ನಂಬಿಕೆಯಿಟ್ಟು ರಾಜ್ಯವು ತನ್ನದೇ ಆದ ಅಭಿವೃದ್ಧಿ ಮಾದರಿಗಳನ್ನು ನಿರ್ಮಿಸಿದೆ. ಇದಕ್ಕೆ ‘ಕರ್ನಾಟಕ ಅಭಿವೃದ್ಧಿ ಮಾದರಿ’ಎಂಬ ಹೆಸರಿನಲ್ಲಿ ಮನ್ನಣೆ ದೊರೆತಿರುವುದು ಹೆಮ್ಮೆಯ ಸಂಗತಿ. ವಿಶ್ವಸಂಸ್ಥೆಯ ಮುಖ್ಯಸ್ಥರಾದ ಫಿಲೆಮಾನ್ ಯಾಂಗ್ರವರು ಕರ್ನಾಟಕಕ್ಕೆ ಬಂದು ನಮ್ಮ ಗ್ಯಾರಂಟಿ ಯೋಜನೆಗಳ ಬಗ್ಗೆ ಮುಕ್ತ ಕಂಠದಿಂದ ಶ್ಲಾಘಿಸಿದ್ದಾರೆ. ಈ ಮೂಲಕ ನಮ್ಮ ಯೋಜನೆಗಳು ವಿಶ್ವಮಾನ್ಯಗೊಂಡಿವೆ ಎಂದರು.
ಒಕ್ಕೂಟ ಸರ್ಕಾರವು ತೆರಿಗೆ ಮುಂತಾದ ಸಂಪನ್ಮೂಲಗಳನ್ನು ಹಂಚುವಾಗ ನಿಷ್ಪಕ್ಷಪಾತದ ಧೋರಣೆ ಅನುಸರಿಸುತ್ತಿಲ್ಲ. ಐಟಿ, ಇ.ಡಿ, ಸಿಬಿಐ ಮತ್ತು ಕೆಲವು ಸಾಂವಿಧಾನಿಕ ಸಂಸ್ಥೆಗಳು ಪ್ರಜಾಪ್ರಭುತ್ವದ ಹಾಗೂ ಸಂವಿಧಾನದ ನೈಜ ಮೌಲ್ಯಗಳ ಉಳಿವಿಗಾಗಿ ಕಾರ್ಯನಿರ್ವಹಿಸುತ್ತಿಲ್ಲ ಎಂಬ ಆಕ್ರೋಶವು ವಿವಿಧ ವೇದಿಕೆಗಳಿಂದ ವ್ಯಕ್ತವಾಗುತ್ತಿದೆ. ಈ ಕುರಿತು ಜವಾಬ್ದಾರಿಯುಳ್ಳ ನಾಗರಿಕರೆಲ್ಲ ಧ್ವನಿಯೆತ್ತಬೇಕಾಗಿದೆ ಎಂದು ಹೇಳಿದರು.
ನಾವೆಲ್ಲರೂ ಗಮನಿಸಿರುವ ಹಾಗೆ ನಮ್ಮ ಹೊಸ ತಲೆಮಾರು ಮೊಬೈಲ್ ಫೋನು, ಇಂಟರ್ನೆಟ್ಟು ಮುಂತಾದವುಗಳ ಭರಾಟೆಯಲ್ಲಿ ವಿಪರೀತ ತಲ್ಲಣಗಳನ್ನು ಎದುರಿಸುತ್ತಿದೆ. ಖಿನ್ನತೆ, ಆತಂಕ, ವಿನಾಕಾರಣ ಸಿಟ್ಟು, ದ್ವೇಷ ಮುಂತಾದ ಭಾವನೆಗಳಲ್ಲಿ ಸಿಲುಕಿ ಸಂಕಷ್ಟ ಪಡುತ್ತಿದೆ. ಈ ಸಾಮಾಜಿಕ ಸಮಸ್ಯೆಯನ್ನು ಹೋಗಲಾಡಿಸಲು ನಾವೆಲ್ಲರೂ ಸೇರಿ ಹೊಸ ದಾರಿಗಳನ್ನು ಹುಡುಕಿಕೊಳ್ಳಬೇಕಾಗಿದೆ. ಈ ನಿಟ್ಟಿನಲ್ಲಿ ನಾವು ಮೊಬೈಲ್ ಬಿಡಿ - ಪುಸ್ತಕ ಹಿಡಿ ಮತ್ತು ಓದು ಕರ್ನಾಟಕ ಎಂಬ ಕಾರ್ಯಕ್ರಮವನ್ನು ರೂಪಿಸಿದ್ದೇವೆ ಎಂದು ತಿಳಿಸಿದರು.
