ಬೆಂಗಳೂರು | ಮಾಲಕನಿಗೆ ಗುಂಡು ಹಾರಿಸಿ ಚಿನ್ನಾಭರಣ ದರೋಡೆ ಪ್ರಕರಣ: ಓರ್ವ ಆರೋಪಿ ಸೆರೆ
ಹೈದರಾಬಾದ್‍ನತ್ತ ಹೊರಟಿದ್ದ ಆರೋಪಿ

ಬೆಂಗಳೂರು, ಅ. 13: ಚಿನ್ನದ ಅಂಗಡಿ ಮಾಲಕನ ಮೇಲೆ ಗುಂಡು ಹಾರಿಸಿ 1 ಕೆ.ಜಿ ಚಿನ್ನಾಭರಣದೊಂದಿಗೆ ಪರಾರಿಯಾಗಿದ್ದ ಪ್ರಕರಣದಲ್ಲಿ ಒಬ್ಬ ಆರೋಪಿಯನ್ನು ಇಲ್ಲಿನ ಬ್ಯಾಡರಹಳ್ಳಿ ಠಾಣಾ ಪೊಲೀಸರು ಬಂಧಿಸಿರುವುದು ವರದಿಯಾಗಿದೆ.
ಕೃತ್ಯದ ಬಳಿಕ ಹೈದರಾಬಾದ್‍ಗೆ ವಿಮಾನ ಹತ್ತುವ ಯತ್ನದಲ್ಲಿದ್ದ ಹುಸೇನ್ ಎಂಬಾತನನ್ನು ಬಂಧಿಸಲಾಗಿದ್ದು, ಆತನ ಬಳಿ ಸ್ವಲ್ಪ ಪ್ರಮಾಣದ ಚಿನ್ನಾಭರಣ ದೊರಕಿದೆ. ಇನ್ನುಳಿದ ಆರೋಪಿಗಳಾದ ಸಿಕಂದರ್, ಶಿವ ಹಾಗೂ ವಿಕಾಸ್ ನಾಪತ್ತೆಯಾಗಿದ್ದು, ಪೊಲೀಸರು ಶೋಧ ಕಾರ್ಯ ಮುಂದುವರಿಸಿದ್ದಾರೆ.
ಸಣ್ಣಪುಟ್ಟ ಕಳ್ಳತನ ಕೃತ್ಯಗಳಲ್ಲಿ ಭಾಗಿಯಾಗಿದ್ದ ಶಿವನಿಗೆ ಜೈಲಿನಲ್ಲಿ ಹೈದರಾಬಾದ್ ಮೂಲದ ಹುಸೇನ್, ಸಿಕಂದರ್ ಹಾಗೂ ವಿಕಾಸ್‍ನ ಪರಿಚಯವಾಗಿತ್ತು. ಒಟ್ಟಿಗೆ ಸೇರಿ ದರೋಡೆಗೆ ಸಂಚು ರೂಪಿಸಿದ್ದ ಆರೋಪಿಗಳು, ಅ.12ರ ಗುರುವಾರ ಬೆಳಗ್ಗೆ ಎರಡು ದ್ವಿಚಕ್ರ ವಾಹನಗಳಲ್ಲಿ ಬ್ಯಾಡರಹಳ್ಳಿ ಠಾಣಾ ವ್ಯಾಪ್ತಿಯ ಪೈಪ್ ಲೈನ್ ರಸ್ತೆಯಲ್ಲಿರುವ ವಿನಾಯಕ ಜ್ಯುವೆಲ್ಲರ್ಸ್ ಅಂಗಡಿಗೆ ಬಂದಿದ್ದರು. ನಂತರ ಮಾಲಕ ಮನೋಜ್ ಲೋಹರ್ (30) ಮೇಲೆ ಗುಂಡು ಹಾರಿಸಿ 1 ಕೆ.ಜಿ ಚಿನ್ನಾಭರಣದೊಂದಿಗೆ ಪರಾರಿಯಾಗಿದ್ದರು.
ಈ ಸಂಬಂಧ ಪ್ರಕರಣ ದಾಖಲಿಸಿಕೊಂಡ ಬ್ಯಾಡರಹಳ್ಳಿ ಠಾಣಾ ಪೊಲೀಸರು ತ್ವರಿತ ಕಾರ್ಯಾಚರಣೆ ಕೈಗೊಂಡು, ಹೈದರಾಬಾದ್‍ನತ್ತ ಹೊರಟಿದ್ದ ಹುಸೇನ್ ಎಂಬಾತನನ್ನು ಬಂಧಿಸಿದ್ದು, ವಿಚಾರಣೆಗೆ ಒಳಪಡಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.





