ಶಿಕ್ಷಣ ಸಚಿವರ ಹೇಳಿಕೆಗೆ ಆಕ್ರೋಶ: ಬಹಿರಂಗ ಕ್ಷಮೆಯಾಚನೆಗೆ ಶಾಲಾಭಿವೃದ್ಧಿ, ಮೇಲುಸ್ತುವಾರಿ ಸಮಿತಿಗಳ ಸಮನ್ವಯ ವೇದಿಕೆ ಆಗ್ರಹ

ಸಚಿವ ಮಧು ಬಂಗಾರಪ್ಪ
ಬೆಂಗಳೂರು: ಮಕ್ಕಳಿಗೆ ಶೂ, ಸಾಕ್ಸ್, ಪುಸ್ತಕ ಯಾವಾಗ ಸಿಗುತ್ತವೆ ಎಂದು ಕೇಳಿದರೆ ‘ಯೋಗ್ಯತೆ’ಯ ಪ್ರಶ್ನೆಯೇ? ಶಿಕ್ಷಣ ಸಚಿವರು ಕೂಡಲೇ ಬಹಿರಂಗವಾಗಿ ಕ್ಷಮೆಯಾಚಿಸಬೇಕು ಎಂದು ಕರ್ನಾಟಕ ರಾಜ್ಯ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಗಳ ಸಮನ್ವಯ ವೇದಿಕೆ ಆಗ್ರಹಿಸಿದೆ.
ರವಿವಾರ ಈ ಕುರಿತು ಕರ್ನಾಟಕ ರಾಜ್ಯ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಗಳ ಸಮನ್ವಯ ವೇದಿಕೆಯ ಮಹಾ ಪೋಷಕ ನಿರಂಜನಾರಾಧ್ಯ ವಿ.ಪಿ, ಅಧ್ಯಕ್ಷ ಶಂಭುಗೌಡ, ಪ್ರಧಾನ ಸಂಚಾಲಕಿ ಸೌಮ್ಯ.ಕೆ.ಆರ್., ಸಂಚಾಲಕ ಮಾಥ್ಯು ಮುನಿಯಪ್ಪ, ಉಪಾಧ್ಯಕ್ಷ ಸೈಯದ್ ಜಹಾಂಗೀರ್, ಕಾರ್ಯದರ್ಶಿ ಭಾಗ್ಯ, ಖಜಾಂಚಿ ದೇವರಾಜ ಕಿನ್ನಾಳ ರವಿವಾರ ಪ್ರಕಟಣೆ ನೀಡಿದ್ದಾರೆ.
ಕೊಪ್ಪಳ ಜಿಲ್ಲಾ ಪ್ರವಾಸದಲ್ಲಿದ್ದ ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರನ್ನು ಭೇಟಿಯಾಗಿ ಮಕ್ಕಳ ಪರವಾಗಿ ಮನವಿ ಸಲ್ಲಿಸಲು ಹೋದ ಕರ್ನಾಟಕ ರಾಜ್ಯ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಗಳ ಸಮನ್ವಯ ವೇದಿಕೆಯ ರಾಜ್ಯ ಖಜಾಂಚಿ ದೇವರಾಜ ಕಿನ್ನಾಳ ಅವರೊಂದಿಗೆ ಸಚಿವರು ನಡೆದುಕೊಂಡ ರೀತಿಯನ್ನು ಖಂಡಿಸಿದ್ದಾರೆ.
ದಲಿತ ಸಮುದಾಯದ ದೇವರಾಜ ಕಿನ್ನಾಳ ಅವರು ಶೈಕ್ಷಣಿಕ ವರ್ಷ ಮುಗಿಯುತ್ತಿದ್ದು ಮಕ್ಕಳಿಗೆ ಶೂ, ಸಾಕ್ಸ್ ಮತ್ತು ಪುಸ್ತಕಗಳು ಇನ್ನೂ ತಲುಪಿಲ್ಲ ಎನ್ನುವುದು ಹಾಗೂ ಸರಕಾರಿ ಶಾಲೆಗಳನ್ನು ಖಾಸಗಿ ಶಾಲೆಗಳಿಗೆ ದತ್ತು ನೀಡುವ ಕ್ರಮಕ್ಕೆ ವೇದಿಕೆಯ ವಿರೋಧ ವ್ಯಕ್ತಪಡಿಸಿರುವುದನ್ನು ಶಿಕ್ಷಣ ಸಚಿವರ ಗಮನಕ್ಕೆ ತರಲು ಹೋಗಿದ್ದರು. ಈ ಕುರಿತು ಮನವಿ ಸಲ್ಲಿಸಲು ಮುಂದಾದಾಗ ಸಚಿವರು ವೇದಿಕೆಯ ಪದಾಧಿಕಾರಿಯೊಬ್ಬರನ್ನು ‘ಯೋಗ್ಯತೆ ಇಲ್ಲದವರು’ ಎಂದು ಜರಿದದ್ದು ಅಮಾನವೀಯ ಮತ್ತು ಆಕ್ಷೇಪಣಾರ್ಹ ನಡೆಯಾಗಿದೆ ಎಂದು ಖಂಡಿಸಿದ್ದಾರೆ.
