ಬಾಗಲಕೋಟೆಯ ತೋಟಗಾರಿಕೆ ವಿವಿ ಲೆಟರ್ ಹೆಡ್‍ನಲ್ಲಿ ಸತ್ಯನಾರಾಯಣ ಪೂಜೆ, ನವಗ್ರಹ ಹೋಮಕ್ಕೆ ಆಹ್ವಾನಿಸಿದ ಕುಲಪತಿ!

ಬೆಂಗಳೂರು: ಬಾಗಲಕೋಟೆಯ ತೋಟಗಾರಿಕೆ ವಿಶ್ವವಿದ್ಯಾಲಯದ ಕುಲಪತಿಗಳು ವಿವಿಯ ಅಧಿಕೃತ ಲೆಟರ್ ಹೆಡ್ ಬಳಸಿ ಧಾರ್ಮಿಕ ಆಚರಣೆಗೆ ಎಲ್ಲಾ ಸಿಬ್ಬಂದಿ-ವಿದ್ಯಾರ್ಥಿಗಳಿಗೆ ಕಡ್ಡಾಯದಂತಹ ಆಮಂತ್ರಣದ ಹೊರಡಿಸಿರುವುದು ಸಾಹಿತಿ ಹಾಗೂ ಶಿಕ್ಷಣ ತಜ್ಞರ ವಲಯದಲ್ಲಿ ತೀವ್ರ ಆಕ್ಷೇಪಣೆ ಎಡೆಮಾಡಿದ್ದು, ಸೂಕ್ತ ಕ್ರಮಕ್ಕೆ ಕೋರಿ ಮುಖ್ಯಮಂತ್ರಿಗಳಿಗೆ ಬಹಿರಂಗ ಪತ್ರವನ್ನು ಬರೆಯಲಾಗಿದೆ.
ಬಾಗಲಕೋಟೆಯ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಪತಿ ಡಾ.ವಿಷ್ಣುವರ್ಧನ್ ಅವರು ಆಗಸ್ಟ್ 7ರಂದು ಹೊರಡಿಸಿರುವ ಆಮಂತ್ರಣ ಪತ್ರದಲ್ಲಿ ‘ಕುಲಪತಿಗಳ ವಸತಿಗೃಹದಲ್ಲಿ ನಡೆಯಲಿರುವ ಶ್ರೀ ಸತ್ಯನಾರಾಯಣ ಪೂಜೆ, ನವಗ್ರಹ ಶಾಂತಿ ಹೋಮ ಮತ್ತು ಶ್ರೀ ಮಹಾಗಣಪತಿ ಪೂಜಾ ಕಾರ್ಯಕ್ರಮಕ್ಕೆ ವಿಶ್ವವಿದ್ಯಾಲಯದ ಮುಖ್ಯ ಆವರಣದ ಎಲ್ಲ ಅಧಿಕಾರಿಗಳು, ಬೋಧಕ-ಭೋದಕೇತರ-ಕಾರ್ಮಿಕ ವರ್ಗ ಹಾಗೂ ವಿದ್ಯಾರ್ಥಿಗಳನ್ನು ಅಧಿಕೃತವಾಗಿ ಆಹ್ವಾನಿಸಲಾಗಿದೆ’ ಎಂದು ನಮೂದಿಸಲಾಗಿದೆ.