ನಾವು ಕೇವಲ ಉದ್ಯೋಗಗಳನ್ನು ಸೃಷ್ಟಿಸುತ್ತಿಲ್ಲ. ಜನರ ಜೀವನವನ್ನು ಬದಲಾಯಿಸುವಂತಹ ಆಲೋಚನೆಗಳು, ಆವಿಷ್ಕಾರಗಳು ಮತ್ತು ಹೊಸತನಗಳನ್ನು ಸೃಷ್ಟಿಸುತ್ತಿದ್ದೇವೆ. ನಮ್ಮ ಈ ಆಲೋಚನೆಗಳು ಗಡಿಯಾಚೆಗೂ ತಲುಪಿವೆ. ನಾವು ಕ್ವಾಂಟಮ್ ತಂತ್ರಜ್ಞಾನ, ಕೃತಕ ಬುದ್ಧಿಮತ್ತೆ ನವೀಕರಿಸಬಹುದಾದ ಇಂಧನ ಮತ್ತು ಜೈವಿಕ ತಂತ್ರಜ್ಞಾನದಲ್ಲಿ ಮುಂಚೂಣಿಯಲ್ಲಿದ್ದೇವೆ. ದೇಶದ ಮೊದಲ ಕ್ವಾಂಟಮ್ ಕಂಪ್ಯೂಟರ್ ಕರ್ನಾಟಕದಲ್ಲಿದೆ. ನಮ್ಮ `ಕರ್ನಾಟಕ ಕ್ವಾಂಟಮ್ ಮಿಷನ್' ವಿಜ್ಞಾನದ ಭವಿಷ್ಯವನ್ನು ರೂಪಿಸಲಿದೆ ಎಂದರು.
ಕರ್ನಾಟಕವನ್ನು ನಕ್ಸಲ್ ಮುಕ್ತ ರಾಜ್ಯವೆಂದು ಘೋಷಿಸಿದ್ದೇವೆ. ಹಾಗೆಯೇ ನಾವೆಲ್ಲರೂ ನಮ್ಮ ಹೆಮ್ಮೆಯ ರಾಜ್ಯವನ್ನು ಡ್ರಗ್ಸ್ ಮುಕ್ತ ರಾಜ್ಯವನ್ನಾಗಿ ಘೋಷಿಸಬೇಕಾಗಿದೆ. ಈ ಹೋರಾಟದಲ್ಲಿ ಪ್ರತಿ ಪ್ರಜೆಯೂ ಯೋಧರಂತೆ ಕೆಲಸ ಮಾಡಬೇಕಾಗಿದೆ. ಸರ್ಕಾರವು ಈಗಾಗಲೇ ಈ ವಿಚಾರದಲ್ಲಿ ಸಕಲ ಆಯಾಮಗಳಲ್ಲಿ ಕೆಲಸ ಮಾಡುತ್ತಿದೆ ಎಂದು ಹೇಳಿದರು.