ಸಚಿವರೊಬ್ಬರು ಸಾರ್ವಜನಿಕವಾಗಿ ಹೇಗೆ ನಡೆದುಕೊಳ್ಳಬೇಕು ಎಂಬ ಬಗ್ಗೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ತಮ್ಮ ಸಚಿವರಿಗೆ ಹೇಳಿ ಕೊಡಬೇಕು. ಶಿಕ್ಷಣ ಸಚಿವರು ಈ ಅವಮಾನಕರ ಮಾತುಗಳಿಗಾಗಿ ಕೂಡಲೇ ಬಹಿರಂಗವಾಗಿ ಕ್ಷಮೆಯಾಚಿಸಬೇಕು ಎಂದು ಎಂದು ಆಗ್ರಹಿಸಿದ್ದಾರೆ.
ಮಕ್ಕಳಿಗೆ ಪುಸ್ತಕ ತಲುಪಿಲ್ಲವೆಂದು ಪಾಲಕರು ಹೇಳಿದಾಗ, ಯಾವ ಶಾಲೆಯ ಎಷ್ಟು ಮಕ್ಕಳಿಗೆ ಪುಸ್ತಕ ಬಾಕಿ ಇದೆ, ಅವು ಯಾವಾಗ ತಲುಪುತ್ತವೆ ಎಂದು ಇಲಾಖೆಯಿಂದ ಉತ್ತರ ಕೊಡಿಸುವ ಅಧಿಕಾರ ಸಚಿವರಿಗಿದೆ. ಆ ಅಧಿಕಾರದೊಂದಿಗೆ ಪಾಲಕರ ಮಾತನ್ನು ಗೌರವದಿಂದ ಆಲಿಸುವ ಹೊಣೆಗಾರಿಕೆಯೂ ಬರುತ್ತದೆ. ಮಕ್ಕಳ ಪರವಾಗಿ ಪ್ರಶ್ನೆ ಕೇಳಿದವರ ಯೋಗ್ಯತೆಯನ್ನೇ ಪ್ರಶ್ನಿಸಿದರೆ ಹೇಗೆ? ಎಂದು ಪ್ರಶ್ನಿಸಿದ್ದಾರೆ.
ಸರ್ಕಾರಿ ಶಾಲೆಗಳ ಭವಿಷ್ಯದ ಕುರಿತು ಅಲ್ಲಿನ ಮಕ್ಕಳ ಪಾಲಕರಿಗೆ ನೇರವಾಗಿ ಮಾತಾಡುವ ಹಕ್ಕಿದೆ. ಸರಕಾರಿ ಶಾಲೆಗಳನ್ನು ಖಾಸಗಿ ಶಾಲೆಗಳಿಗೆ ದತ್ತು ನೀಡುವ ಬಗ್ಗೆ ದೇವರಾಜ ಕಿನ್ನಾಳ ಅವರು ಎತ್ತಿರುವ ಆಕ್ಷೇಪಗಳಿಗೆ ಸರಕಾರ ಸಾರ್ವಜನಿಕವಾಗಿ ಉತ್ತರಿಸಬೇಕು. ಪ್ರತಿ ಶಾಲೆಯ ಅಗತ್ಯಗಳನ್ನು ಅದರ ಎಸ್ಡಿಎಂಸಿ ಸಿದ್ಧಪಡಿಸುವ ಶಾಲಾಭಿವೃದ್ಧಿ ಯೋಜನೆಯ ಮೂಲಕ ಗುರುತಿಸಿ, ಅವುಗಳನ್ನು ಪೂರೈಸಲು ಬೇಕಾದ ಹಣ, ಶಿಕ್ಷಕರು ಮತ್ತು ಸೌಲಭ್ಯಗಳನ್ನು ಒದಗಿಸುವುದು ಸರಕಾರದ ಹೊಣೆ. ತನ್ನ ಶಾಲೆಯ ಬಗ್ಗೆ ಪಾಲಕರು ಸಲ್ಲಿಸುವ ಮನವಿಗೆ ಶಿಕ್ಷಣ ಇಲಾಖೆಯ ಬಾಗಿಲು ಸದಾ ತೆರೆದಿರಬೇಕು ಎಂದು ತಿಳಿಸಿದ್ದಾರೆ.
ಶಿಕ್ಷಣ ಸಚಿವರು ಬಹಿರಂಗವಾಗಿ ಕ್ಷಮೆಯಾಚಿಸಬೇಕು. ವೇದಿಕೆ ಮನವಿಗೆ ಲಿಖಿತ ಉತ್ತರ ನೀಡಬೇಕು ಮತ್ತು ಬಾಕಿ ಇರುವ ಶೂ, ಸಾಕ್ಸ್ ಹಾಗೂ ಪುಸ್ತಕಗಳನ್ನು ಮಕ್ಕಳಿಗೆ ತಲುಪಿಸುವ ದಿನಾಂಕವನ್ನು ಪ್ರಕಟಿಸಬೇಕು. ಸರಕಾರಿ ಶಾಲೆಗಳನ್ನು ಖಾಸಗಿ ಶಾಲೆಗಳಿಗೆ ದತ್ತು ನೀಡುವ ಕ್ರಮವನ್ನು ಸರಕಾರ ಹಿಂಪಡೆಯಬೇಕು ಎಂದು ಕರ್ನಾಟಕ ರಾಜ್ಯ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಗಳ ಸಮನ್ವಯ ವೇದಿಕೆಯ ಪದಾಧಿಕಾರಿಗಳು ಒತ್ತಾಯಿಸಿದ್ದಾರೆ.