ವೈಯಕ್ತಿಕ ನಂಬಿಕೆ ಮತ್ತು ಸಾರ್ವಜನಿಕ ಸಂಸ್ಥೆಯ ಕಾರ್ಯನಿರ್ವಹಣೆ ಬೇರೆ ಬೇರೆ ವಿಷಯಗಳು. ಸತ್ಯನಾರಾಯಣ ಪೂಜೆ, ನವಗ್ರಹ ಹೋಮ ಇವೆಲ್ಲ ವ್ಯಕ್ತಿಯ ವೈಯಕ್ತಿಕ ನಂಬಿಕೆಯಾಗಿದ್ದರೆ ಅದಕ್ಕೆ ಯಾರ ಆಕ್ಷೇಪವೂ ಇಲ್ಲ. ಆದರೆ, ಅದೇ ನಂಬಿಕೆಯನ್ನು ವಿಶ್ವವಿದ್ಯಾಲಯದ ಅಧಿಕೃತ ಲೆಟರ್ ಹೆಡ್, ಕುಲಪತಿಗಳ ಅಧಿಕೃತ ಸಹಿ, ಕುಲಪತಿ ನಾಮೆ ಬಳಕೆ ಮಾಡಿ ಎಲ್ಲಾ ಸಿಬ್ಬಂದಿ-ವಿದ್ಯಾರ್ಥಿಗಳಿಗೆ ಕಡ್ಡಾಯದಂತಹ ಆಮಂತ್ರಣದ ಮೂಲಕ ಸಾರ್ವಜನಿಕಗೊಳಿಸುವುದು ಖಂಡನೀಯ ಎಂದು ಸಾಹಿತಿಗಳು ಬಹಿರಂಗ ಪತ್ರದಲ್ಲಿ ಆಕ್ಷೇಪಿಸಿದ್ದಾರೆ.
ಭಾರತವು ಜಾತ್ಯಾತೀತ, ವಿಜ್ಞಾನ ಮನೋಭಾವದ ಪ್ರಜಾಸತ್ತಾತ್ಮಕ ರಾಷ್ಟ್ರ. ವಿಶ್ವವಿದ್ಯಾಲಯ ಎಂಬುದು ಜಾತಿ, ಧರ್ಮ, ನಂಬಿಕೆ ಮೀರಿದ ಜ್ಞಾನದ ಕೇಂದ್ರ. ಅಂತಹ ಸಂಸ್ಥೆಯ ಮುಖ್ಯಸ್ಥರು ತಮ್ಮ ಹುದ್ದೆಯ ಅಧಿಕಾರ ಬಳಸಿ ಒಂದು ನಿರ್ದಿಷ್ಟ ಧಾರ್ಮಿಕ ಆಚರಣೆಯನ್ನು ಸಂಸ್ಥೆಯ ಮೇಲೆ ಹೇರುವುದು ಸಂವಿಧಾನದ ಆಶಯ ಮತ್ತು ಸೇವಾ ನಿಯಮಗಳಿಗೆ ವಿರುದ್ಧವಾಗಿದೆ ಎಂದು ಸಾಹಿತಿಗಳು ಬಹಿರಂಗ ಪತ್ರದಲ್ಲಿ ಅಸಮಾಧಾನ ಹೊರಹಾಕಿದ್ದಾರೆ.
ಆಹ್ವಾನ ಪತ್ರಿಕೆಯಲ್ಲಿ ʼಆತ್ಮೀಯವಾಗಿ ಆಹ್ವಾನಿಸುತ್ತಾ’ ಎಂದು ಬರೆಯಲಾಗಿದ್ದರೂ, ಕುಲಪತಿಗಳಿಂದ ಬಂದ ಆಮಂತ್ರಣವನ್ನು ತಿರಸ್ಕರಿಸುವ ಧೈರ್ಯ ಅಧೀನ ನೌಕರರು, ವಿದ್ಯಾರ್ಥಿಗಳಿಗೆ ಇರುವುದಿಲ್ಲ. ಇದು ಪರೋಕ್ಷವಾಗಿ ಹೇರಿಕೆಯ ಒತ್ತಡವಾಗಿದೆ ಎಂದು ಸಾಹಿತಿಗಳು ಬಹಿರಂಗ ಪತ್ರದಲ್ಲಿ ತಿಳಿಸಿದ್ದಾರೆ.