ಚುನಾವಣೆಗೆ ಮೊದಲು ನೀಡಿದ್ದ ಭರವಸೆಯಂತೆ ಪ್ರಾದೇಶಿಕ ಅಸಮಾನತೆಯನ್ನು ಹೋಗಲಾಡಿಸಿ ರಾಜ್ಯದ ಸಮಗ್ರ ಅಭಿವೃದ್ಧಿಯನ್ನು ಸಾಧ್ಯವಾಗಿಸಲು ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ ಪ್ರತಿವರ್ಷ 5,000 ಕೋಟಿ ರೂ.ಗಳನ್ನು ಒದಗಿಸಿ ಶಿಕ್ಷಣ, ಆರೋಗ್ಯ, ಕೈಗಾರಿಕಾಭಿವೃದ್ಧಿ, ಮೂಲಭೂತ ಸೌಕರ್ಯ ಸೇರಿದಂತೆ ಹಲವು ಕ್ರಮಗಳನ್ನು ಕೈಗೊಂಡಿದ್ದೇವೆ. 7 ಜಿಲ್ಲೆಗಳ 38 ವಿಧಾನಸಭಾ ಕ್ಷೇತ್ರಗಳ ಗ್ರಾಮೀಣ ಪ್ರದೇಶದ 1150 ಕಿ.ಮೀ. ರಸ್ತೆಗಳನ್ನು “ಕಲ್ಯಾಣ ಪಥ” ಕಾರ್ಯಕ್ರಮದಡಿ 1.000 ಕೋಟಿ ರೂ.ಗಳ ಅಂದಾಜು ವೆಚ್ಚದಲ್ಲಿ ಅಭಿವೃದ್ಧಿ ಮಾಡುತ್ತಿದ್ದೇವೆ ಎಂದು ತಿಳಿಸಿದರು.
ದೇಶದ ಪ್ರಮುಖ ಸಂಸ್ಥೆಗಳು ಮಾಡಿರುವ ಸಮೀಕ್ಷೆಗಳ ಪ್ರಕಾರ ಶೇ.10ರಷ್ಟಿರುವ ಶ್ರೀಮಂತರ ಬಳಿ ಶೇ.80ರಷ್ಟು ಸಂಪತ್ತು ಶೇಖರಣೆಯಾಗಿದೆ. ಆದರೆ ಶೇ. 10 ಜನ ಕೇವಲ ಶೇ.3ರಷ್ಟು ಮಾತ್ರ ಜಿಎಸ್ಟಿ ಪಾವತಿಸುತ್ತಿದ್ದರೆಂದು ಅಧ್ಯಯನಗಳು ಹೇಳುತ್ತಿವೆ. ಉಳಿದ ಶೇ.90ರಷ್ಟು ಜನ ಹೊಟ್ಟೆ-ಬಟ್ಟೆಗೆ ದುಡಿಯುವವರಾದ್ದರಿಂದ ಶೇ.97 ರಷ್ಟು ಜಿಎಸ್ಟಿ ಪಾವತಿಸುತ್ತಿದ್ದಾರೆ. ಇಂಥ ಪರಿಸ್ಥಿತಿಯಲ್ಲಿ ಯಾವ ಆರ್ಥಿಕತೆ ಮುಂದುವರೆಯಲು ಸಾಧ್ಯ? ಸಂವಿಧಾನದ ಆಶಯಗಳನ್ನು ಈಡೇರಿಸುವುದು ಹೇಗೆ? ಬೃಹದಾಕಾರವಾಗಿ ಬೆಳೆಯುತ್ತಿರುವ ಅಸಮಾನತೆಯನ್ನು ತಗ್ಗಿಸುವುದು ಹೇಗೆ? ಎಂಬ ಪ್ರಶ್ನೆಗಳು ನಮ್ಮನ್ನು ಬಾಧಿಸಲಾರಂಭಿಸಿದವು. ಈ ಬೃಹತ್ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳುವ ಉದ್ದೇಶದಿಂದಲೇ ನಾವು ಗ್ಯಾರಂಟಿ ಯೋಜನೆಗಳು ಹಾಗೂ ಇನ್ನಿತರೆ ಜನ ಕಲ್ಯಾಣದ ಕಾರ್ಯಕ್ರಮಗಳನ್ನು ಜಾರಿಗೆ ತಂದಿದ್ದೇವೆ ಎಂದರು.