ಸರಕಾರಿ ಸಂಸ್ಥೆಯಗಿರುವ ತೋಟಗಾರಿಕೆಯಂತಹ ವೈಜ್ಞಾನಿಕ ವಿಷಯವನ್ನು ಕಲಿಸುವ ವಿಶ್ವವಿದ್ಯಾಲಯದ ಕುಲಪತಿಗಳೇ ‘ನವಗ್ರಹ ಶಾಂತಿ ಹೋಮ’ದಂತಹ ಆಚರಣೆಯನ್ನು ಅಧಿಕೃತವಾಗಿ ನಡೆಸಿದರೆ, ವಿವಿಯ ವೈಜ್ಞಾನಿಕ ಮೌಲ್ಯ ಮತ್ತು ವಿದ್ಯಾರ್ಥಿಗಳಲ್ಲಿ ಮೂಡಬೇಕಾದ ವೈಜ್ಞಾನಿಕ ಮನೋಭಾವಕ್ಕೆ ಇದು ದೊಡ್ಡ ಹೊಡೆತವಾಗುತ್ತದೆ. ಸರಕಾರದ ಒಂದು ಸಂಸ್ಥೆಯೇ ಮುಂದೆ ನಿಂತು ಮೌಢ್ಯ ಬಿತ್ತಿ ಬೆಳೆಸಲು ಪೋಷಣೆ ಮಾಡಿದಂತಾಗುತ್ತದೆ ಎಂದು ಸಾಹಿತಿಗಳು ಬಹಿರಂಗ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಈ ರೀತಿಯ ನಡಾವಳಿಗಳು ರಾಜ್ಯದ ಎಲ್ಲಾ ವಿಶ್ವವಿದ್ಯಾಲಯಗಳಲ್ಲಿ ‘ಸಾಮಾನ್ಯ’ ಆಗುತ್ತಿರುವುದು ಆತಂಕಕಾರಿ. ಸರಕಾರವೇ ನೇಮಿಸಿದ ಕುಲಪತಿಗಳು ಧಾರ್ಮಿಕ ಆಚರಣೆಗಳ ಪೂಜಾರಿಯಂತೆ ಕಾರ್ಯ ನಿರ್ವಹಿಸುತ್ತಿರುವುದು ವಿಷಾದಕರ ಮತ್ತು ಖಂಡನೀಯ. ಕೂಡಲೇ ರಾಜ್ಯ ಸರಕಾರ ಕುಲಪತಿಗಳನ್ನು ಅಮಾನತ್ತುಗೊಳಿಸಿ, ರಾಜ್ಯದ ಎಲ್ಲಾ ವಿಶ್ವವಿದ್ಯಾಲಯಗಳು ಯಾವುದೇ ಧಾರ್ಮಿಕ ಆಚರಣೆಯನ್ನು ಸಂಸ್ಥೆಯ ಹೆಸರಿನಲ್ಲಿ, ಸರಕಾರಿ ಕಟ್ಟಡದಲ್ಲಿ ನಡೆಸಬಾರದು ಎಂದು ಸ್ಪಷ್ಟ ಆದೇಶ ನೀಡಬೇಕು ಎಂದು ಬಹಿರಂಗ ಪತ್ರದಲ್ಲಿ ಸಾಹಿತಿಗಳು ತಿಳಿಸಿದ್ದಾರೆ.
ಸಾಹಿತಿಗಳಾದ ಕುಂ.ವೀರಭದ್ರಪ್ಪ, ಮೂಡ್ನಾಕೂಡು ಚಿನ್ನಸ್ವಾಮಿ, ಬಸವರಾಜ ಸೂಳಿಭಾವಿ, ಡಾ.ಎಚ್.ಎಸ್.ಅನುಪಮಾ, ಕೆ.ಪಿ.ಸುರೇಶ, ನಟರಾಜ ಎಸ್. ಬೂದಾಳು ಹಾಗೂ ಶಿಕ್ಷಣ ತಜ್ಞ ನಿರಂಜನಾರಾಧ್ಯ ವಿ.ಪಿ., ದಲಿತ ಹೋರಾಟಗಾರ ಅನಿಲ ಹೊಸಮನಿ ಸೇರಿದಂತೆ ಹಲವರು ಮುಖ್ಯಮಂತ್ರಿಗಳ ಬಹಿರಂಗ ಪತ್ರಕ್ಕೆ ಬೆಂಬಲ ಸೂಚಿಸಿದ್ದಾರೆ.






